ಕೋಟಿ-ಚೆನ್ನಯರ ಮೂಲಸ್ಥಾನ ‘ಗೆಜ್ಜೆಗಿರಿ’ ಯಲ್ಲಿ ಭಕ್ತರ ಸಮಾಲೋಚನಾ ಸಭೆ

Update: 2016-12-13 17:48 GMT

ಪುತ್ತೂರು ,ಡಿ.13 : ತುಳುನಾಡಿನ ವೀರಪುರುಷರೆಂಬ ಐಸಿಹಾಸಿಕ ಹಿನ್ನಲೆಯುಳ್ಳ ಕೋಟಿ -ಚೆನ್ನಯರ ಮೂಲಸ್ಥಾನ ಕ್ಷೇತ್ರವಾದ ಪುತ್ತೂರು ತಾಲೂಕಿನ ಪಡುಮಲೆಯ ಗೆಜ್ಜೆಗಿರಿ ನಂದನ ಬಿತ್ತ್‌ಲ್‌ನಲ್ಲಿ ಭಾನುವಾರ ಭಕ್ತರ ಸಮಾಲೋಚನಾ ಸಭೆ ಕ್ಷೇತ್ರದ ಆನುವಂಶಿಕ ಮೊಕ್ತೇಸರ ಶ್ರೀಧರ ಪೂಜಾರಿ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.

ಮೂಲ್ಕಿ ಯುವವಾಹಿನಿ, ಮೂಲ್ಕಿ ಬಿಲ್ಲವ ಸಂಘ ಮತ್ತು ಉಡುಪಿಯ ಬಿಲ್ಲವ ಸಮಾಜ ಬಾಂಧವರು ಸಭೆಯಲ್ಲಿ ಭಾಗವಹಿಸಿದ್ದರು. ಗೆಜ್ಜೆಗಿರಿ ನಂದನ ಬಿತ್ತ್‌ಲ್‌ನಲ್ಲಿ ಕೋಟಿ ಚೆನ್ನಯ ಮೂಲಸ್ಥಾನ ಗರಡಿ, ಗುರು ಸಾಯನ ಬೈದ್ಯರು - ಮಾತೆ ದೇಯಿ ಬೈದ್ಯೆತಿ ಧರ್ಮ ಚಾವಡಿ, ಬೆರ್ಮೆರ್ ಗುಂಡ, ದೇಯಿ ಬೈದ್ಯೆತಿ ಮಹಾ ಸಮಾಧಿ, ಚಾರಿತ್ರಿಕ ಸರೋಳಿ ಸೈಮಂಜ ಕಟ್ಟೆ, ಆದಿ ದೈವ ಧೂಮಾವತಿ, ಕುಪ್ಪೆ ಪಂಜುರ್ಲಿ ಸಪರಿವಾರ ದೈವಗಳ ಸ್ಥಾನ ಪುನರುತ್ಥಾನ ಕಾರ್ಯಗಳು ನಡೆಯಲಿದ್ದು, ಇದಕ್ಕೆ ಭಕ್ತರ ಸರ್ವ ಸಹಕಾರ ಬೇಕು ಎಂದು ಶ್ರೀಧರ ಪೂಜಾರಿ ಅವರು ವಿನಂತಿಸಿಕೊಂಡರು.
ಕಳೆದ ಒಂದು ತಿಂಗಳ ಅವಧಿಯಲ್ಲಿ ಪುತ್ತೂರು, ಮಂಗಳೂರು, ಬೆಳ್ತಂಗಡಿ, ಬಂಟ್ವಾಳ, ಮೂಡುಬಿದರೆ, ಕಾರ್ಕಳ, ಉಡುಪಿ, ಕಾಸರಗೋಡು, ಸುಳ್ಯ, ಮುಂಬೈ ಪ್ರದೇಶಗಳ ಭಕ್ತರ ತಂಡ ಭೇಟಿ ನೀಡಿ ಕ್ಷೇತ್ರದಲ್ಲಿ ಸಮಾಲೋಚನಾ ಸಭೆ ನಡೆಸಿದ್ದು, ಎಲ್ಲ ಕಡೆಯಿಂದಲೂ ಸಹಕಾರದ ಭರವಸೆ ಸಿಕ್ಕಿದೆ ಎಂದು ಅವರು ತಿಳಿಸಿದರು.

  ಮೂಲ್ಕಿ ಬಿಲ್ಲವ ಸಂಘದ ಪ್ರಧಾನ ಕಾರ್ಯದರ್ಶಿ ವಿಜಯ ಕುಮಾರ್ ಕುವೆವೂರು ಅವರು ಮಾತನಾಡಿ, ಈಗಾಗಲೇ ಮೂಲ್ಕಿ ಸಂಘದಲ್ಲಿ ಗೆಜ್ಜೆಗಿರಿ ಕ್ಷೇತ್ರದ ಪುನರುತ್ಥಾನದ ಬಗ್ಗೆ ಸಭೆ ನಡೆಸಲಾಗಿದೆ. ಬಿಲ್ಲವರ ಮಹಾ ಮಂಡಲದಲ್ಲೂ ವಿಶೇಷ ಸಮಾಲೋಚನಾ ಸಭೆ ನಡೆಸಲಾಗಿದೆ. ಅದರ ಮುಂದಿನ ಭಾಗವಾಗಿ ನಾವು ಕ್ಷೇತ್ರಕ್ಕೆ ಬಂದಿದ್ದೇವೆ. ಕೋಟಿ - ಚೆನ್ನಯರು ಬದುಕಿನ ಬಹುಪಾಲನ್ನು ಕಳೆದ ಈ ಮನೆ, ಮಾತೆ ದೇಯಿ ಬೈದ್ಯೆತಿಗೆ ಪುನರ್ಜನ್ಮ ನೀಡಿದ ತಾಣವಾಗಿದೆ. ಮಾವ ಸಾಯನ ಬೈದ್ಯರ ಮನೆಯೂ ಇದೇ ಆಗಿರುವ ಕಾರಣ ಇದು ಕೋಟಿ - ಚೆನ್ನಯರ ಪಾಲಿಗೆ ಸ್ವಂತ ಮನೆ ಮಾತ್ರವಲ್ಲ, ಅವರ ಮೂಲಸ್ಥಾನವೂ ಆಗುತ್ತದೆ. ಹೀಗಾಗಿ ಸರ್ವ ಕೋಟಿ- ಚೆನ್ನಯ ಭಕ್ತರಿಗೆ ಇದು ಪರಮ ಪಾವನ ಕ್ಷೇತ್ರವಾಗಿದೆ. ಇಲ್ಲಿನ ಪುನರುತ್ಥಾನ ಕಾರ್ಯಕ್ಕೆ ಮೂಲ್ಕಿ ಸಂಘ ಸರ್ವ ರೀತಿಯ ನೆರವು ನೀಡುತ್ತದೆ ಎಂದರು.

ಯುವವಾಹಿನಿ ಅಧ್ಯಕ್ಷ ಚೇತನ್ ಕುಮಾರ್, ಕಾರ್ಯದರ್ಶಿ ಸತೀಶ್ ಕಿಲ್ಪಾಡಿ ಮಾತನಾಡಿ, ಯುವ ವಾಹಿನಿಯ ಎಲ್ಲ ಘಟಕಗಳು ಗೆಜ್ಜೆಗಿರಿ ಕ್ಷೇತ್ರಕ್ಕೆ ಸರ್ವ ರೀತಿಯ ನೆರವು ನೀಡುವ ಭರವಸೆ ನೀಡಿವೆ. ನಮ್ಮ ಘಟಕವೂ ಕೈ ಜೋಡಿಸಲಿದೆ ಎಂದರು.

ಸಾಂಸ್ಕೃತಿಕ ಸಂಘಟಕ ಚಂದ್ರಶೇಖರ ಸುವರ್ಣ ಮೂಲ್ಕಿ ಅವರ ನೇತೃತ್ವದಲ್ಲಿ ಕ್ಷೇತ್ರಕ್ಕೆ ಭಕ್ತಿಪೂರ್ವಕ ಕಾಣಿಕೆ ಸಮರ್ಪಿಸಿ ಪ್ರಸಾದ ಪಡೆಯಲಾಯಿತು. ಕ್ಷೇತ್ರದ ಹಿರಿಯರಾದ ಲೀಲಾವತಿ ಪೂಜಾರಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News