ಕಳವು ಆರೋಪಿಯ ಸೆರೆ : ಲಕ್ಷಾಂತರ ರೂ.ಮೌಲ್ಯದ ಸೊತ್ತು ವಶ
ಕಾರ್ಕಳ, ಡಿ.14:2015-16ನೇ ಸಾಲಿನಲ್ಲಿ ಕಾರ್ಕಳ ತಾಲೂಕಿನ ಕುಂಟಾಡಿ, ಕೌಡೂರು, ಕಾಡುಹೊಳೆ, ದುರ್ಗಾ, ಮುಂಡ್ಕೂರು, ಮಿಯಾರು ಗ್ರಾಮಗಳಲ್ಲದೇ ಕಾರ್ಕಳ ಪೇಟೆ ಹಾಗೂ ಉಡುಪಿ ತಾಲೂಕಿನ ಗುಡ್ಡೆಂಗಡಿಗಳಲ್ಲಿ ರಾತ್ರಿ ಮನೆ ಬೀಗ ಮುರಿದು ಕಳ್ಳತನ ಮಾಡಿದ ಹಳೆ ಆರೋಪಿ ಉಮಾನಾಥ ಪ್ರಭು (47) ಎಂಬಾತನನ್ನು ಕಾರ್ಕಳ ಪೊಲೀಸರು ಬಂಧಿಸಿ, ಆತನಿಂದ ಲಕ್ಷಾಂತರ ರೂ.ವೌಲ್ಯದ ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಮೂಲತ: ಬೆಳ್ತಂಗಡಿ ತಾಲೂಕು ಲೈಲಾ ಗ್ರಾಮದ ಉಮಾನಾಥ ಪ್ರಭು ಈಗ ಕಾರ್ಕಳ ತಾಲೂಕಿನ ಮಿಯಾರು ಗ್ರಾಮದಲ್ಲಿ ವಾಸವಾಗಿದ್ದಾನೆ. ಕಾರ್ಕಳ ವೃತ್ತದ ಪೊಲೀಸರು ಈತನನ್ನು ಪತ್ತೆ ಮಾಡಿ ಂಧಿಸಿ ಒಟ್ಟು 8 ಮನೆ ಕಳ್ಳತನ ಪ್ರಕರಣ ಹಾಗೂ ಒಂದು ದೇವಸ್ಥಾನ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಒಟ್ಟು 3.50 ಲಕ್ಷರೂ.ವೌಲ್ಯದ 134ಗ್ರಾಂ ಚಿನ್ನಾಭರಣ, 25,000ರೂ.ವೌಲ್ಯದ ಬೆಳ್ಳಿ ಆಭರಣ ಹಾಗೂ 11,000ರೂ. ನಗದು ಮತ್ತು ಒಂದುವಾಚನ್ನು ವಶಪಡಿಸಿಕೊಂಡಿದ್ದಾರೆ.
ಕಾರ್ಕಳ ಉಪವಿಭಾಗದ ಸಹಾಯಕ ಪೊಲೀಸ್ ಅಧೀಕ್ಷಕರಾದ ಡಾ.ಸುಮನ ಡಿ.ಪನೇಕರ್ ಅವರ ನಿರ್ದೇಶನದಂತೆ ಕಾರ್ಕಳ ಪೊಲೀಸ್ ವೃತ್ತ ನಿರೀಕ್ಷಕ ಜಾಯ್ ಅಂತೋನಿ, ಕಾರ್ಕಳ ಗ್ರಾಮಾಂತರ ಠಾಣೆಯ ಪಿಎಸ್‌ಐ ರಫೀಕ್ ಎಂ. ಹಾಗೂ ಸಿಬ್ಬಂದಿಗಳು ಡಿ.4ರಂದು ದೊರೆತ ಖಚಿತ ಬೆರಳಚ್ಚು ಮಾಹಿತಿ ಆಧಾರದಲ್ಲಿ ಮುಂಡ್ಕೂರು ಎಂಬಲ್ಲಿ ಆರೋಪಿಯನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಿ ಸೊತ್ತುಗಳನ್ನು ಪತ್ತೆ ಮಾಡಿ ವಶಪಡಿಸಿಕೊಂಡಿದ್ದಾರೆ.
ಉಮಾನಾಥ ಪ್ರಭು 2007ನೇ ಸಾಲಿನಲ್ಲಿ ಹೆಬ್ರಿ ಠಾಣಾ ವ್ಯಾಪ್ತಿಯಲ್ಲಿ ನಡೆದ ಕಳ್ಳತನಕ್ಕೆ ಸಂಬಂಧಿಸಿ 2008ರಲ್ಲಿ ಒಂದು ವರ್ಷ ಶಿಕ್ಷೆಯನ್ನು ಅನುಭವಿಸಿದ್ದಾಗಿ ಕಾರ್ಕಳ ಪೊಲೀಸರು ತಿಳಿಸಿದ್ದಾರೆ.