×
Ad

ಮೂಡುಬಿದಿರೆ ಪುರಸಭೆಯಿಂದ ಜನವಿರೋಧಿ ಧೋರಣೆ : ಜೆಡಿಎಸ್ ಆರೋಪ

Update: 2016-12-15 17:45 IST

ಮೂಡುಬಿದಿರೆ , ಡಿ. 15 :  ಕಳೆದ 30 ತಿಂಗಳ ಹಿಂದೆ ಮೂಡುಬಿದಿರೆ ಪುರಸಭೆಯಲ್ಲಿ ಕಾಂಗ್ರೆಸ್ ಪಕ್ಷವು ಸ್ಪಷ್ಟ ಬಹುಮತದಿಂದ ಅಧಿಕಾರ ಚುಕ್ಕಾಣಿಯನ್ನು ಹಿಡಿದಿತ್ತು. ಮೂಡುಬಿದಿರೆ ಪುರಸಭೆಯ ವ್ಯಾಪ್ತಿಯ ಜನಸಾಮಾನ್ಯರಿಗೆ ಬಹಳಷ್ಟು ನಿರೀಕ್ಷೆ ಈ ಸಂದರ್ಭದಲ್ಲಿದ್ದು, ಮೂಡುಬಿದಿರೆ ಪುರಸಭೆಯ ಜನವಿರೋಧಿ ಧೋರಣೆ ಹೆಚ್ಚಿನ ಅಭಿವೃದ್ಧಿ ಕಾರ್ಯಗಳು ನಡೆಯದೆ, ಕೇವಲ ಅಧಿಕಾರಕೋಸ್ಕರ ಅಧ್ಯಕ್ಷ, ಉಪಾಧ್ಯಕ್ಷ ಮತ್ತು ಸ್ಥಾಯಿ ಸಮಿತಿ ಅಧ್ಯಕ್ಷರ ಆಯ್ಕೆಯಲ್ಲೇ ಕಾಲಹರಣ ಮಾಡುತ್ತಿದೆ ಎಂದು ಜಾತ್ಯಾತೀತ ಜನತಾದಳದ ಅಧ್ಯಕ್ಷ ಅಶ್ವಿನಿ ಜೆ.ಪಿರೇರಾ ಆರೋಪಿಸಿದ್ದಾರೆ.

 ಅವರು ಗುರುವಾರದಂದು ಮೂಡುಬಿದಿರೆ ಪ್ರೆಸ್‌ಕ್ಲಬ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾತನಾಡಿದರು. ಕಳೆದ ಮೂವತ್ತು ತಿಂಗಳಲ್ಲಿ ಮೂಡುಬಿದಿರೆ ಪುರಸಭೆ ಇತಿಹಾಸದಲ್ಲಿಯೇ ಒಂದೇ ಪಕ್ಷದ ಮೂರು ಅಧ್ಯಕ್ಷರು, ಮೂರು ಉಪಾಧ್ಯಕ್ಷರು ಮತ್ತು ಸ್ಥಾಯಿಸಮಿತಿಯ ಅಧ್ಯಕ್ಷರ ನೇಮಕವಾಗಿರುವುದನ್ನು ಆಗುತ್ತಿರುವುದು ವಿಷಾದನೀಯ ಸಂಗತಿ. ಈ ಬಗ್ಗೆ ಜಾತ್ಯಾತೀತ ಜನತಾದಳ ಮೂಡುಬಿದಿರೆ ಕ್ಷೇತ್ರ ವತಿಯಿಂದ ನಾನು ತೀವ್ರವಾಗಿ ವಿರೋಧಿಸುತ್ತೇನೆ.

 ಕಾಂಗ್ರೆಸ್ ಪಕ್ಷದ ಶಾಸಕರು ಈ ಬದಲಾವಣೆಗಳ ಬಗ್ಗೆ ಸಾರ್ವಜನಿಕರಿಗೆ ಸೂಕ್ತವಾದ ಮಾಹಿತಿಯನ್ನು ನೀಡಬೇಕು. ಪುರಸಭಾ ವ್ಯಾಪ್ತಿಯ ಮತದಾರರು ಪುರಸಭೆಗೆ ಆಯ್ಕೆ ಮಾಡಿದ ಸದಸ್ಯರು ಕೇವಲ ತಮ್ಮ ರಾಜಕೀಯ ಹಿತಾಸಕ್ತಿಗೋಸ್ಕರ ತಮ್ಮಅಧಿಕಾರ ಆಸೆಗೋಸ್ಕರ ಮತ್ತು ಭೃಷ್ಟಾಚಾರವನ್ನು ಬೆಂಬಲಿಸುವ ಉದ್ದೇಶದಿಂದ ಈ ರೀತಿಯ ಬದಲಾವಣೆಗಳು ಆಗುತ್ತಿದೆ ಎನ್ನುವುದು ಸಾರ್ವಜನಿಕರ ಅಭಿಪ್ರಾಯ.

 ಇದರಿಂದ ಮೂಡುಬಿದಿರೆ ಪುರಸಭಾ ವ್ಯಾಪ್ತಿಯಲ್ಲಿ ಅಭಿವೃದ್ಧಿ ಕೆಲಸಗಳು ಸಂಪೂರ್ಣವಾಗಿ ಕುಂಠಿತವಾಗಿದೆ. 15 ತಿಂಗಳಿಗೊಮ್ಮೆ ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ಸ್ಥಾಯಿ ಸಮಿತಿಯ ಅಧ್ಯಕ್ಷರ ಬದಲಾವಣೆಯು ಪುರಸಭಾ ಅಧಿಕಾರಿಗಳ ಮೇಲು ತೀವ್ರ ರೀತಿಯ ಪರಿಣಾಮವಿತ್ತು ಅಭಿವೃದ್ಧಿ ಕೆಲಸ ಮಾಡುವಲ್ಲಿ ಅವರನ್ನೂ ನಿಷ್ಕ್ರೀಯಗೊಳಿಸಿದೆ. ಮೂಡುಬಿದಿರೆ ಜನತೆಯ ಕೂಗಾದ ಒಳಚರಂಡಿ ವ್ಯವಸ್ಥೆ, ಸುಸಜ್ಜಿತ ಮಾರುಕಟ್ಟೆ ನಿರ್ಮಾಣ, ಪಾರ್ಕಿಂಗ್ ಸುವ್ಯವಸ್ಥೆ, ಸಮರ್ಪಕ ತ್ಯಾಜ್ಯ ವಿಲೇವಾರಿ ಆಗದಿರುವುದು, ಮೂಡುಬಿದಿರೆಯ ಪ್ರಮುಖ ರಸ್ತೆಗಳು ದುರಸ್ತಿಯಾಗದಿರುವುದು ಇದಕ್ಕೆ ಪ್ರಮುಖ ಸಾಕ್ಷಿಯಾಗಿದೆ.
  
  ಈ ಸಂದರ್ಭದಲ್ಲಿ ಪ್ರಬಲ ವಿರೋಧ ಪಕ್ಷವಾದ ಬಿಜೆಪಿಯು ಸುಮ್ಮನಿರುವುದು ಮತ್ತೊಂದು ವಿಪರ್ಯಾಸ. ಈ ಎಲ್ಲ ಬೆಳವಣಿಗೆಗಳಿಗೆ ಬಿಜೆಪಿಯಿಂದ ಆಯ್ಕೆಯಾದಂತಹ ಸದಸ್ಯರು ಸುಮ್ಮನಿರುವುದು ಪರೋಕ್ಷವಾಗಿ ಕಾಂಗ್ರೆಸ್ ಮತ್ತು ಬಿಜೆಪಿ ಸದಸ್ಯರ ಒಳ ಒಪ್ಪಂದವಾಗಿರುವುದೇ?  ಎಂಬ ಸಂಶಯವು ಮೇಲ್ನೋಟಕ್ಕೆ ಕಂಡುಬರುತ್ತದೆ. ಇದಕ್ಕೆ ಸಂಬಂಧಪಟ್ಟ ಕಾಂಗ್ರೆಸ್ ಮತ್ತು ಬಿಜೆಪಿಯ ಸದಸ್ಯರು ಸೂಕ್ತ ರೀತಿಯ ಉತ್ತರವನ್ನು ಸಾರ್ವಜನಿಕರಿಗೆ ಹಾಗೂ ಮತದಾರರಿಗೆ ನೀಡಬೇಕು. ಇಲ್ಲವಾದಲ್ಲಿ ಜತ್ಯಾತೀತ ಜನತಾದಳ ಪಕ್ಷದ ವತಿಯಿಂದ ಮುಂಬರುವ ದಿನಗಳಲ್ಲಿ ಪುರಸಭಾ ಕಚೇರಿಗೆ ಮುತ್ತಿಗೆ ಹಾಕಿ ಬೀಗ ಜಡಿಯಲಾಗುವುದು.

 ಮೂಡುಬಿದಿರೆ ವಿಧಾನಸಭಾ ಕ್ಷೇತ್ರದಲ್ಲಿ ಕಳೆದ 20ವರ್ಷಗಳಿಂದ ಆಯ್ಕೆಯಾದಂತಹ ನಮ್ಮ ಶಾಸಕರು ಯಾವುದೇ ರೀತಿಯ ಶಾಶ್ವತ ಯೋಜನೆಗಳನ್ನು ಜಾರಿಗೆ ತರುವಲ್ಲಿ ವಿಫಲರಾಗಿರುವುದನ್ನು ಈ ಸಂದರ್ಭದಲ್ಲಿ ನಾನು ತೀವ್ರವಾಗಿ ಖಂಡಿಸುತ್ತೇನೆ. ನಮ್ಮ ಬಹುದಿನದ ಬೇಡಿಕೆಯಾದ ತಾಲೂಕು ರಚನೆ, ಸರ್ಕಾರಿ ಪದವಿಪೂರ್ವ ಕಾಲೇಜು, ಸರ್ಕಾರಿ ಪಾಲಿಟೆಕ್ನಿಕ್ ಹಾಗೂ ಇಂಜಿನಿಯರಿಂಗ್ ಕಾಲೇಜು, ಮೂಲ್ಕಿ, ಮೂಡುಬಿದಿರೆ, ಕಿನ್ನಿಗೋಳಿ, ಬಜ್ಪೆನಗರಗಳಿಗೆ ಶಾಶ್ವತ ಕುಡಿಯುವ ನೀರಿನ ಯೋಜನೆ, ಮೂಲ್ಕಿ ಮತ್ತು ಮೂಡುಬಿದಿರೆಯಲ್ಲಿ ಸುಸಜ್ಜಿತವಾದ ಸಬ್ ರಿಜಿಸ್ಟ್ರಾರ್ ಕಚೇರಿ ನಿರ್ಮಾಣವಾಗದೇ ಇರುವುದು, ಒಳಚರಂಡಿ ವ್ಯವಸ್ಥೆ ಇವೆಲ್ಲವೂ ಶಾಸಕರ ವೈಫಲ್ಯತೆಗಳಾಗಿವೆ. ಇದೀಗ ಮುಂದಿನ ವಿಧಾನಸಭಾ ಚುನಾವಣೆಗೆ ಈಗಿನ ಶಾಸಕರು ಸ್ಪರ್ಧಿಸುವುದಿಲ್ಲವೆಂದು ಹೇಳಿಕೆ ನೀಡಿರುವುದು ಹಾಸ್ಯಾಸ್ಪದವಾಗಿರುತ್ತದೆ.

  ಕಳೆದ 20 ವರ್ಷದ ಅವಧಿಯಲ್ಲಿ ಯಾವುದೇ ರೀತಿಯ ಅಭಿವೃದ್ಧಿ ಕೆಲಸಗಳು ಮಾಡದೇ ಇರುವುದರಿಂದ ಅವರು ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸದೇ ಇರುವುದಕ್ಕಿಂತ ಈಗಾಗಲೇ ಅವರ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಸೋಲನ್ನು ಒಪ್ಪಿಕೊಳ್ಳುವುದು ಸೂಕ್ತವಾಗಿರುತ್ತದೆ ಎನ್ನುವುದು ಜನರ ಅಭಿಪ್ರಾಯ ಎಂದು ಅಶ್ವಿನ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News