×
Ad

ಪುತ್ತೂರು: ಕರ್ಣಾಟಕ ಬ್ಯಾಂಕ್ ಸ್ಥಳಾಂತರಿತ ಶಾಖೆ ಉದ್ಘಾಟನೆ

Update: 2016-12-14 13:47 IST

ಪುತ್ತೂರು, ಡಿ.14: ಕರ್ಣಾಟಕ ಬ್ಯಾಂಕ್ ಪ್ರಸ್ತುತ ವಾರ್ಷಿಕ 93,000 ಕೋ.ರೂ. ವ್ಯವಹಾರ ನಡೆಸುತ್ತಿದ್ದು, ಮಾರ್ಚ್ ಅಂತ್ಯದ ಒಳಗಾಗಿ ಇದನ್ನು ಒಂದು ಲಕ್ಷ ಕೋಟಿ ರೂ.ಗೆ ಹೆಚ್ಚಿಸುವ ಗುರಿ ಹೊಂದಲಾಗಿದೆ ಎಂದು ಬ್ಯಾಂಕ್‌ನ ಆಡಳಿತ ನಿರ್ದೇಶಕರು ಮತ್ತು ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಪಿ.ಜಯರಾಮ ಭಟ್ ಹೇಳಿದರು.
ಅವರು ಮಂಗಳವಾರ ಪುತ್ತೂರು ಶ್ರೀಮಹಾಲಿಂಗೇಶ್ವರ ದೇವಸ್ಥಾನ ಬಳಿಯ ಎಸ್‌ಬಿಬಿ ಸೆಂಟರ್ ಕಟ್ಟಡದಲ್ಲಿ ನಡೆದ ಕರ್ಣಾಟಕ ಬ್ಯಾಂಕ್‌ನ ಸ್ಥಳಾಂತರಗೊಂಡ ಪುತ್ತೂರು ಶಾಖೆಯ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ರಾಷ್ಟ್ರದಾದ್ಯಂತ 737 ಶಾಖೆಗಳಲ್ಲಿ ಕರ್ಣಾಟಕ ಬ್ಯಾಂಕ್ ಕಾರ್ಯನಿರ್ವಹಿಸುತ್ತಿದ್ದು, 1,330 ಎಟಿಎಂಗಳನ್ನು ಹೊಂದಿದೆ. ಶಾಖೆಗಳ ಸಂಖ್ಯೆಯನ್ನು ಪ್ರಸಕ್ತ ಹಣಕಾಸು ವರ್ಷದ ಅಂತ್ಯದೊಳಗೆ 760ಕ್ಕೆ ಹೆಚ್ಚಿಸುವ ಗುರಿ ಹೊಂದಲಾಗಿದೆ. ಹೆಚ್ಚಿಸಲಾಗುವ ಶಾಖೆಗಳ ಪೈಕಿ ಶೇ.50 ಶಾಖೆಗಳು ಕರ್ನಾಟಕದಲ್ಲೇ ಆರಂಭಿಸಲಾಗುತ್ತಿದೆ. ಇದರೊಂದಿಗೆ ಮಿಶನ್ -2020 ಎಂಬ ಗುರಿ ಹೊಂದಲಾಗಿದ್ದು, 2020ರ ವೇಲೆಗೆ ಬ್ಯಾಂಕ್‌ನ ವ್ಯವಹಾರವನ್ನು1 ಲಕ್ಷದ 30 ಸಾವಿರ ಕೋಟಿ ರೂ.ಗೆ ಏರಿಸಲು ಯೋಜನೆ ರೂಪಿಸಲಾಗಿದೆ ಎಂದರು.

ಎಡನೀರು ಮಠಾಧೀಶ ಶ್ರೀಕೇಶವಾನಂದ ಭಾರತಿ ಮಹಾಸ್ವಾಮೀಜಿ ಬ್ಯಾಂಕ್‌ನ ಸ್ಥಳಾಂತರಿತ ಶಾಖೆ ಮತ್ತು ಮಿನಿ ಇ- ಲಾಬಿ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ಕರ್ಣಾಟಕ ಬ್ಯಾಂಕ್ ಹಣಕಾಸು ವ್ಯವಹಾರದ ಜತೆಗೆ ಸಾಮಾಜಿಕ ಸೇವಾ ಕಾರ್ಯಗಳಿಗೆ ಆದ್ಯತೆ ನೀಡುತ್ತಿರುವುದು ಶ್ಲಾಘನೀಯ ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಬ್ಯಾಂಕ್‌ನ ಮುಖ್ಯ ಪ್ರಬಂಧಕ ಮಹಾಬಲೇಶ್ವರ ಭಟ್, 1924ರಲ್ಲಿ ಕರ್ಣಾಟಕ ಬ್ಯಾಂಕ್ ಮಂಗಳೂರಿನ ಡೊಂಗರಕೇರಿಯಲ್ಲಿ ಆರಂಭಗೊಂಡಿದ್ದು, ವ್ಯಾಸರಾಯ ಆಚಾರ್ ಸಂಸ್ಥಾಪಕ ಅಧ್ಯಕ್ಷರಾಗಿದ್ದರು. ಆ ಶಾಖೆ ಇಂದಿಗೂ ಸಂಸ್ಥಾಪಕ ಶಾಖೆ ಎಂಬ ಮಾನ್ಯತೆ ಹೊಂದಿದೆ. ನಂತರ ಚೆನ್ನೈನ ತಂಬುಚೆಟ್ಟಿ ರಸ್ತೆಯಲ್ಲಿ ಮೊದಲ ಶಾಖೆ ತೆರೆಯಲಾಯಿತು. ಉಡುಪಿ ಹಾಗೂ ಕುಂದಾಪುರಗಳಲ್ಲಿ 2 ಮತ್ತು 3ನೆ ಶಾಖೆ ತೆರೆದುಕೊಂಡಿತು. 1944ರಲ್ಲಿ ಪುತ್ತೂರಿನಲ್ಲಿ 4ನೆ ಶಾಖೆ ತೆರೆಯಿತು. ಈ ಶಾಖೆಗೆ ಇದೀಗ 72 ವರ್ಷ ತುಂಬಿದೆ. 1973 ಮತ್ತು 1988ರಲ್ಲಿ ಎರಡು ಬಾರಿ ಪುತ್ತೂರು ಶಾಖೆ ಸ್ಥಳಾಂತರಗೊಂಡಿದ್ದು, ಈಗ ಮೂರನೆ ಬಾರಿ ಸ್ಥಳಾಂತರಗೊಳ್ಳುತ್ತದೆ. ಬ್ಯಾಂಕಿನ ಸ್ಥಾಪಕ ಅಧ್ಯಕ್ಷ ವ್ಯಾಸರಾಯ ಆಚಾರ್ ಅವರೇ 1944ರಲ್ಲಿ ಪುತ್ತೂರು ಶಾಖೆಯನ್ನು ಉದ್ಘಾಟಿಸಿದ್ದರು. 1994ರಲ್ಲಿ ಸುವರ್ಣ ಮಹೋತ್ಸವ ನಡೆದಿದ್ದು, ಹಿರಿಯ ಸಾಹಿತಿ ಡಾ.ಕೆ.ಶಿವರಾಮ ಕಾರಂತ ಉದ್ಘಾಟಿಸಿದ್ದರು. ವಿಶೇಷವೆಂದರೆ ಈಗ ಕರ್ಣಾಟಕ ಬ್ಯಾಂಕ್ ಬಳಸುತ್ತಿರುವ ಲೋಗೊ(ಚಿಹ್ನೆ)ಯನ್ನು ಡಾ.ಕೋಟ ಶಿವರಾಮ ಕಾರಂತರು ಬರೆದುಕೊಟ್ಟಿದ್ದರು. ಭದ್ರತೆಯ ಸಂಕೇತವಾಗಿ ಅದನ್ನು ಬಳಸಲಾಗುತ್ತಿದೆ ಎಂದರು.

ಮಂಗಳೂರು ವಲಯದ ಹಿರಿಯ ಅಧಿಕಾರಿ ನಾಗರಾಜ ಹೆಬ್ಬಾರ್ ಸ್ವಾಗತಿಸಿದರು. ಆಶಾ ಜಿ. ಕಾರ್ಯಕ್ರಮ ನಿರ್ವಹಿಸಿದರು. ಎಜಿಎಂ ಪ್ರಮೋದ್ ಶೆಟ್ಟಿ, ಪುತ್ತೂರು ಶಾಖೆಯ ಮ್ಯಾನೇಜರ್ ಶ್ರೀಹರಿ ಸಹಕರಿಸಿದರು. ಗ್ರಾಹಕರ ಪರವಾಗಿ ಬಂಗಾರಡ್ಕ ರಾಮ ಭಟ್ ಮತ್ತು ಎನ್.ಕೆ.ಜಗನ್ನಿವಾಸ ರಾವ್ ಅನಿಸಿಕೆ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಕಟ್ಟಡ ಮಾಲಕ ವಾಸುದೇವ ಭಟ್‌ರನ್ನು ಗೌರವಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News