×
Ad

ಮೋದಿ ಅಧಿಕಾರದಲ್ಲಿ ಮುಂದುವರಿಯಲು ಯಾವ ಯೋಗ್ಯತೆಯೂ ಇಲ್ಲ: ಪೂಜಾರಿ

Update: 2016-12-15 12:42 IST

ಮಂಗಳೂರು, ಡಿ.15:  ಬ್ಯಾಂಕ್ ಎಟಿಎಂಗಳಲ್ಲಿ ಹಣ ಇಲ್ಲದೆ ಜನರು ಕಂಗಾಲಾಗಿದ್ದು, ಯಾರಲ್ಲೂ ಚರ್ಚಿಸದೆ ಏಕಾಏಕಿ 500ರೂ. ಹಾಗೂ 1000ರೂ. ನೋಟು ರದ್ದುಗೊಳಿಸಿರುವುದು ಮೂರ್ಖತನದ ಪರಮಾವಧಿ. ಪ್ರಧಾನಿ ಮೋದಿ ಅಧಿಕಾರದಲ್ಲಿ ಮುಂದುವರಿಯಲು ಯಾವ ಯೋಗ್ಯತೆಯೂ ಇಲ್ಲ ಎಂದು ಕಾಂಗ್ರೆಸ್ ಮುಖಂಡ ಜನಾರ್ದನ ಪೂಜಾರಿ ಹೇಳಿದ್ದಾರೆ.

ನೋಟು ರದ್ದುಗೊಂಡಿರುವುದರಿಂದ ಕೂಲಿ ಕೆಲಸಗಾರರು, ರೈತರು, ವಿದ್ಯಾರ್ಥಿಗಳು ಸಂಕಷ್ಟಕ್ಕೀಡಾಗಿದ್ದು, ಇಲ್ಲಿಯವರೆಗೆ ಯಾವುದೇ ಪರ್ಯಾಯ ವ್ಯವಸ್ಥೆ  ಕೈಗೊಂಡಿಲ್ಲ. ನೋಟು ರದ್ದುಗೊಳಿಸಿದಕ್ಕೆ ಪ್ರಧಾನಿಗೆ ಮೊದಲು ಶೇ.90 ಜನ ಬೆಂಬಲಿಸಿದ್ದರೆ ಈಗ 30 ಶೇಕಡ ಬೆಂಬಲ ಇದೆ.

ಪ್ರಧಾನಿ ಮೋದಿ ಬಿಜೆಪಿ ಪಕ್ಷದಲ್ಲಿ ಇರುವ ಇತರ ನಾಯಕರಿಗೆ ಅಧಿಕಾರ ಬಿಟ್ಟುಕೊಡಬೇಕು. ದೇಶದ ಹಿತದೃಷ್ಟಿಯಿಂದ ಇದು ಅಗತ್ಯ ಎಂದು ಅವರು ಹೇಳಿದರು.

ಜಗತ್ತಿನಲ್ಲಿ ಎಲ್ಲಿಯೂ ಕ್ಯಾಶ್ ಲೆಸ್ ಸೊಸೈಟಿ ಇಲ್ಲ. ಅಮೆರಿಕ, ಜಪಾನ್, ಸ್ವಿಝರ್ ಲ್ಯಾಂಡ್ ನಲ್ಲಿ ಮುಂತಾದ ದೇಶಗಳಲ್ಲಿ  ಕ್ಯಾಶ್ ಲೆಸ್ ವ್ಯವಸ್ಥೆ ಇಲ್ಲ ಎಂದು ಅವರು ಹೇಳಿದರು.

ಹೆಚ್ ವೈ ಮೇಟಿ ರಾಸಲೀಲೆ ಪ್ರಕರಣದ ಬಗ್ಗೆ ಮಾತನಾಡಿದ ಅವರು, ಸಿಐಡಿ ತನಿಖೆಯು ಸಿಎಂ ಅಡಿಯಲ್ಲಿ ಬರುವುದರಿಂದ ಮೇಟಿ ಪ್ರಕರಣವನ್ನು ಸಿಬಿಐಗೆ ಒಪ್ಪಿಸಬೇಕು. ಸಿಐಡಿ ತನಿಖೆ ಮಾಡಿದರೆ ಯಾರಿಗೂ ನಂಬಿಕೆ ಬರುವುದಿಲ್ಲ ಎಂದು ಕಾಂಗ್ರೆಸ್ ಮುಖಂಡ ಜನಾರ್ದನ ಪೂಜಾರಿ ಒತ್ತಾಯಿಸಿದರು. 

ಮುಖ್ಯಮಂತ್ರಿ ಸಿದ್ದರಾಮಯ್ಯ ಮೇಟಿ ಪ್ರಕರಣವನ್ನು ಸಿಐಡಿ ತನಿಖೆಗೆ ನೀಡುವ  ಬಗ್ಗೆ ಹೇಳಿಕೆ ನೀಡಿದ ಹಿನ್ನೆಲೆಯಲ್ಲಿ ಮಾತನಾಡಿದ ಅವರು, ಆರ್ ಟಿಐ ಕಾರ್ಯಕರ್ತ ರಾಜಶೇಖರ್  ಅವರು ಇನ್ನು 3 ಶಾಸಕ, 2 ಸಚಿವರು ಕಾಮಲೀಲೆಯಲ್ಲಿ ಇದ್ದಾರೆ ಎಂಬ ಸುಳಿವು ನೀಡಿದ್ದಾರೆ. ರಾಜಶೇಖರ ಅವರು ಅವರ ಹೆಸರುಗಳನ್ನು ಬಯಲು ಮಾಡಬೇಕು. ಇಂತಹ ಪ್ರಕರಣದಲ್ಲಿ ಇರುವ ಶಾಸಕರನ್ನು ಪಕ್ಷದಿಂದ ಉಚ್ಛಾಟಿಸಬೇಕು ಎಂದು ಅವರು ಹೇಳಿದರು.

ರಾಜಶೇಖರ ಅವರನ್ನು ಸಿಎಂ ಯಾಕೆ  ಸಂಪರ್ಕಿಸಲಿಲ್ಲ. ರಾಜಶೇಖರ ಅವರು ಇನ್ನು ಸಚಿವ, ಶಾಸಕರ ಸಿಡಿ ಬಯಲು ಮಾಡುವ ಮೊದಲು ಸಿಎಂ ಅದನ್ನು ಪತ್ತೆ ಹಚ್ಚಿ ಕ್ರಮ ಕೈಗೊಳ್ಳಬೇಕು. ಸಿಡಿ ತರಿಸುವ ತಾಕತ್ತು ಸಿಎಂಗಿಲ್ಲವೇ ಎಂದು ಅವರು ಪ್ರಶ್ನಿಸಿದರು.

ಪಕ್ಷ ನಾಶವಾಗುತ್ತದೆ ಎಂಬ ಅಂಜಿಕೆ ಸಿಎಂಗೆ ಇಲ್ಲ. ಪಕ್ಷ ಅವರ ಉತ್ತರ ಬಯಸುತ್ತಿದೆ. ಹೈಕಮಾಂಡ್ ಸಿದ್ದರಾಮಯ್ಯ ಅವರಿಗೆ ನೀಡಿರುವ ಉದ್ದದ ಹಗ್ಗ ಸಿಎಂ ಕುತ್ತಿಗೆಗೆ ಬರಲಿದೆ ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News