ಅಕ್ರಮ ಮರಳುಗಾರಿಕೆಗೆ ದಾಳಿ
Update: 2016-12-13 22:15 IST
ಬ್ರಹ್ಮಾವರ, ಡಿ.13: ಕುದಿ ಗ್ರಾಮದ ಸೀತಾನದಿಯಲ್ಲಿ ಅಕ್ರಮವಾಗಿ ನಡೆಯುತ್ತಿದ್ದ ಮರಳುಗಾರಿಕೆಗೆ ಡಿ.12ರಂದು ಮಧ್ಯಾಹ್ನ ವೇಳೆ ದಾಳಿ ನಡೆಸಿದ ಅಧಿಕಾರಿಗಳ ತಂಡ ಸೊತ್ತುಗಳನ್ನು ವಶಪಡಿಸಿಕೊಂಡಿದೆ.
ಕುದಿ ಗ್ರಾಮದ ಹೊರ್ಲಾಳಿಯ ಸುಪ್ರೀತ್ ಶೆಟ್ಟಿ ಎಂಬವರು ಯಾಂತ್ರೀ ಕೃತ ದೋಣಿ ಬಳಸಿ ಅಕ್ರಮವಾಗಿ ಮರಳುಗಾರಿಕೆ ನಡೆಸುತ್ತಿರುವ ಬಗ್ಗೆ ಖಚಿತ ಮಾಹಿತಿಯಂತೆ ಉಡುಪಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಭೂ ವಿಜ್ಞಾನಿ ಮಹೇಶ ನೇತೃತ್ವದಲ್ಲಿ ವಿಶೇಷ ತಹಶೀಲ್ದಾರರು, ಕಂದಾಯ ನಿರೀಕ್ಷಕರು, ಗ್ರಾಮಲೆಕ್ಕಿಗರು, ಗ್ರಾಮ ಸಹಾಯಕರ ತಂಡ ದಾಳಿ ನಡೆಸಿ, ಮರಳುಗಾರಿಕೆಗೆ ಬಳಸಿದ ಯಾಂತ್ರೀಕೃತ ಡೀಸೆಲ್ ಬೋಟ್, ಕಬ್ಬಿಣದ ಪೈಪು, ಕಬ್ಬಿಣದ ಜೆರಡಿ, 8 ಮೆಟ್ರಿಕ್ ಟನ್ ಮರಳನ್ನು ವಶಪಡಿಸಿಕೊಂಡಿದೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.