ವಿದ್ವಾನ್ ಕೆ. ಮುರಳೀಧರ್ ರಾವ್‌ಗೆ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ
ಮಂಗಳೂರು, ಡಿ.15: ನೃತ್ಯಗುರು ವಿದ್ವಾನ್ ಕಾಸರಗೋಡು ಮುರಳೀಧರ ರಾವ್ ಅವರಿಗೆ ಗುರುವಾರ ನಗರದ ಸನಾತನ ನಾಟ್ಯಾಲಯದ ಸಭಾಂಗಣದಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ರಾಜ್ಯೋತ್ಸವ ಪ್ರಶಸ್ತಿಯನ್ನು ರಾಜ್ಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವೆ ಉಮಾಶ್ರೀ ಪ್ರದಾನ ಮಾಡಿದರು.
93ರ ಹರೆಯದ ಮುರಳೀಧರ ರಾವ್‌ಗೆ ಪ್ರಸಕ್ತ ಸಾಲಿನ ರಾಜ್ಯೋತ್ಸವ ಪ್ರಶಸ್ತಿ ಲಭಿಸಿತ್ತು. ಆದರೆ ವಯೋಸಹಜ ಕಾರಣದಿಂದ ಅವರು ಬೆಂಗಳೂರಿಗೆ ತೆರಳಲು ಸಾಧ್ಯವಾಗಿರಲಿಲ್ಲ. ಆ ಹಿನ್ನೆಲೆಯಲ್ಲಿ ಮುರಳೀಧರ ರಾವ್‌ಗೆ ಮಂಗಳೂರಿನಲ್ಲಿ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.
ಬಳಿಕ ಮಾತನಾಡಿದ ಅವರು ಸಚಿವೆ ಉಮಾಶ್ರೀ, ವಿದ್ವಾನ್ ಮುರಳೀಧರ ರಾವ್ ಶಾಸ್ತ್ರೀಯ ಕಲೆಗಾಗಿ ತನ್ನ ಬದುಕನ್ನೇ ಮುಡಿಪಾಗಿಟ್ಟಿದ್ದರು. ನೃತ್ಯ ಕಲೆಯನ್ನು ತಪಸ್ಸು ಎಂಬಂತೆ ಕರಗತ ಮಾಡಿಕೊಂಡಿದ್ದರು. ಆ ಬಗ್ಗೆ ಸಂಶೋಧನೆ ನಡೆಸಿ ಯುವ ಪೀಳಿಗೆಗೆ ಮಾರ್ಗದರ್ಶಕರಾಗಿದ್ದರು ಎಂದರಲ್ಲದೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಸಾಂಸ್ಕೃತಿಕ ಕ್ಷೇತ್ರದಲ್ಲಿ ಅರ್ಹರನ್ನು ಹುಡುಕಾಡಿ ಪ್ರಶಸ್ತಿ ನೀಡುತ್ತದೆ. ಅರ್ಜಿ ಸಲ್ಲಿಸದೆ ಪ್ರಶಸ್ತಿ ಪಡೆದ ಹಿರಿಯ ಚೇತನರಲ್ಲಿ ಅವರೂ ಒಬ್ಬರು. ಇದರಿಂದ ಪ್ರಶಸ್ತಿಯ ಮೌಲ್ಯವೂ ಹೆಚ್ಚುತ್ತದೆ ಎಂದು ಅಭಿಪ್ರಾಯಪಟ್ಟರು.
ವೇದಿಕೆಯಲ್ಲಿ ನೃತ್ಯಗುರು ಉಳ್ಳಾಲ ಮೋಹನ ಕುಮಾರ್, ಕರಾವಳಿ ನೃತ್ಯ ಪರಿಷತ್ ಅಧ್ಯಕ್ಷ ಕಮಲಾಕ್ಷ ಆಚಾರ್, ಜಾನಪದ ವಿದ್ವಾಸ ಎ.ವಿ. ನಾವಡ, ಸನಾತನ ನಾಟ್ಯಾಲಯದ ನಿರ್ದೇಶಕ ಚಂದ್ರಶೇಖರ ಕೆ. ಶೆಟ್ಟಿ ಉಪಸ್ಥಿತರಿದ್ದರು.