ಅಲೆಪ್ಪೊದಲ್ಲಿ ಸಾವಿನ ಕದ ತಟ್ಟುತ್ತಿರುವ ನಾಗರಿಕರು

Update: 2016-12-14 15:04 GMT

ಬೆರೂತ್, ಡಿ. 14: ಸಿರಿಯ ಸೇನೆಯ ಆಕ್ರಮಣಕ್ಕೆ ತುತ್ತಾಗಿರುವ ಬಂಡುಕೋರರ ನಿಯಂತ್ರಣದಲ್ಲಿದ್ದ ನಗರ ಅಲೆಪ್ಪೊದಲ್ಲಿ ಜನರು ಸಾವಿನ ಕದ ತಟ್ಟತೊಡಗಿದ್ದಾರೆ. ಇದು ತಮ್ಮ ಕೊನೆಯ ಸಂದೇಶವಾಗಿರಬಹುದು ಎಂಬ ಭೀತಿಯನ್ನು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಕ್ತಪಡಿಸುತ್ತಿದ್ದಾರೆ.

ಸಿರಿಯ ಸೇನೆ ತಮ್ಮನ್ನು ಬಂಧಿಸಬಹುದು ಅಥವಾ ಸಾಮೂಹಿಕ ಹತ್ಯೆ ನಡೆಸಬಹುದು ಎಂಬ ಭೀತಿಯಲ್ಲಿ ಜನರು ಸೈನಿಕರ ಆಗಮನವನ್ನು ಎದುರು ನೋಡುತ್ತಿದ್ದಾರೆ.

ಮೊದಲು ಸಂಕಟ ಸಂದೇಶವನ್ನು ಕಳುಹಿಸಿದ್ದು ಭೂಗತ ಆಶ್ರಯ ಸ್ಥಾನಗಳು ಮತ್ತು ಶವಾಗಾರಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ವೈದ್ಯರು. ಬಳಿಕ ಅಲೆಪ್ಪೊದಲ್ಲಿ ಬಂಡುಕೋರರ ನಿಯಂತ್ರಣದಲ್ಲಿ ಉಳಿದಿರುವ ಕೆಲವೇ ಕೆಲವು ಪ್ರದೇಶಗಳಲ್ಲಿ ಸಿಕ್ಕಿಹಾಕಿಕೊಂಡಿರುವ ನಿವಾಸಿಗಳು ಸಂಕಟ ಸಂದೇಶಗಳನ್ನು ಕಳುಹಿಸಲು ಆರಂಭಿಸಿದರು. ಅವರು ಸಾಮಾಜಿಕ ಮಾಧ್ಯಮಗಳು ಮತ್ತು ಸಂದೇಶಗಳಲ್ಲಿ ಭಾವನಾತ್ಮಕ ವಿದಾಯ ಸಂದೇಶಗಳನ್ನು ನೀಡಿದರು. ಬಂಡುಕೋರ ನಿಯಂತ್ರಣದ ಸ್ಥಳಗಳಲ್ಲಿ ಭಾರೀ ಬಾಂಬ್ ದಾಳಿ ನಡೆಯುತ್ತಿದೆ.

ನಿರ್ದಯಿ ಆಂತರಿಕ ಯುದ್ಧದಲ್ಲಿ ಅಂತಿಮ ಮಾತನ್ನು ಹೇಳುವ ಅವಕಾಶ ತಮಗಿರಬೇಕು ಎಂದು ಅವರು ಹೇಳುತ್ತಿದ್ದಾರೆ.

‘‘ಈ ಗ್ರಹದಲ್ಲಿ ಒಂದು ಸಮಸ್ಯೆಯಿದೆ’’ ಎಂದು 28 ವರ್ಷದ ಗ್ರಾಫಿಕ್ ಡಿಸೈನರ್ ಮೊಂತರ್ ಎಟಕಿ ಹೇಳಿದರು. ‘‘ಈ ಗ್ರಹವು ಜನರನ್ನು ಮುಕ್ತವಾಗಿ ಅಥವಾ ಮಾನವರಾಗಿ ಬದುಕಲು ಬಿಡುವುದಿಲ್ಲ’’ ಎಂದು ಅವರು ಹೇಳಿದರು.

ಸಿರಿಯದಲ್ಲಿ ಸಂಘರ್ಷ ಆರಂಭವಾಗಿ ಆರು ವರ್ಷಗಳಾದರೂ, ಜಗತ್ತು ಈ ಕಡೆ ನೋಡುತ್ತಿಲ್ಲ ಎಂದು ಅವರು ದೂರಿದ್ದಾರೆ.

‘‘ಈ ವೌನ ಯಾಕೆ? ಜನರನ್ನು ಮುಗಿಸಲಾಗುತ್ತಿದೆ’’ ಎಂದು ಬಶಾರ್ ಅಸಾದ್ ಸರಕಾರದ ಟೀಕಾಕಾರರಾಗಿರುವ ಇಂಗ್ಲಿಷ್ ಶಿಕ್ಷಕ ಅಬ್ದುಲ್‌ಕಫಿ ಅಲ್‌ಹಮ್ದಿ ಟ್ವೀಟ್ ಮಾಡಿದ್ದಾರೆ. ‘‘ಕೊನೆಯ ಸಂದೇಶ. ಎಲ್ಲದಕ್ಕೂ ಧನ್ಯವಾದಗಳು. ನಾವು ಹಲವು ಕ್ಷಣಗಳನ್ನು ಜೊತೆಯಾಗಿ ಕಳೆದೆವು. ಭಾವುಕ ತಂದೆಯೊಬ್ಬರ ಕೊನೆಯ ಟ್ವೀಟ್‌ಗಳಿವು. ಅಲೆಪ್ಪೊಗೆ ವಿದಾಯ’’ ಎಂದು ಅವರು ಬಳಿಕ ಬರೆದರು.

ಬಳಿಕ ವೀಡಿಯೊ ಸ್ಟ್ರೀಮಿಂಗ್ ಪೆರಿಸ್ಕೋಪ್‌ನಲ್ಲಿ ನೇರಪ್ರಸಾರದಲ್ಲಿ ಕಾಣಿಸಿಕೊಂಡ ಅಲ್‌ಹಮ್ದೋ, ಸರಕಾರಿ ಪಡೆಗಳು ಬರುತ್ತಿವೆ ಎಂದು ಹೇಳಿದರು. ‘‘ನೀವು ನನ್ನನ್ನು ಸ್ಮರಿಸಬಹುದು ಎಂದು ನಾನು ಭಾವಿಸುತ್ತೇನೆ’’ ಎಂದರು.


ಸರಕಾರಿ ಪಡೆಗಳು ರಸ್ತೆಯಲ್ಲಿವೆ, ನಮ್ಮನ್ನು ಕ್ಷಮಿಸಿ

ವಾಟ್ಸ್‌ಆ್ಯಪ್‌ನಲ್ಲಿ ವ್ಯಾಪಕವಾಗಿ ಹಂಚಿಕೆಯಾದ ಭಾವನಾತ್ಮಕ ಸಂದೇಶವೊಂದನ್ನು ಉಮರ್ ಎಂದು ಹೇಳಿಕೊಂಡ ಸ್ಥಳೀಯ ನೆರವು ಕಾರ್ಯಕರ್ತರೊಬ್ಬರು ಕಳುಹಿಸಿದರು.

‘‘ಸರಕಾರಿ ಪಡೆಗಳು ರಸ್ತೆಯ ಕೊನೆಯಲ್ಲಿದೆ. ನಮ್ಮನ್ನು ಕ್ಷಮಿಸಿ’’ ಎಂಬುದಾಗಿ ಅವರು ಹೇಳಿದ್ದಾರೆ. ಬಂಡುಕೋರ ಪ್ರಾಬಲ್ಯದ ನಗರವನ್ನು ರಕ್ಷಿಸಲು ವಿಫಲವಾಗಿರುವುದಕ್ಕಾಗಿ ಅವರು ಕ್ಷಮಾಪಣೆಯನ್ನೂ ಕೋರಿದ್ದಾರೆ.

ಸಿರಿಯದ ಅತಿ ದೊಡ್ಡ ನಗರ ಅಲೆಪ್ಪೊದ ಅರ್ಧದಷ್ಟು ಭಾಗವನ್ನು ನಾಲ್ಕು ವರ್ಷಗಳ ತಮ್ಮ ಹಿಡಿತದಲ್ಲಿಟ್ಟುಕೊಂಡಿದ್ದ ಬಂಡುಕೋರರು ಇತ್ತೀಚಿನ ವಾರಗಳಲ್ಲಿ ಹಿಮ್ಮೆಟ್ಟುತ್ತಿದ್ದಾರೆ. ಸಿರಿಯದ ಸರಕಾರಿ ಪಡೆಗಳು ಮುಂದುವರಿಯುತ್ತಿರುವಂತೆಯೇ, ಅಲ್ಲಿನ ಸಾವಿರಾರು ನಿವಾಸಿಗಳು ಒಂದು ಚದರ ಮೈಲಿ ಜಾಗದಲ್ಲಿ ಬಂದಿಯಾಗಿದ್ದಾರೆ.

ಯುದ್ಧವಿರಾಮದ ಕರೆಯನ್ನು ತಿರಸ್ಕರಿಸಿರುವ ರಶ್ಯ ಬೆಂಬಲಿತ ಸಿರಿಯದ ಸೇನೆ, ಬಂಡುಕೋರರ ರಕ್ಷಣೆಯು ಕುಸಿಯುತ್ತಿರುವಂತೆಯೇ ನಗರದ ಒಳ ಭಾಗಗಳಿಗೆ ನುಗ್ಗುತ್ತಿದೆ.


ಅಲೆಪ್ಪೊದಿಂದ ಸಂದೇಶ: ‘ನಮ್ಮ ನಾಳೆ ಬರಲಾರದು’

ಅಲೆಪ್ಪೊದ ಸ್ಥಿತಿಯನ್ನು ಪತ್ರಕರ್ತ ಬಿಲಾಲ್ ಅಬ್ದುಲ್ ಕರೀಮ್ ‘ಹತಾಶ ಪರಿಸ್ಥಿತಿ’ ಎಂಬುದಾಗಿ ಬಣ್ಣಿಸುತ್ತಾರೆ ಹಾಗೂ ‘ಮಾನವೀಯ ಕಾರಿಡಾರ್’ ನಿರ್ಮಿಸಬೇಕೆಂದು ಅವರು ಕರೆ ನೀಡುತ್ತಾರೆ.

‘‘ಮಳೆಯಾಗಲಿ ಎಂದು ನಾವೆಲ್ಲರೂ ಪ್ರಾರ್ಥಿಸುತ್ತಿದ್ದೇವೆ. ಮಳೆಯಾಗುವಾಗ ವಿಮಾನಗಳು ಹಾರುವುದಿಲ್ಲ ಹಾಗೂ ಸ್ವಲ್ಪ ಅವಧಿಗಾದರು ಬಾಂಬ್ ದಾಳಿಗಳು ನಿಲ್ಲುತ್ತವೆ’’ ಎಂದು ಅವರು ಹೇಳುತ್ತಾರೆ.

‘‘ಸುದೀರ್ಘ ಕಾಲ ಮಳೆಯಾಗಲಿ. ಯಾಕೆಂದರೆ ಈ ಅವಧಿಯಲ್ಲಿ ಅಲೆಪ್ಪೊದ ಈ ಸಣ್ಣ ಉಪನಗರದಲ್ಲಿ ಸಿಕ್ಕಿಹಾಕಿಕೊಂಡಿರುವ 1.5 ಲಕ್ಷ ನಾಗರಿಕರು ಹತ್ಯಾಕಾಂಡದಿಂದ ತಪ್ಪಿಸಿಕೊಳ್ಳುವಂತೆ ಜಗತ್ತಿನ ಶಕ್ತಿಗಳು ಏನಾದರೂ ಮಾಡಬಹುದು ಎನ್ನುವ ನಿರೀಕ್ಷೆ ನಮ್ಮದು’’
ಸಿರಿಯದ ಸೈನಿಕರಿಂದ ತಪ್ಪಿಸಿಕೊಳ್ಳಲು ಇಲ್ಲಿನ ಜನರು ಹತಾಶ ಪ್ರಯತ್ನಗಳನ್ನು ನಡೆಸುತ್ತಿದ್ದಾರೆ ಎಂದು ಅವರು ಟ್ವೀಟ್ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News