ಭತ್ತದ ಬೆಳೆಗೆ ಪ್ರಧಾನಮಂತ್ರಿ ಸಲ್ ಬಿಮಾ(ವಿಮಾ) ಯೋಜನೆ
ಉಡುಪಿ, ಡಿ.14: ಪ್ರಧಾನಮಂತ್ರಿ ಸಲ್ ಬಿಮಾ (ವಿಮಾ) ಯೋಜನೆ ಕಾರ್ಯಕ್ರಮವನ್ನು 2016-17ನೇ ಸಾಲಿನ ಹಿಂಗಾರು ಮತ್ತು ಬೇಸಿಗೆ ಹಂಗಾಮಿಗೆ ಮುಂದುವರಿಸಿ ಸರಕಾರ ಆದೇಶ ಹೊರಡಿಸಿದೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹಿಂಗಾರು ಹಂಗಾಮಿಗೆ (ಭತ್ತ ನೀರಾವರಿ ಯೋಜನೆ) ಹಾಗೂ ಉದ್ದು ಬೆಳೆಗಳು, ಉಡುಪಿ ಜಿಲ್ಲೆಯಲ್ಲಿ ಹಿಂಗಾರು ಹಂಗಾಮಿಗೆ ಮುಖ್ಯ ಬೆಳೆಯಾದ ಭತ್ತವನ್ನು ಗ್ರಾಪಂ ಮಟ್ಟಕ್ಕೆ ಹಾಗೂ ಉದ್ದು, ಹುರುಳಿ, ನೆಲಗಡಲೆ ಬೆಳೆಗಳನ್ನು ಹೋಬಳಿ ಮಟ್ಟದಲ್ಲಿ ಬೆಳೆ ವಿಮೆ ಯೋಜನೆ ಯಡಿ ನೋಂದಣಿಗೆ ಅಧಿಸೂಚನೆ ಹೊರಡಿಸಲಾಗಿದೆ. ಬೇಸಿಗೆ ಹಂಗಾಮಿಗೆ ಕೇವಲ ಭತ್ತ ನೀರಾವರಿ ಬೆಳೆ ಮಾತ್ರ ಈ ಯೋಜನೆ ಯಡಿ ಒಳಗೊಂಡಿರುತ್ತದೆ. ನೀರಾವರಿಯಲ್ಲಿ ಭತ್ತ ಬೆಳೆಯುವ ಎಲ್ಲ ರೈತರು ಹೆಕ್ಟೇರಿಗೆ ನಿಗದಿಪಡಿಸಿರುವ ರೈತರ ಭಾಗದ ವಿಮಾ ಕಂತು 1,230 ರೂ., ಉದ್ದು 420 ರೂ., ಹುರುಳಿ 285 ರೂ., ನೆಲಗಡಲೆ 660 ರೂ. ಸಮೀಪದ ಬ್ಯಾಂಕ್‌ನಲ್ಲಿ ತುಂಬಿ ನೋಂದಾಯಿಸಿಕೊಳ್ಳಬಹುದು.
2016ರ ಹಿಂಗಾರು ಹಂಗಾಮಿನಲ್ಲಿ ಬೆಳೆಸಾಲ ಪಡೆಯುವ ಮತ್ತು ಪಡೆಯದ ರೈತರು ಬ್ಯಾಂಕ್‌ಗಳಿಗೆ ಘೋಷಣೆ ಸಲ್ಲಿಸಲು ಡಿ.31ನ್ನು ಕೊನೆಯ ದಿನವಾಗಿ ನಿಗದಿಪಡಿಸಲಾಗಿದೆ. ಈ ಯೋಜನೆ ಬೆಳೆಸಾಲ ಪಡೆದ ರೈತರಿಗೆ ಕಡ್ಡಾಯವಾಗಿದ್ದು, ಸಾಲ ಪಡೆಯದ ರೈತರು ಅರ್ಜಿಯೊಂದಿಗೆ ಭೂಮಿ ಹೊಂದಿರುವುದಕ್ಕೆ ಪಹಣಿ/ಖಾತೆ/ಪಾಸ್‌ಪುಸತಿಕ/ಕಂದಾಯ ರಶೀದಿ ಯಾವುದಾದರೂ ಒಂದನ್ನು ನೀಡಿ ನೋಂದಣಿ ಮಾಡಿಸಬಹುದು ಹಾಗೂ ಬೆಳೆ ಬಿತ್ತಿದ/ನಾಟಿ ಮಾಡಿದ 30 ದಿನಗಳೊಳಗೆ ಅಥವಾ ನಿಗದಿಪಡಿಸಿರುವ ದಿನಾಂಕದೊಳಗೆ ಯಾವುದು ಮುಂಚೆಯೋ ಆ ಅವಧಿಯೊಳಗೆ ಬ್ಯಾಂಕ್ ತಮ್ಮ ಘೋಷಣೆ ಸಲ್ಲಿಸಬಹುದು.
ಬೇಸಿಗೆ ಹಂಗಾಮಿಗೆ ಬೆಳೆ ಸಾಲ ಪಡೆದ ಹಾಗೂ ಪಡೆಯದ ರೈತರು ಬ್ಯಾಂಕ್‌ಗಳಿಗೆ ಘೋಷಣೆ ಸಲ್ಲಿಸಲು ನಿಗದಿಪಡಿಸಿದ ಅಂತಿಮ ದಿನ 2017ರ ಫೆ.28 ಆಗಿರುತ್ತದೆ. ಹೆಚ್ಚಿನ ವಿವರಗಳಿಗೆ ಸ್ಥಳೀಯ ವಾಣಿಜ್ಯ/ಗ್ರಾಮೀಣ ಸಹಕಾರಿ ಬ್ಯಾಂಕ್ (ಸಾಲ ಸಂಸ್ಥೆ)ಗಳನ್ನು ಹೋಬಳಿ ರೈತ ಸಂಪರ್ಕ ಕೇಂದ್ರ/ತಾಲೂಕಿನ ಸಹಾಯಕ ಕೃಷಿ ನಿರ್ದೇಶಕರು/ಜಿಲ್ಲಾ ಜಂಟಿ ಕೃಷಿ ನಿರ್ದೇಶಕರ ಕಚೆೇರಿಗಳನ್ನು ಸಂಪರ್ಕಿಸುವಂತೆ ಜಿಲ್ಲಾ ಜಂಟಿ ಕೃಷಿ ನಿರ್ದೇಶಕರು ಪ್ರಕಟಣೆ ಯಲ್ಲಿ ತಿಳಿಸಿದ್ದಾರೆ.