×
Ad

ಮಧ್ಯ ಪ್ರದೇಶದಲ್ಲಿ ಕೋಮು ಗಲಭೆ

Update: 2016-12-15 12:11 IST

ಭೋಪಾಲ್, ಡಿ.15: ಆರೆಸ್ಸೆಸ್ ಮುಖಂಡನೊಬ್ಬನ ಸಂಬಂಧಿ ಯುವಕನೊಬ್ಬ ವಾಟ್ಸ್ ಅಪ್ ನಲ್ಲಿ ನೀಡಿದ್ದ ಇಸ್ಲಾಮ್ ವಿರೋಧಿ ಹೇಳಿಕೆ ಸಾಗರ ಪಟ್ಟಣದಲ್ಲಿ ಮತೀಯ ಹಿಂಸೆಗೆ ಕಾರಣವಾಗಿದ್ದು, ಈತನ ಮನೆಗೆ ದೊಡ್ಡ ಸಂಖ್ಯೆಯಲ್ಲಿ ಮುಸ್ಲಿಮರಿರುವ ಗುಂಪೊಂದು ಧಾವಿಸಿದೆಯೆಂದು ಮಾಹಿತಿ ಪಡೆದ ಪೊಲೀಸರು ಸಕಾಲದಲ್ಲಿ ಅಲ್ಲಿಗೆ ಧಾವಿಸಿ ಸನತ್ ಸೋನಿ ಎಂಬ ಆ ಯುವಕನನ್ನು ರಕ್ಷಿಸಿದ ಘಟನೆ ಮಂಗಳವಾರ ರಾತ್ರಿ ನಡೆದಿದೆ.

ಈ ಯುವಕ ಆರೆಸ್ಸೆಸ್ ನಾಯಕ ದಿನೇಶ್ ಸೋನಿಯ ಸೋದರಳಿಯನಾಗಿದ್ದಾನೆ. ಪೊಲೀಸರು ಆತ ಹಾಗೂ ಆತನ ಕುಟುಂಬವನ್ನು ಸುರಕ್ಷಿತ ಸ್ಥಳಕ್ಕೆ ಕರೆದುಕೊಂಡು ಹೋದರು. ಈ ನಡುವೆ ಪ್ರತಿಭನಟನಾಕಾರರು ತೂರಿದ ಕಲ್ಲುಗಳಿಂದಾಗಿ ಪೊಲೀಸ್ ಅಧಿಕಾರಿ ಬಿ.ಎಂ.ತ್ರಿವೇದಿ ಸಹಿತ ಇನ್ನೊಬ್ಬ ಅಧಿಕಾರಿಗೆ ಗಾಯಗಳಾಗಿವೆ. ಸೋನಿ ಮನೆಯತ್ತ ಸುಮಾರು 1000 ಮುಸ್ಲಿಮರು ಪ್ರತಿಭಟಿಸುವ ಸಲುವಾಗಿ ಧಾವಿಸಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಪೊಲೀಸರು ಸಮಯಕ್ಕೆ ಸರಿಯಾಗಿ ಬಾರದೇ ಹೋಗಿದ್ದರೆ, ಕೆಟ್ಟ ಘಟನೆಯೊಂದು ನಡೆದು ಹೋಗುತ್ತಿತ್ತು, ಎಂದು ಸ್ಥಳೀಯ ಬಿಜೆಪಿ ಶಾಸಕ ಶೈಲೇಂದ್ರ ಜೈನ್ ಹೇಳಿದ್ದಾರೆ.

ಸನತ್ ಸೋನಿಯ ವಾಟ್ಸ್ ಅಪ್ ಕಮೆಂಟ್ ಹಿನ್ನೆಲೆಯಲ್ಲಿ ಉಂಟಾದ ಹಿಂಸಾಚಾರದ ಸಂಬಂಧ ಪೊಲೀಸರು ಮೂವರು ಮುಸ್ಲಿಮರನ್ನು ಎನ್ ಎಸ್ ಎ ಕಾಯ್ದೆನ್ವಯ ಬಂಧಿಸಿ ಜೈಲಿಗಟ್ಟಿದ್ದಾರೆ. ಈ ಹಿಂಸಾಚಾರದ ಸಂಬಂಧ ಈಗಾಗಲೇ ಹಲವು ಮುಸ್ಲಿಮರ ವಿರುದ್ಧ ಪ್ರಕರಣ ದಾಖಲಾಗಿದೆ.

ತರುವಾಯ ಪರ್ಕೊಟ ಪ್ರದೇಶದಲ್ಲಿರುವ ಆರೆಸ್ಸೆಸ್ ಕಚೇರಿ ಬಳಿ ದೊಡ್ಡ ಸಂಖ್ಯೆಯಲ್ಲಿ ಸೇರಿದ ಬಿಜೆಪಿ ಹಾಗೂ ಆರೆಸ್ಸೆಸ್ ನಾಯಕರು ಸದರ್ ಪ್ರದೇಶದಲ್ಲಿ ಆರೋಪಿಗಳಿಗಾಗಿ ಪೊಲೀಸರು ಶೋಧಿಸಬೇಕೆಂದು ಆಗ್ರಹಿಸಿದರು. ಸಾಗರ ಎಸ್ಪಿ ಸಚಿನ್ ಅತುಲ್ಕರ್ ಮಧ್ಯ ರಾತ್ರಿಯ ಹೊತ್ತಿಗೆ ಆರೆಸ್ಸೆಸ್ ಕಚೇರಿಗೆ ತೆರಳಿ ಅಲ್ಲಿದ್ದ ನಾಯಕರಿಂದ ಮನವಿ ಸ್ವೀಕರಿಸಿದರು.

ನಗರದಲ್ಲಿ ಯಾವುದೇ ಮೆರವಣಿಗೆ ನಡೆಸಲು ಅನುಮತಿಯಿಲ್ಲ ಎಂದು ಎಸ್ಪಿ ಹೇಳಿದ್ದಾರೆ. ಪರಿಸ್ಥಿತಿ ಈಗ ನಿಯಂತ್ರಣದಲ್ಲಿದೆಯೆಂದು ತಿಳಿದು ಬಂದಿದೆ.

ಆದರೆ ಬಂಧಿತರ ವಿರುದ್ಧ ಎನ್ ಎಸ್ ಎ ಅನ್ವಯ ಪ್ರಕರಣ ದಾಖಲಿಸಲು ಜಿಲ್ಲಾಧಿಕಾರಿ ಅನುಮತಿ ಅಗತ್ಯವಾಗಿದ್ದು ಈ ಬಗ್ಗೆ ಇಲ್ಲಿಯವರೆಗೆ ಅವರು ಯಾವುದೇ ಹೇಳಿಕೆ ನೀಡಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News