×
Ad

ಬೆಳ್ತಂಗಡಿ: ತಾಲೂಕು ಮಟ್ಟದ ಪ. ಜಾತಿ, ಪ. ಪಂಗಡ ಹಿತರಕ್ಷಣಾ ಸಭೆ

Update: 2016-12-14 20:09 IST

ಬೆಳ್ತಂಗಡಿ,ಡಿ.14 : ತಾಲೂಕು ಮಟ್ಟದ ಪ. ಜಾತಿ, ಪ. ಪಂಗಡ ಹಿತರಕ್ಷಣಾ ಸಭೆಯು ತಹಶೀಲ್ದಾರ್ ತಿಪ್ಪೆಸ್ವಾಮಿಯವರ ಅಧ್ಯಕ್ಷತೆಯಲ್ಲಿ ಬುಧವಾರ ಅಂಬೇಡ್ಕರ್ ಭವನದಲ್ಲಿ ನಡೆಯಿತು.

ಕೊಯ್ಯೂರು ಹಾಗೂ ತಾಲೂಕಿನ ಇತರೆಡೆ ಅಕ್ರಮ ಮದ್ಯ ಮಾರಾಟವಾಗುತ್ತಿದೆ ಈ ಬಗ್ಗೆ ಅಬಕಾರಿ ಇಲಾಖೆ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಮಾಹಿತಿ ನೀಡಿದರೂ ದಾಳಿ ವೇಳೆ ಮಾರಾಟಗಾರರಿಗೆ ಮುನ್ಸೂಚನೆ ನೀಡುತ್ತಾರೆ ಎಂದು ವೆಂಕಣ್ಣ ಕೊಯ್ಯೂರು ಆರೋಪಿಸಿದರು ಇದಕ್ಕೆ ಬೆಂಬಲಿಸಿ ಶೇಖರ್ ಎಲ್. ಮಾತನಾಡಿ ಸರಕಾರ ಶೇಂದಿ ಮಾರಾಟಕ್ಕೆ ಅವಕಾಶ ನೀಡಿದರೂ ಶೇಂದಿ ಮಾರಾಟಗಾರರನ್ನು ಬಂಧಿಸಿ ಜೈಲಿಗಟ್ಟುವ ಕೆಲಸವನ್ನು ಅಬಕಾರಿ ಮಾಡುತ್ತಿದೆ. ಕಾರಣ ಶೇಂದಿ ಮಾರಾಟಗಾರರಿಂದ ಮಾಮೂಲಿ ಲಂಚ ಸಿಗುತ್ತಿಲ್ಲ. ಅಕ್ರಮ ಮದ್ಯಮಾರಾಟಗಾರರಿಂದ ಮಾಮೂಲಿ ವಸೂಲಿ ಮಾಡುತ್ತಿದ್ದು ಎಷ್ಟು ಮಾಮೂಲಿ ಬರುತ್ತಿದೆ ಎಷ್ಟು ಅಕ್ರಮ ಮದ್ಯ ಮಾರಾಟಗಾರರಿದ್ದಾರೆ, ಎಷ್ಟು ಪ್ರಕರಣ ದಾಖಲಿಸಿದ್ದೀರಿ ಎಂದು ಸಭೆಯ ಮುಂದಿಡಬೇಕು ಎಂದು ಒತ್ತಾಯಿಸಿದರು. ಇದಕ್ಕೆ ಉತ್ತರಿಸಿದ ಅಬಕಾರಿ ಅಧಿಕಾರಿ ತುಕರಾಮ ಶೇಂದಿ ಮಾರಾಟಗಾರರ ಪರವಾನಿಗೆ ನವೀಕರಿಸದೇ ಇರುವುದರಿಂದ ಆತನ ವಿರುದ್ದ ಕ್ರಮಕೈಗೊಳ್ಳಲಾಗಿದೆ ಎಂದಾಗ ಇದಕ್ಕೆ ಆಕ್ರೋಶಗೊಂಡ ಸಭೆ ಅಕ್ರಮ ಮದ್ಯ ಮಾರಾಟಗಾರರಿಗೆ ಯಾರು ಪರವಾನಿಗೆ ನೀಡಿದ್ದು ಇವರ ಪರವಾನಿಗೆ ನವೀಕರಣೆ ಯಾವಾಗ ಎಂದು ಪ್ರಶ್ನಿಸಿದಾಗ ಅಧಿಕಾರಿ ತಬ್ಬಿಬ್ಬಾದ ಘಟನೆ ನಡೆಯಿತು. ನಂತರ ವೆಂಕಣ್ಣ ಕೊಯ್ಯೂರು ಮಾತನಾಡಿ ಕೊಯ್ಯೂರಿನಲ್ಲಿ ರಾಜರೋಷವಾಗಿ ಅಕ್ರಮ ಮದ್ಯ ಮಾರಾಟ ಮಾಡಲಾಗುತ್ತಿದೆ ನಿಮಗೆ ಇವರ ಮಾಹಿತಿ ಇಲ್ಲವೇ ಎಂದು ಪ್ರಶ್ನಿಸಿದರು. ಇದಕ್ಕುತ್ತರಿಸಿದ ಅಧಿಕಾರಿ ಮಾಹಿತಿ ಇದೆ ಎಂದಾಗ ಮತ್ತೆ ಯಾಕೆ ಬಂಧನ ಮಾಡುತ್ತಿಲ್ಲ, ಸರಕಾರ ನಿಮಗೆ ಏನಾದರೂ ಗುರಿ ನೀಡಿದೆಯೇ ಎಂದಾಗ ಹೌದು ಎಂದು ಅಧಿಕಾರಿ ಉತ್ತರಿಸಿದರು. ಸಾರ್ವಜನಿಕರಿಗೂ ಮಾರಾಟದ ಪರವಾನಿಗೆಯನ್ನು ನೀಡಿ ನಿಮ್ಮ ಗುರಿಯನ್ನು ನಾವು ತಲುಪಿಸುತ್ತೇವೆ ಇಲ್ಲವಾದಲ್ಲಿ ಅಕ್ರಮ ಮದ್ಯ ಮಾರಾಟವನ್ನು ನಿಲ್ಲಿಸಿ ಮುಂದಿನ ಸಭೆಯಲ್ಲಿ ಎಷ್ಟು ಪ್ರಕರಣ ದಾಖಲಾಗಿದೆ ಎಂದು ತಿಳಿಸಬೇಕು. ಸಾರ್ವಜನಿಕರು ಎಚ್ಚೆತ್ತುಕೊಳ್ಳುವ ಮುನ್ನ ಇಲಾಖೆ ಕ್ರಮ ಕೈಗೊಳ್ಳಲಿ ಇಲ್ಲವಾದಲ್ಲಿ ಮುಂದಿನ ಅನಾಹುತಕ್ಕೆ ಅಬಕಾರಿ ಇಲಾಖೆಯೇ ಹೊಣೆಗಾರರು ಎಂದು ಕೆಲ ದಲಿತ ಮುಖಂಡರು ಆರೋಪಿಸಿದರು.

ತಾಲೂಕಿನಲ್ಲಿ ಡಿಸಿ ಮನ್ನ ಭೂಮಿ ತೆರವಿಗೆ ಯಾವ ಕ್ರಮ ಕೈಗೊಂಡಿದ್ದೀರಿ. ತಾಲೂಕಿನಲ್ಲಿ ಒತ್ತುವರಿಯಾದ ಡಿಸಿ ಮನ್ನ ಭೂಮಿಯ ಬಗ್ಗೆ ಮಾಹಿತಿ ಕೊಡಿ ಎಂದು ಸಂಜೀವ ಆರ್, ಬಾಬು, ಬಿ ಕೆ ವಸಂತ, ಶೇಖರ್ ಎಲ್, ಗೋಪಾಲಕೃಷ್ಣ ಮಡಂತ್ಯಾರು, ಒತ್ತಾಯಿಸಿದರು. ಇದಕ್ಕುತ್ತರಿಸಿದ ತಹಶೀಲ್ದಾರ್ ತಾಲೂಕಿನಲ್ಲಿ 567 ಎಕ್ರೆ ಡಿಸಿ ಮನ್ನ ಭೂಮಿ ಖಾಲಿಯಿದೆ 411 ಎಕ್ರೆ ಅರಣ್ಯ ಹಾಗೂ ಇತರರು ಸೇರಿದಂತೆ ಒತ್ತುವರಿ ಮಾಡಿಕೊಂಡಿದ್ದಾರೆ ಎಂದು ಮಾಹಿತಿ ನೀಡಿದಾಗ ಈ ಒತ್ತುವರಿ ತೆರವನ್ನು ಎಷ್ಟು ದಿನಗಳ ಒಳಗೆ ಮಾಡುತ್ತೀರಿ ಎಂದು ಶೇಖಲ್ ಎಲ್ ಮತ್ತು ಇತರರು ಒತ್ತಾಯಿಸಿದರು. ನಿವೇಶನ ರಹಿತ ಕುಟುಂಬಗಳು ನಿವೇಶನಕ್ಕೆ ಅರ್ಜಿ ಕೊಡಿ ಅಲ್ಲಿ ಒತ್ತುವರಿಯಾದಂತಹ ಸ್ಥಳದಲ್ಲಿ ನಿವೇಶನ ಕೊಡಲು ಕ್ರಮಕೈಗೊಳ್ಳುವುದಾಗಿ ತಾಹಶೀಲ್ದಾರ್ ಭರವಸೆ ನೀಡಿದರು.

ತಾಲೂಕಿನಲ್ಲಿ ಅಂಬೇಡ್ಕರ್ ಭವನಕ್ಕೆ ಸ್ಥಳ ಮಂಜೂರಾತಿಗೆ ಯಾವ ಅಧಿಕಾರಿಗಳೂ ಮುಂದೆ ಬರುತ್ತಿಲ್ಲ ನಿವೇಶನ ಗುರುತಿಸಲು ಸಮಾಜ ಕಲ್ಯಾಣ ಇಲಾಖೆ ಹಾಗೂ ಕಂದಾಯ ಇಲಾಖೆ ಸ್ಪಂಧಿಸಬೇಕು ಎಂದು ಜಿ. ಪಂ. ಸದಸ್ಯ ಶೇಖರ ಕುಕ್ಕೇಡಿ ಒತ್ತಾಯಿಸಿದರು.

ಅಟ್ರಿಂಜೆ 5 ಕೊರಗ ಕುಟುಂಬಗಳು ಕಾಡಿನ ಮದ್ಯ ವಾಸಿಸುತ್ತಿದ್ದು ಯಾವುದೇ ಮೂಲ ಸೌಕರ್ಯವಿಲ್ಲದೆ ಇರುವ ಬಗ್ಗೆ ವಿಜಯವಾಣಿ ಪತ್ರಿಕೆ ಅಧಿಕಾರಿಗಳ ಹಾಗೂ ಸರಕಾರದ ಗಮನಕ್ಕೆ ತಂದಿದ್ದು ನಂತರ ಜಿಲ್ಲಾಧಿಕಾರಿಗಳು, ಪೂಲೀಸ್ ವರಿಷ್ಠಾಧಿಕಾರಿಗಳು, ಸಹಾಯಕ ಕಮೀಷನರ್, ಇತರ ಅಧಿಕಾರಿಗಳು ಬೇಟಿ ನೀಡಿ ನಿವೇಶನ ಮಂಜೂರುಗೊಳಿಸುವ ಭರವಸೆ ನೀಡಿದ್ದರು ಹಾಗೂ ಮೂಲ ಸೌಕರ್ಯ ಒದಗಿಸುವ ಬಗ್ಗೆ ತಾಲೂಕು ಅಧಿಕಾರಿಗಳಿಗೆ ಸೂಚಿಸಿದ್ದರು. ಏನು ಕ್ರಮ ಕೈಗೊಂಡಿದ್ದೀರಿ ಎಂದು ಶೇಖರ ಎಲ್ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಇದಕ್ಕುತ್ತರಿಸಿದ ತಾಹಶೀಲ್ದಾರ್ ಒಂದು ತಿಂಗಳೊಳಗೆ ಹಕ್ಕು ಪತ್ರ ನೀಡಲು ದಾಖಲೆ ಸಿದ್ದಪಡಿಸಿದ್ದು ಸಹಾಯಕ ಕಮೀಷನರ್‌ರವರಿಗೆ ಪ್ರಸ್ತಾವನೆಗೆ ಕಳುಹಿಸಲಾಗಿದೆ ಎಂದರು.

ಲಾಲ ಅಂಬೇಡ್ಕರ್ ನಗರದಲ್ಲಿ ಮನೆಯ ಮೇಲೆ ಬೀಳುವ ಅಪಾಯದ ವಿದ್ಯುತ್ ಕಂಬಗಳನ್ನು ತೆರವುಗೊಳಿಸಲಾಗಿದೆ ಎಂದು ಸಹಾಯಕ ಇಂಜಿನಿಯರ್ ಶಿವಶಂಕರ್ ತಿಳಿಸಿದರು.

ಕಸ ಗುಡಿಸುವ ಸಿಬ್ಬಂದಿಗಳ ನೇಮಕಾತಿಯಲ್ಲಿ ಪ. ಜಾತಿ ಪಂಗಡಕ್ಕೆ ಮಾತ್ರ ಮೀಸಲಿಡಲಾಗುತ್ತಿದೆ ಇದನ್ನು ರದ್ದುಗೊಳಿಸಿ ಇತರ ಜಾತಿಗೂ ಮೀಸಲಿಡಬೇಕು. ಕಂಪ್ಯೂಟರ್ ಡಾಟ ಎಂಟ್ರಿ ಇನ್ನಿತರ ಹುದ್ದೆಗಳಲ್ಲಿ ಪ. ಜಾತಿ ಪಂಗಡಕ್ಕೆ ಹೆಚ್ಚಿನ ಮೀಸಲಾತಿ ಇಡಬೇಕು, ಕೊಯ್ಯೂರು ಎಸ್‌ಸಿ ಎಸ್‌ಟಿ ಅನುದಾನದಲ್ಲಿ ಸಾರ್ವಜನಿಕ ಬಸ್ಸು ತಂಗುದಾಣ ನಿರ್ಮಿಸಿದ್ದು ಇದರ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳುವಂತೆ ಒತ್ತಾಯ, ಕೋಲೋಡಿ ಮಲೆ ಕುಡಿಯ ಕಾಲೋನಿಗೆ ಬಿಡುಗಡೆಯಾದ ಅಭಿವೃದ್ಧಿ ಕಾಮಗಾರಿಗಳನ್ನು ಶೀಘ್ರ ನಡೆಸುವಂತೆ, ಮಲೆಕುಡಿಯ ಜಾತಿ ಪ್ರಮಾಣ ಪತ್ರದಲ್ಲಿ ಮಲೈಕುಡಿಯ ಎಂದು ನಮೂದಾಗಿದ್ದು ಇದನ್ನು ಸರಿಪಡಿಸಬೇಕು. ಶಿರ್ಲಾಲು ಜೀತ ಮುಕ್ತ ಕಾಲೋನಿಗೆ ನೀರಿನ ಸೌಕರ್ಯ ಒದಗಿಸಲು ಒತ್ತಾಯ, ಕಳೆಂಜ ಪಂಚಾಯತ್‌ನಲ್ಲಿ ನೇಮಕಾತಿ ವಿಚಾರ ಹಾಗೂ 5 ಹೊಸ ಪಂಚಾಯತ್‌ಗಳಿಗೆ ಸಿಬ್ಬಂದಿಗಳ ನೇಮಕಾತಿಯಲ್ಲಿ ಪ. ಜಾತಿ ಪಂಗಡಕ್ಕೆ ಅನ್ಯಾಯವಾಗಿದ್ದು ಇದನ್ನು ಸರಿಪಡಿಸುವಂತೆ ಹಾಗೂ ಇನ್ನಿತರ ವಿಷಯಗಳಬಗ್ಗೆ ಸಭೆಯಲ್ಲಿ ಒತ್ತಾಯಿಸಿದರು.

ಸಭೆಯಲ್ಲಿ ತಾ. ಪಂ. ಅಧ್ಯಕ್ಷೆ ದಿವ್ಯ ಜ್ಯೋತಿ,ಸಮಾಜ ಕಲ್ಯಾಣಧೀಕಾರಿ ಮೋಹನ್ ಕುಮಾರ್ ನಗರ ಪಂಚಾಯತ್ ಮುಖ್ಯಧಿಕಾರಿ ಜೆಸಿಂತಾ ಲೂಯಿಸ್, ಜಿ. ಪಂ. ಸದಸ್ಯ ಕೊರಗಪ್ಪ ನಾಯ್ಕಾ, ಅಂಬೇಡ್ಕರ್ ನಿಗಮದ ಅಧಿಕಾರಿ ಶಿವಶಂಕರ್, ಎಎಸ್‌ಐ ಕರುಣಾಕರ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News