ಪಕ್ಷ ಸಂಘಟನೆಗಾಗಿ ಜೆಡಿಎಸ್‌ನಿಂದ ರ್ಯಾಲಿ: ಅಕ್ಷಿತ್

Update: 2016-12-14 12:17 GMT

ಮಂಗಳೂರು, ಡಿ.14: ಪಕ್ಷದ ಬಲವರ್ಧನೆ ಹಾಗೂ ಪಕ್ಷ ಸಂಘಟನೆಗಾಗಿ ಎರಡು ಹಂತಗಳಲ್ಲಿ ಮಂಗಳೂರಿನಲ್ಲಿ ರ್ಯಾಲಿ ನಡೆಯಲಿದೆ ಎಂದು ಯುವ ಜನತಾದಳ (ಜಾ)ದ ಜಿಲ್ಲಾಧ್ಯಕ್ಷ ಅಕ್ಷಿತ್ ಸುವರ್ಣ ಹೇಳಿದ್ದಾರೆ.

ಪಕ್ಷದ ಕಚೇರಿಯಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಥಮ ಹಂತದ ರ್ಯಾಲಿಯು ಜನವರಿ ಮೊದಲ ವಾರದಲ್ಲಿ ನಡೆಯಲಿದೆ. ಈ ರ್ಯಾಲಿಯು ಮಂಗಳೂರಿನಿಂದ ಮೂಡಬಿದ್ರೆ ವಿಧಾನಸಭಾ ಕ್ಷೇತ್ರದವರೆಗೆ ಹಾಗೂ ದ್ವಿತೀಯ ಹಂತದ ರ್ಯಾಲಿಯು ಮಂಗಳೂರಿನಿಂದ ಸುಳ್ಯದ ವರೆಗೆ ನಡೆಯಲಿವೆ ಎಂದರು.

ನೋಟು ಅಮಾನ್ಯ: ಕೇಂದ್ರಕ್ಕೆ ಮನವಿ

ಕೇಂದ್ರ ಸರಕಾರದ ನೋಟು ಅಮಾನ್ಯದಿಂದ ಜನಸಾಮಾನ್ಯರು ತೊಂದರೆಗೆ ಸಿಲುಕಿದ್ದಾರೆ. ಕಪ್ಪು ಹಣದ ಬಗ್ಗೆ ಕೇಂದ್ರದ ನಿಲುವಿಗೆ ನಮ್ಮ ವಿರೋಧವಿಲ್ಲ. ಆದರೆ, ನೋಟು ಅಮಾನ್ಯ ಜಾರಿ ವ್ಯವಸ್ಥಿತವಾಗಿಲ್ಲ. ದಿಢೀರ್ ನೋಟು ಅಮಾನ್ಯಗೊಳಿಸಿರುವುದರಿಂದ ಜನರು ನಷ್ಟ, ಕಷ್ಟಗಳನ್ನು ಅನುಭವಿಸಿದ್ದಾರೆ. ಖಾತೆಯಲ್ಲಿರುವ ಅವರ ಹಣವೇ ಅವರಿಗೆ ಹಿಂಪಡೆಯಲು ಸಾಧ್ಯವಾಗುತ್ತಿಲ್ಲ. ಕೆಲವೆಡೆ ಇಂದಿಗೂ ಎಟಿಎಂಗಳು ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ. ಈ ಹಿನ್ನೆಲೆಯಲ್ಲಿ ಈ ಬಗ್ಗೆ ಕೇಂದ್ರ ಸರಕಾರಕ್ಕೆ ಮನವಿ ಸಲ್ಲಿಸಿ ಸಮಸ್ಯೆಯನ್ನು ಶೀಘ್ರ ಬಗೆಹರಿಸುವಂತೆ ಒತ್ತಾಯಿಸಲಾಗಿದೆ ಎಂದು ಅಕ್ಷಿತ್ ತಿಳಿಸಿದರು.

ಈ ಸಂದರ್ಭದಲ್ಲಿ ಯುವ ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಶ್ರೀನಾಥ ರೈ ಮಾತನಾಡಿ, ಯುವ ಜನತಾದಳ ದ.ಕ. ಜಿಲ್ಲೆಯ ಮತ್ತು ವಿಧಾನಸಭಾ ಕ್ಷೇತ್ರಗಳ ಪದಾಧಿಕಾರಿಗಳ ಆಯ್ಕೆ ನಡೆಸಲಾಗಿ ಎಂದರು.

ಜಿಲ್ಲಾ ಯುವ ಜನತಾದಳ ಮಹಾ ಪ್ರಧಾನ ಕಾರ್ಯದರ್ಶಿಯಾಗಿ ಮಧುಸೂದನ್ ಕೆ.ಟಿ.ಗೌಡ, ಉಪಾಧ್ಯಕ್ಷರಾಗಿ ಪ್ರವೀಣ್ ಮುಂಡೋಡಿ, ಹರೀಶ್ ಕೊಟ್ಟಾರಿ, ಮಧುರಾಜ್ ಶೆಟ್ಟಿ, ಪ್ರಧಾನ ಕಾರ್ಯದರ್ಶಿಯಾಗಿ ಮುಹಮ್ಮದ್ ರಫೀಕ್, ಸಂಘಟನಾ ಕಾರ್ಯದರ್ಶಿಗಳಾಗಿ ಸತ್ಯನಾರಾಯಣ, ಕಿಶೋರ್ ಶೆಟ್ಟಿ ಅರಸಿನಮಕ್ಕಿ, ಕಾರ್ಯದರ್ಶಿಗಳಾಗಿ ತೇಜಸ್ ಶೆಟ್ಟಿ, ರಾಯ್‌ಸ್ಟನ್, ಇಸ್ಮಾಯೀಲ್ ಶರೀಫ್ ಅವರನ್ನು ನೇಮಕ ಮಾಡಲಾಗಿದೆ. ಹಾಗೆಯೇ ವಿಧಾನಸಭಾ ಕ್ಷೇತ್ರಗಳ ಪದಾಧಿಕಾರಿಗಳ ಪಟ್ಟಿ ಬಿಡುಗಡೆ ಮಾಡಲಾಗಿದ್ದು, ಸುಳ್ಯ ವಿಧಾನಸಭಾ ಕ್ಷೇತ್ರಕ್ಕೆ ಅಧ್ಯಕ್ಷರಾಗಿ ಜೀವನ್ ನಾಕೋಡ್, ಬೆಳ್ತಂಗಡಿ ವಿ.ಸ. ಕ್ಷೇತ್ರ ಅಧ್ಯಕ್ಷರಾಗಿ ಸಂತೋಷ್ ನಾಯಕ್, ಮಂಗಳೂರು ಉತ್ತರಕ್ಕೆ ಅಧ್ಯಕ್ಷರಾಗಿ ಚಂದ್ರಶೇಖರ ಪೂಜಾರಿ, ಪುತ್ತೂರು ನಗರಾಧ್ಯಕ್ಷರಾಗಿ ಅಶ್ವಿನ್ ರೈ, ಮೂಡಬಿದ್ರೆ ಬ್ಲಾಕ್ ಅಧ್ಯಕ್ಷರಾಗಿ ಎಂ.ಎ.ಅಶ್ರಫ್ ತೋಡಾರ್ ಅವರನ್ನು ನೇಮಕ ಮಾಡಲಾಗಿದೆ ಎಂದು ಶ್ರೀನಾಥ ರೈ ವಿವರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News