×
Ad

‘ಸಾಗಾರಮಾಲ ಯೋಜನೆ’ ಸಿದ್ಧಪಡಿಸಲು ಲೋಬೊ ಸೂಚನೆ

Update: 2016-12-15 15:56 IST

ಮಂಗಳೂರು, ಡಿ.15: ಕೂಳೂರಿನಿಂದ ತಣ್ಣೀರುಬಾವಿಯಾಗಿ ಸುಲ್ತಾನ್‌ಬತ್ತೇರಿ ಮೂಲಕ ಹಳೆಬಂದರು ತಲುಪಿ ಹೆದ್ದಾರಿ ಜೋಡಿಸುವ ಸಾಗರಮಾಲ ಯೋಜನೆಗೆ ರೂಪುರೇಷೆ ಸಿದ್ಧಪಡಿಸುವಂತೆ ಶಾಸಕ ಜೆ.ಆರ್.ಲೋಬೊ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಈ ಯೋಜನೆ ಕುರಿತು ತನ್ನ ಕಚೇರಿಯಲ್ಲಿ ವಿವಿಧ ಅಧಿಕಾರಿಗಳ ಜೊತೆ ಸಮಾಲೋಚನೆ ನಡೆಸಿದ ಅವರು ಈ ಯೋಜನೆ ಪೂರ್ಣಗೊಂಡರೆ ಎನ್‌ಎಂಪಿಟಿ ಹಳೆಬಂದರು ಮತ್ತು ಹೆದ್ದಾರಿ ನಡುವೆ ಸಂಪರ್ಕ ಜೋಡಿಸುತ್ತದೆ. ಇದು ಕಾರ್ಯರೂಪಕ್ಕೆ ಬಂದರೆ ವಾಣಿಜ್ಯ ಮತ್ತು ಪ್ರವಾಸೋದ್ಯಮಕ್ಕೂ ಹೆಚ್ಚಿನ ಒತ್ತು ಸಿಗಲಿದೆ. ಈ ಹಿನ್ನೆಲೆಯಲ್ಲಿ ಈ ಯೋಜನೆಯನ್ನು ಕೈಗೊಳ್ಳಲು ರಾಷ್ಟ್ರೀಯ ಹೆದ್ದಾರಿ, ಲೋಕೋಪಯೋಗಿ ಮತ್ತು ಬಂದರು ಇಲಾಖೆ ಅಧಿಕಾರಿಗಳು ಸಹಮತ ಹೊಂದಿ ಈ ಯೋಜನೆಯ ಅಧ್ಯಯನ ವರದಿಯನ್ನು ತಯಾರಿಸುವಂತೆ ತಿಳಿಸಿದರು.
ಈಗ ಸುಲ್ತಾನ್‌ಬತ್ತೇರಿ ಸಮೀಪ ತೂಗು ಸೇತುವೆ ನಿರ್ಮಿಸುವ ಕುರಿತು ಯೋಚಿಸಲಾಗಿದೆ. ತೂಗುಸೇತು ಬದಲು ಖಾಯಂ ಆಗಿ ಸೇತುವೆ ನಿರ್ಮಾಣ ಮಾಡಿದರೆ ಉಪಯುಕ್ತವಾಗುತ್ತದೆ. ಇದಕ್ಕೆ ಜಾಗದ ಸಮಸ್ಯೆಯೂ ಉದ್ಭವಿಸದು. ಈಗಾಗಲೇ ಸಿಆರ್‌ಝೆಡ್ ವ್ಯಾಪ್ತಿಯಲ್ಲಿರುವುದರಿಂದ ಸಮಸ್ಯೆ ಇಲ್ಲ ಎಂದೂ ಶಾಸಕ ಜೆ.ಆರ್.ಲೋಬೊ ತಿಳಿಸಿದರು.

 ಸಾಗರಮಾಲ ಯೋಜನೆ ಸಾಕಾರಗೊಳ್ಳಲು ಎನ್‌ಎಂಪಿಟಿ, ಹಳೆಬಂದರು ಮೂಲಕ ಕಾಮಗಾರಿ ಆರಂಭಗೊಳ್ಳಬೇಕು. ಈ ಯೋಜನೆಯ ಬಗ್ಗೆ ಅಂದಾಜು ಪತ್ರ ತಯಾರಿಸುವ ಬಗ್ಗೆ ಕಟ್ಟಡದ ತಾಂತ್ರಿಕ ಸಲಹೆಗಾರ ಧರ್ಮರಾಜ್‌ಗೆ ಶಾಸಕ ಲೋಬೋ ಸೂಚಿಸಿದರು.
ಸಭೆಯಲ್ಲಿ ಮುಡಾ ಅಧ್ಯಕ್ಷ ಕೆ.ಸುರೇಶ್ ಬಲ್ಲಾಳ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News