ವಾಹನ ಪಾರ್ಕಿಂಗ್ ಗೆ ಅಂಗಡಿ ತೆರವುಗೊಳಿಸಲು ಗಡುವು
ಬಂಟ್ವಾಳ, ಡಿ. 14: ಬಿ.ಸಿ.ರೋಡಿನಲ್ಲಿ ಪಾರ್ಕಿಂಗ್ ಸಮಸ್ಯೆಗೆ ಪರಿಹಾರ ಒದಗಿಸಲು ಇಲ್ಲಿನ ಕೈಕುಂಜೆಯಲ್ಲಿ ಇರುವ ಜಾಗವನ್ನು ಸರ್ವೇ ನಡೆಸಿ ಜಾಗದಲ್ಲಿರುವ ಅಂಗಡಿ, ಕಟ್ಟಡಗಳನ್ನು ತೆರವುಗೊಳಿಸಬೇಕೆಂದು ಜಿಲ್ಲಾಧಿಕಾರಿ ನೀಡಿದ ಆದೇಶದನ್ವಯ ಬುಧವಾರ ಸ್ಥಳಕ್ಕೆ ಭೇಟಿ ನೀಡಿದ ಬಂಟ್ವಾಳ ತಹಶೀಲ್ದಾರ್ ಪುರಂದರ ಹೆಗ್ಡೆ ನೇತೃತ್ವದ ಅಧಿಕಾರಿಗಳ ತಂಡ ಅಂಗಡಿ, ಕಟ್ಟಡಗಳನ್ನು ತೆರವುಗೊಳಿಸಲು ಮಾಲಕರಿಗೆ 15 ದಿನಗಳ ಗಡುವು ನೀಡಿದೆ.
ಬಿ.ಸಿ.ರೋಡಿನ ಚಿತ್ರಣವನ್ನು ಬದಲಾಯಿಸುವ ನಿಟ್ಟಿನಲ್ಲಿ ಜಿಲ್ಲಾಧಿಕಾರಿ ಡಾ. ಜಗದೀಶ್ ಇತ್ತೀಚೆಗೆ ಬಂಟ್ವಾಳ ಪುರಸಭೆಯಲ್ಲಿ ನಡೆಸಿದ ವಿಶೇಷ ಸಭೆಯಲ್ಲಿ ಬಿ.ಸಿ.ರೋಡಿನಲ್ಲಿ ವಾಹನಗಳ ಪಾರ್ಕಿಂಗ್‌ಗೆ ಕೈಕುಂಜೆಯಲ್ಲಿ ಇರುವ ಜಮೀನನ್ನು ಸರ್ವೇ ನಡೆಸಿ ಅದರಲ್ಲಿರುವ ಅಂಗಡಿ, ಕಟ್ಟಡಗಳನ್ನು ತೆರವುಗೊಳಿಸುವಂತೆ ಆದೇಶ ನೀಡಿದ್ದರು. ಈ ಹಿನ್ನೆಲೆಯಲ್ಲಿ ಕೈಕುಂಜೆ ರಸ್ತೆ ಬದಿಯಲ್ಲಿರುವ ಸರಕಾರಿ ಜಮೀನಿನಲ್ಲಿರುವ ಗೂಡಂಗಡಿ, ಗ್ಯಾರೇಜು, ಕ್ಯಾಂಟಿನ್‌ಗಳನ್ನು ತೆರವು ಮಾಡುವಂತೆ ಅದರ ಮಾಲಕರಿಗೆ ತಹಶೀಲ್ದಾರ್ ಸೂಚಿಸಿದ್ದರು.
ಈ ಸಂದರ್ಭದಲ್ಲಿ ಬಂಟ್ವಾಳ ತಹಶೀಲ್ದಾರ್ ಪುರಂದರ ಹೆಗ್ಡೆ. ಪುರಸಭೆ ಮುಖ್ಯಾಧಿಕಾರಿ ಸುಧಾಕರ್, ಸಮುದಾಯ ಸಂಘಟನಾ ಅಧಿಕಾರಿ ಮತ್ತಡಿ, ಪುರಸಭೆ ಆರ್‌ಒ ಶಿವ ನಾಯ್ಕಾ, ಪುರಸಭೆ ಕಂದಾಯ ನಿರೀಕ್ಷಕ ಪರಷೋತ್ತಮ, ಗ್ರಾಮ ಕರಣಿಕರಾದ ಜನಾರ್ದನ್. ಯೊಗಾನಂದ, ತಾಲೂಕು ಕಚೇರಿ ಸಿಬ್ಬಂದಿಯಾದ ಸದಾಶಿವ ಕೈಕಂಬ ಹಾಗೂ ಶಿವ ಪ್ರಸಾದ್ ಇದ್ದರು.