ಕಾಂತಾವರ ಕನ್ನಡ ಸಂಘದ ತಿಂಗಳ ಸರಣಿ ಉಪನ್ಯಾಸ ಕಾರ್ಯಕ್ರಮ
ಮೂಡುಬಿದಿರೆ,ಡಿ.14 : ಕವಿ ಕೆ.ಎಸ್.ನರಸಿಂಹ ಸ್ವಾಮಿಯವರು ಶೃಂಗಾರದ ಹೊರಭಾಗವನ್ನು ಸೆರೆಹಿಡಿದಂತೆ ಶೃಂಗಾರದ ಆಂತರ್ಯದ ಒಳನೋಟಗಳನ್ನು ತನ್ನ ಕಾವ್ಯಗಳ ಮೂಲಕ ಸೆರೆಹಿಡಿದ ದಾರ್ಶನಿಕ ವಿದ್ವತ್ತಿನ ಕವಿ ಸಾಂತ್ಯಾರು ವೆಂಕಟರಾಜರು ಎಂಬುದಾಗಿ ಖ್ಯಾತ ಸಾಹಿತಿ, ವಿಮರ್ಶಕ ಡಾ. ಬಿ.ಜನಾರ್ದನ ಭಟ್ ತಿಳಿಸಿದರು.
ಕಾಂತಾವರ ಕನ್ನಡ ಸಂಘದ ತಿಂಗಳ ಸರಣಿ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ’ಸಾಂತ್ಯಾರು ವೆಂಕಟರಾಜ ಅವರ ಕಾವ್ಯದ ಮರುಓದು’ ಎಂಬ ಕುರಿತು ಮಾತನಾಡಿದರು.
ಸಂಸ್ಕೃತದ ಬಹುದೊಡ್ಡ ವಿದ್ವಾಂಸರಾಗಿದ್ದ ಅವರು 1929ರಿಂದ 55 ವರ್ಷಗಳ ಕಾಲ ಅದ್ಭುತವಾದ ಕಾವ್ಯಗಳನ್ನು ಸೃಷ್ಟಿಸಿದ್ದಲ್ಲದೆ ಕಾದಂಬರಿ, ನಾಟಕ ಹಾಗೂ ಕಥನ ಕಾವ್ಯಗಳ ರಚನೆಯಲ್ಲಿಯೂ ಪ್ರಸಿದ್ಧರಾಗಿದ್ದರು. ಛಂದಸ್ಸಿನ ಬಗ್ಗೆ ಬಲವಾದ ಹಿಡಿತವಿದ್ದುದರಿಂದ ಅದರ ಬಗ್ಗೆ ಸಾಕಷ್ಟು ಪ್ರಯೋಗಗಳನ್ನು ನಡೆಸಿದ್ದ ಅವರು ಪ್ರಾರಂಭದಲ್ಲಿ ಹಳೆಗನ್ನಡ ಛಾಯೆಯಲ್ಲಿ ಕವನಗಳನ್ನು ರಚಿಸಿದರೂ ನಂತರ ಆಧುನಿಕತೆಗೂ ತೆರೆದುಕೊಂಡವರು. ಏಳು ವರ್ಷಗಳ ಕಾಲ ’ವೀರಭೂಮಿ’ ಎಂಬ ಪತ್ರಿಕೆಯನ್ನೂ ನಡೆಸಿ ಅನೇಕ ಪ್ರತಿಭೆಗಳನ್ನು ಬೆಳೆಸಿದರು.
ಪ್ರಕೃತಿ ಮತ್ತು ಹಳ್ಳಿಯ ಜೀವನದ ಬಗ್ಗೆ ಅಪಾರ ಪ್ರೀತಿ ಇಟ್ಟುಕೊಂಡಿದ್ದ ಅವರು ಶೃಂಗಾರದ ಬಗೆಗಿನ ಅಪೂರ್ವ ಭಾವಗೀತೆಗಳನ್ನು ರಚಿಸುವುದರ ಜೊತೆಗೆ ಅನೇಕ ನಾಟಕಗಳಿಗೆ ಗೀತೆರಚನೆ ಮಾಡಿದ್ದರು ಮತ್ತು ತುಳುವಿನಲ್ಲಿಯೂ ಪದ್ಯಗಳನ್ನು ಬರೆಯುತ್ತಿದ್ದರು. ಅದ್ಭುತ ರೂಪಕ ಶಕ್ತಿಯನ್ನು ಮತ್ತು ತಾತ್ವಿಕ ನೆಲೆಯನ್ನು ತನ್ನ ಕಾವ್ಯಗಳಲ್ಲಿ ತುಂಬುತ್ತಿದ್ದ ಅವರು ಕನ್ನಡದ ಬಹುಮುಖ್ಯ ಕವಿಯಾಗಿದ್ದರೂ ನಿರ್ಲಕ್ಷಕ್ಕೊಳಪಟ್ಟರು ಎಂದರು.
ಇದೇ ಸಂದರ್ಭದಲ್ಲಿ ಗೌರವಪೂರ್ವಕವಾಗಿ ಸನ್ಮಾನಿಸಲಾಯಿತು. ವಿಠಲ ಬೇಲಾಡಿಯವರು ಕಾರ್ಯಕ್ರಮ ನಿರ್ವಹಿಸಿದರು. ಡಾ.ನಾ.ಮೊಗಸಾಲೆಯವರು ಸ್ವಾಗತಿಸಿ, ಸದಾನಂದ ನಾರಾವಿ ಅವರು ವಂದಿಸಿದರು.