ರಂಗಭೂಮಿ ಮೂಲಕ ನವೋದಯ: ಪ್ರಸನ್ನ

Update: 2016-12-14 16:26 GMT

ಉಡುಪಿ, ಡಿ. 14: ವಚನ ಚಳವಳಿ ಹಾಗೂ ಸಾಹಿತ್ಯದಲ್ಲಿ ನವೋದಯದ ಬಳಿಕ ಇದೀಗ ರಂಗಭೂಮಿ ಕ್ಷೇತ್ರದ ಮೂಲಕ ಕನ್ನಡದ ನವೋದಯದ ಸಾಧ್ಯತೆಗಳಿವೆ ಎಂದು ಹಿರಿಯ ರಂಗಕರ್ಮಿ ಪ್ರಸನ್ನ ಹೇಳಿದ್ದಾರೆ.

ಎಂಜಿಎಂ ಕಾಲೇಜಿನ ಮುದ್ದಣ ಮಂಟಪದಲ್ಲಿ ಬುಧವಾರ ನಡೆದ ರಂಗಭೂಮಿ ಉಡುಪಿಯ ಸುವರ್ಣ ಮಹೋತ್ಸವದ ಸಮಾರೋಪ ಸಮಾರಂಭದ ಕೊನೆಯ ದಿನದ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ ಅವರು ಹಿಂದೆ ವಚನ ಚಳವಳಿಯ ಕಾಲದಲ್ಲಿ ನವೋದಯ ನಡೆದಿತ್ತು. ಬಳಿಕ ಕಳೆದ ಶತಮಾನದಲ್ಲಿ ಸಾಹಿತಿಗಳ ಮೂಲಕ ಕನ್ನಡ ಸಾಹಿತ್ಯದಲ್ಲೂ ನವೋದಯದ ಚಳವಳಿ ನಡೆಯಿತು. ಈಗ ಮತ್ತೆ ರಂಗಭೂಮಿ ಕ್ಷೇತ್ರಕ್ಕೆ ಅಂತಹ ಅವಕಾಶಗಳಿವೆ ಎಂದರು.

ಸಾಹಿತ್ಯದ ನವೋದಯ ಚಳವಳಿ ನಡೆಯುವಾಗ ಅದ್ಭುತ ಸಾಧನೆಗಳನ್ನು ಮಾಡಿದ್ದರೂ ಪರಂಪರೆ ಮತ್ತು ಆಧುನಿಕತೆಯ ಗುಣಾಂಶಗಳನ್ನು ಮಾತ್ರ ಗ್ರಹಿಸಿ ಸಾಹಿತಿಗಳು ಕೊಡುಗೆಗಳನ್ನು ನೀಡಿದರು. ಈಗ ಸಾಹಿತ್ಯಕ್ಷೇತ್ರಕ್ಕೆ ಅದು ಮತ್ತೊಮ್ಮೆ ಸಾಧ್ಯವಿಲ್ಲ. ಏಕೆಂದರೆ ಯಂತ್ರ ನಾಗರಿಕತೆ ಅಕ್ಷರಸ್ಥರಲ್ಲಿ ಮಾತ್ರವಲ್ಲದೆ ಮನೆಗಳಲ್ಲಿ ಮಹಿಳೆಯರು, ಮಕ್ಕಳು, ಅನಕ್ಷರಸ್ಥರು, ಮಾಧ್ಯಮಗಳ ಮೂಲಕ ಪ್ರವೇಶಿಸಿದೆ ಎಂದರು.

ಮತ್ತೊಮ್ಮೆ ನವೋದಯದ ಅವಕಾಶಗಳಿದ್ದರೆ ಅದು ರಂಗಭೂಮಿಗೆ ಮಾತ್ರ. ಆಧುನಿಕತೆಯ ಯಂತ್ರ ನಾಗರಿಕತೆ ಮತ್ತು ಪರಂಪರೆಯನ್ನು ರಂಗಭೂಮಿ ಕಲಾವಿದರು ಹೇಗೆ ನಿಭಾಯಿಸಬಹುದು ಎಂಬ ಚಿಂತನೆ ಅಗತ್ಯ. ಇವುಗಳನ್ನು ಎಷ್ಟರಮಟ್ಟಿಗೆ ಸ್ವೀಕರಿಸುತ್ತೇವೆ ಎನ್ನುವುದು ಸಹ ಮುಖ್ಯ. ಇದನ್ನು ಗಮನಿಸದೆ ಇದ್ದರೆ ಅಪಾಯಕ್ಕೆ ಸಿಲುಕುವುದು ಖಂಡಿತ ಎಂದು ಪ್ರಸನ್ನ ಹೇಳಿದರು.

ಈಗ ಜನರಿಗೆ ಮನರಂಜನೆಯ ಅಗತ್ಯ ಹಿಂದಿಷ್ಟಿಲ್ಲ.ಇದನ್ನು ಮನೆಮನೆಗಳಲ್ಲಿ ಟಿವಿಗಳು ಕೊಡುತ್ತಿವೆ. ಆದುದರಿಂದ ರಂಗಕಲಾವಿದರು ಕೇವಲ ಮನೋರಂಜನೆಗೆ ಮಾತ್ರ ಸೀಮಿತಗೊಳ್ಳದೆ ಸಮಾಜವನ್ನು ಬದಲಿಸುವ ಕೆಲಸಕ್ಕೆ ಕೈಹಾಕಬೇಕು. ಇದಕ್ಕೆ ನಾಯಕತ್ವ ಬೇಕು. ಇದು ಶಿಸ್ತು, ಸಂಯಮದಂತಹ ಗುಣಗಳಿಂದ ಬರಬೇಕು ಎಂದು ಅವರು ಅಭಿಪ್ರಾಯಪಟ್ಟರು.

ಅಧ್ಯಕ್ಷತೆಯನ್ನು ವಿಧಾನ ಪರಿಷತ್ ಸದಸ್ಯ ಕ್ಯಾ.ಗಣೇಶ್ ಕಾರ್ಣಿಕ್ ವಹಿಸಿದ್ದರು. ಮಾಜಿ ಶಾಸಕ ಕೆ.ರಘುಪತಿ ಭಟ್, ಉದ್ಯಮಿ ಗುರ್ಮೆ ಸುರೇಶ ಶೆಟ್ಟಿ ಶುಭಕೋರಿದರು. ರಂಗಭೂಮಿ ಜೀವಮಾನ ಸಾಧನೆಗಾಗಿ ದಿ. ಕೆ.ಆನಂದ ಗಾಣಿಗ ಪರವಾಗಿ ಸುಶೀಲಾ ಗಾಣಿಗ ಹಾಗೂ ಸುವರ್ಣ ರಂಗಭೂಮಿ ಸಮಿತಿಯ ಕಾರ್ಯಾಧ್ಯಕ್ಷ ಯು.ಉಪೇಂದ್ರ ಅವರನ್ನು ಸನ್ಮಾನಿಸಲಾಯಿತು.

ರಂಗಭೂಮಿಯ ಪದಾಧಿಕಾರಿಗಳಾದ ಡಾ.ಎಚ್.ಶಾಂತಾರಾಮ್, ಡಾ. ಅಮ್ಮುಂಜೆ ಅರವಿಂದ ನಾಯಕ್, ಎಂಜಿಎಂ ಪ್ರಾಂಶುಪಾಲೆ ಪ್ರೊ.ಕುಸುಮಾ ಕಾಮತ್ ಉಪಸ್ಥಿತರಿದ್ದರು. ಸಾಹಿತ್ಯ ಅಕಾಡೆಮಿ ಸದಸ್ಯ ಮೇಟಿ ಮುದಿಯಪ್ಪ ಅವರು ದಿ.ಬಿ.ಆರ್.ಕೋಟ್ಯಾನ್, ದಿ.ಭೋಜ ಕರ್ಕೇರ ಸಂಸ್ಮರಣೆ ಮಾಡಿದರು. ವಾಸುದೇವ ರಾವ್ ಸ್ವಾಗತಿಸಿ ಪ್ರದೀಪಚಂದ್ರ ಕುತ್ಪಾಡಿ, ರವಿರಾಜ್ ಎಚ್.ಪಿ. ಕಾರ್ಯಕ್ರಮ ನಿರ್ವಹಿಸಿದರು.

ಫ್ಲೆಕ್ಸ್ ಬೇಡ, ಬಟ್ಟೆ ಬಳಸಿ

 ಪ್ರಕೃತಿ, ಪರಿಸರಕ್ಕೆ ಯಾವುದೇ ರೀತಿಯಲ್ಲಿ ಪೂರಕವಲ್ಲದ ಫ್ಲೆಕ್ಸ್‌ಗಳನ್ನು ಬಳಸದಂತೆ ರಂಗಭೂಮಿ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುವ ಎಲ್ಲರೂ ಇಂದೇ ಪ್ರತಿಜ್ಞೆ ಮಾಡಬೇಕು. ಇದರ ಬದಲು ಬಟ್ಟೆಯ ಬ್ಯಾನರ್ ಬಳಸಬೇಕು. ಇದರಿಂದ ಕಲಾವಿದರಿಗೂ ಅನುಕೂಲವಾಗುತ್ತದೆ. ಈ ಕುರಿತು ಎಚ್ಚೆತ್ತುಕೊಳ್ಳದೆ ಇದ್ದರೆ ಎಲ್ಲರೊಂದಿಗೆ ನಾವೂ ಒಂದಾಗಿ ಮಾತನಾಡುವ ಹಕ್ಕನ್ನೇ ಕಳೆದುಕೊಳ್ಳುತ್ತೇವೆ ಎಂದು ಡಾ.ಬಿ.ವಿ.ಕಾರಂತ ಪ್ರತಿಷ್ಠಾನದ ಮ್ಯಾನೇಜಿಂಗ್ ಟ್ರಸ್ಟಿ ಜಯರಾಮ ಪಾಟೀಲ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News