ಜೆಡಿಎಸ್ ಪಕ್ಷದ ಬಲವರ್ಧನೆಗೆ ಶ್ರಮ: ಯೋಗೀಶ್ ಶೆಟ್ಟಿ

Update: 2016-12-13 17:02 GMT

ಉಡುಪಿ, ಡಿ.13: ಉಡುಪಿ ಜಿಲ್ಲೆಯಲ್ಲಿ ಪಕ್ಷವನ್ನು ತಳಮಟ್ಟದಿಂದ ಸಂಘಟಿಸಿ ಈ ಹಿಂದೆ ಬಿಟ್ಟು ಹೋದ ಅನೇಕ ನಾಯಕರನ್ನು ಮನವೊಲಿಸಿ ಪಕ್ಷಕ್ಕೆ ಕರೆತಂದು ಪಕ್ಷದ ಬಲವರ್ಧನೆಗೆ ಶ್ರಮಿಸಲಾಗುವುದು ಎಂದು ಜೆಡಿಎಸ್ ನೂತನ ಉಡುಪಿ ಜಿಲ್ಲಾಧ್ಯಕ್ಷ ಯೋಗೀಶ್ ಶೆಟ್ಟಿ ಕಾಪು ತಿಳಿಸಿದ್ದಾರೆ.

ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ರಾಜಕಾರಣದಲ್ಲಿ ರಾಜಕೀಯ ಧ್ರುವೀಕರಣ ನಡೆದಿದ್ದು, ಮುಂದಿನ ಚುನಾವಣೆಯಲ್ಲಿ ಕುಮಾರಸ್ವಾಮಿ ಮುಖ್ಯಮಂತ್ರಿಯಾಗುವುದು ಖಚಿತ ವಾಗಿದೆ. ಆ ನಿಟ್ಟಿನಲ್ಲಿ ಉಡುಪಿ ಜಿಲ್ಲೆಯಿಂದ ಅವರ ಕೈ ಬಲಪಡಿಸುವ ಕಾರ್ಯ ಮಾಡಲಾಗುವುದು ಎಂದರು.

ಮಾಜಿ ಸಚಿವ ಜಯಪ್ರಕಾಶ್ ಹೆಗ್ಡೆ ಅವರನ್ನು ಕೂಡ ಪಕ್ಷಕ್ಕೆ ಕರೆ ತರುವ ಬಗ್ಗೆ ಚರ್ಚೆಗಳು ನಡೆಯುತ್ತಿದ್ದು, ಈ ಕುರಿತು ಅವರೊಂದಿಗೆ ಮಾತುಕತೆ ನಡೆಸಲಾಗಿದೆ. ಈ ಬಗ್ಗೆ ಯಾವುದೇ ನಿರ್ಧಾರ ಆಗಿಲ್ಲ ಎಂದ ಅವರು, ಸದ್ಯದಲ್ಲೇ ಉಡುಪಿಯಲ್ಲಿ ಪಕ್ಷದ ಕಚೇರಿ ಆರಂಭಿಸಿ, ನಂತರ ಅಧ್ಯಕ್ಷರ ಪದಗ್ರಹಣ ಸಮಾರಂಭ ನಡೆಸಲಾಗುವುದು. ಆ ಬಳಿಕ ಪಕ್ಷದ ನೂತನ ಪದಾಧಿಕಾರಿಗಳನ್ನು ನೇಮಕ ಮಾಡಲಾಗುವುದು ಎಂದರು.

ಡಿ.16ರಂದು ಪಕ್ಷದ ರಾಜ್ಯಾಧ್ಯಕ್ಷ ಕುಮಾರಸ್ವಾಮಿಯವರ 57ನೆ ಹುಟ್ಟು ಹಬ್ಬವನ್ನು ಉಡುಪಿಯ ಆಶಾ ನಿಲಯ ವಿಶೇಷ ಮಕ್ಕಳ ಶಾಲೆಯಲ್ಲಿ ಆಚರಿಸಲಾಗುವುದು ಎಂದು ಅವರು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಜೆಡಿಎಸ್ ಮುಖಂಡರಾದ ವಾಸುದೇವ ರಾವ್, ಶಾಲಿನಿ ಶೆಟ್ಟಿ ಕೆಂಚನೂರು, ಜಯಕುಮಾರ್ ಪರ್ಕಳ, ಸುಧಾಕರ ಶೆಟ್ಟಿ, ಶಾಹಿದ್, ಗಂಗಾಧರ ಬಿರ್ತಿ, ಇಸ್ಮಾಯಿಲ್, ರಝಾಕ್ ಉಚ್ಚಿಲ, ಅಣ್ಣಯ್ಯ ನಾಯಕ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News