ಮುಲ್ಕಿ: ಶ್ರೀನಿಧಿ ರಮೇಶ್ ಶೆಟ್ಟಿ ಗೆ ಸನ್ಮಾನ ಕಾರ್ಯಕ್ರಮ
ಮುಲ್ಕಿ, ಡಿ.14: ಜೀವನದಲ್ಲಿ ಶಾಲಾ ಶಿಕ್ಷಣದ ಅವಧಿಯು ಅತ್ಯಂತ ಮಹತ್ವಪೂರ್ಣದಾಗಿದ್ದು ಶಾಲಾ ಅವಧಿಯನ್ನು ಸದುಪಯೋಗಪಡಿಸಿಕೊಂಡಲ್ಲಿ ಉತ್ತಮ ಭವಿಷ್ಯವನ್ನು ರೂಪಿಸಲು ಸಾಧ್ಯ ಎಂದು 'ಮಿಸ್ ಸುಪ್ರ ನ್ಯಾಶನಲ್-2016' ಪುರಸ್ಕ್ರತೆ ಕುಮಾರಿ ಶ್ರೀನಿಧಿ ರಮೇಶ್ ಶೆಟ್ಟಿ ಹೇಳಿದರು.
ಪೋಲೆಂಡ್‌ನಲ್ಲಿ ಜರಗಿದ ಜಾಗತಿಕ ಮಟ್ಟದ ‘ಮಿಸ್ ಸುಪ್ರ ನ್ಯಾಶನಲ್-2016’ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಿ ಪ್ರಶಸ್ತಿ ಪಡೆದಿರುವ ಶ್ರೀನಿಧಿ ಅವರು ತಾನು ಕಲಿತ ಮುಲ್ಕಿಯ ಶ್ರೀ ನಾರಾಯಣ ಗುರು ಶಿಕ್ಷಣ ಸಂಸ್ಥೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಮುಲ್ಕಿಯ ಬಿಲ್ಲವ ಸಂಘದ ರುಕ್ಕರಾಮ ಸಾಲ್ಯಾನ್ ಸಭಾಗ್ರಹದಲ್ಲಿ ಜರಗಿದ ಅಭಿನಂದನಾ ಸಮಾರಂಭದಲ್ಲಿ ಶಾಲೆಯ ವತಿಯಿಂದ ನೀಡಿದ ಸನ್ಮಾನವನ್ನು ಸ್ವೀಕರಿಸಿ ಮಾತನಾಡಿದರು.
ಅವರು ತಾನು 1ನೆ ತರಗತಿಯಲ್ಲಿದ್ದಾಗ ಛದ್ಮ ವೇಷ ಸ್ಪರ್ಧೆಯಲ್ಲಿ ಮಿಸ್ ಇಂಡಿಯಾ ಪಾತ್ರ ಮಾಡಿದ್ದಾಗ ತನಗೆ ವೇದಿಕೆಯಲ್ಲಿ ಸರಿಯಾಗಿ ಕ್ಯೆ ಎತ್ತಲು ಸಾಧ್ಯವಾಗಿರಲಿಲ್ಲ. ಆದರೆ, ಕಠಿಣ ಪರಿಶ್ರಮ ಮತ್ತು ಶಾಲೆಯ ಶಿಕ್ಷಕರ ಹಾಗೂ ಹೆತ್ತವರ ಪ್ರೋತ್ಸಾಹ ದಿಂದ ತಾನು ಈ ಮಟ್ಡಕ್ಕೆ ಬೆಳೆದಿದ್ದೇನೆ. ಪ್ರತಿಯೋರ್ವ ವಿದ್ಯಾರ್ಥಿಯೂ ತಮ್ಮ ಶಾಲಾ ಅವಧಿಯನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ಶಾಲೆಯ ಬಡ ವಿದ್ಯಾರ್ಥಿಗಳಿಗೆ ಶಿಕ್ಷಣಕ್ಕೆ ಪ್ರೋತ್ಸಾಹ ನೀಡುವುದಾಗಿ ಇದೇ ವೇಳೆ ಶ್ರೀ ನಿಧಿ ಭರವಸೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮುಲ್ಕಿ ಬಿಲ್ಲವ ಸಂಘದ ಅಧ್ಯಕ್ಷ ಗೋಪಿನಾಥ ಪಡಂಗ ವಹಿಸಿದ್ದರು. ಶಾಲೆಯ ಸಂಚಾಲಕ ಎಚ್ ವಿ ಕೋಟ್ಯಾನ್,ಆಡಳಿತ ಮಂಡಳಿ ಸದಸ್ಯರಾದ ರತ್ನಾಕರ ಸಾಲ್ಯಾನ್, ಯೋಗೀಶ್ ಕೋಟ್ಯಾನ್,ಶಾಲೆಯ ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷ ದೇವದಾಸ್ ಸುವರ್ಣ, ಹಳೆ ವಿದ್ಯಾರ್ಥಿ ಸಂಘದ ಮಿಥುನ್ ಹೆಗ್ಡೆ ಮತ್ತಿತರಿದ್ದರು.