ವಿಶ್ವದ ಪ್ರಬಲ ವ್ಯಕ್ತಿಗಳ ಪಟ್ಟಿಯಲ್ಲಿ ಯುಎಇ ಅಧ್ಯಕ್ಷ ಶೇಖ್ ಖಲೀಫಾ
ದುಬೈ,ಡಿ.15: ಸಂಯುಕ್ತ ಅರಬ್ ಗಣರಾಜ್ಯ(ಯುಎಇ)ದ ಅಧ್ಯಕ್ಷ ಶೇಖ್ ಖಲೀಫಾ ಬಿನ್ ಝಾಯೆದ್ ಅಲ್ ನಹ್ಯಾನ್ ಅವರು ಫೋರ್ಬ್ಸ್ ಬಿಡುಗಡೆಗೊಳಿಸಿರುವ 2016ರ ವಿಶ್ವದ ಅತ್ಯಂತ ಪ್ರಬಲ ವ್ಯಕ್ತಿಗಳ ಪಟ್ಟಿಯಲ್ಲಿದ್ದಾರೆ.
ನಹ್ಯಾನ್ ಅವರು ಪಟ್ಟಿಯಲ್ಲಿ 39ನೇ ಸ್ಥಾನದಲ್ಲಿದ್ದರೆ, ಸೌದಿ ಅರೇಬಿಯಾದ ದೊರೆ ಸಲ್ಮಾನ್ ಬಿನ್ ಅಬ್ದುಲ್‌ಜೀಜ್ ಅಲ್ ಸೌದ್ ಅವರು 16ನೇ ಸ್ಥಾನದಲ್ಲಿದ್ದಾರೆ.
ನಹ್ಯಾನ್ ಅವರ ಸಾಧನೆಗಳ ಕುರಿತಂತೆ ಫೋರ್ಬ್ಸ್, ಯುಎಇ ಅಧ್ಯಕ್ಷರು 97.8 ಬಿಲಿಯನ್ ಬ್ಯಾರೆಲ್‌ಗಳಷ್ಟು ತೈಲ ನಿಕ್ಷೇಪದ ಮೇಲೆ ನಿಯಂತ್ರಣ ಹೊಂದಿರುವುರಾದರೂ ಅವರು ವಿಶ್ವದ ಅತ್ಯಂತ ದೊಡ್ಡ ಸಾರ್ವಭೌಮ ಸಂಪತ್ತು ನಿಧಿಗಳಲ್ಲೊಂದಾಗಿರುವ 800 ಬಿಲಿಯನ್ ಡಾಲರ್ ಮೌಲ್ಯದ ಆಸ್ತಿಗಳನ್ನೂ ನಿರ್ವಹಿಸುತ್ತಿದ್ದಾರೆ ಎಂದು ಹೇಳಿದೆ.
ಈ ವರ್ಷದ ಫೋರ್ಬ್ಸ್ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿ ರಷ್ಯಾದ ಅಧ್ಯಕ್ಷ ವ್ಲಾದಿಮಿರ್ ಪುತಿನ್ ಇದ್ದರೆ, ನಂತರದ ಸ್ಥಾನಗಳಲ್ಲಿ ಅಮೆರಿಕದ ನಿಯೋಜಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಜರ್ಮನಿಯ ಚಾನ್ಸಲರ್ ಏಂಜಲಾ ಮರ್ಕೆಲ್ ಇದ್ದಾರೆ.