×
Ad

ಕ್ರಿಸ್ಮಸ್ ಹಬ್ಬಕ್ಕೆ ಸಾಮೂಹಿಕ ಕುಸ್ವಾರ್ ತಯಾರಿ

Update: 2016-12-15 17:52 IST

ಬ್ರಹ್ಮಾವರ/ ಕೋಟ, ಡಿ.15 :  ಕ್ರೈಸ್ತ ಸಮುದಾಯದ ಅತಿ ದೊಡ್ಡ ವಿಶ್ವದಾದ್ಯಂತ ಸಂಭ್ರಮದಿಂದ ಆಚರಿಸುವ ಕ್ರಿಸ್ಮಸ್ ಆಚರಣೆಗೆ ವಿಶ್ವವೇ ಸಜ್ಜಾಗುತ್ತಿದ್ದು,  ಉಡುಪಿ ಜಿಲ್ಲೆ ಕೂಡ ಅದಕ್ಕಿಂತ ಹೊರತಾಗಿಲ್ಲ. ಅಂಗಡಿಗಳಲ್ಲಿ ನೇತು ಹಾಕಿರುವ ನಕ್ಷತ್ರಗಳು, ಚರ್ಚಿನ ಆವರಣದಲ್ಲಿ ನಿರ್ಮಾಣಗೊಳ್ಳುತ್ತಿರುವ ಬೃಹತ್ ಗಾತ್ರದ ಯೇಸುವಿನ ಜನನದ ಸಂದೇಶವನ್ನು ಸಾರುವ ಗೋದಲಿಗಳು, ಬೇಕರಿಗಳಲ್ಲಿ ಪ್ರದರ್ಶನಕ್ಕಿಟ್ಟಿರುವ ಬ್ರಹತ್ ಗಾತ್ರದ ಕೇಕ್ ಹಾಗೂ ಇತರ ತಿಂಡಿಗಳು ಯೇಸುವಿನ ಜನನದ ಆಗಮನವನ್ನು ಸಾರುತ್ತವೆ.

ಅದರಂತೆ ಕ್ರಿಸ್ಮಸ್ ಹಬ್ಬದಲ್ಲಿ ಕ್ರೈಸ್ತ ಸಮುದಾಯದವರ ಮನೆಯಲ್ಲಿ ತಯಾರಿಸುವ ಕ್ರಿಸ್ಮಸ್ ಹಬ್ಬದ ವಿಶೇಷ ತಿಂಡಿಯಾದ ಕುಸ್ವಾರ್ ತಯಾರಿಯು ಕೂಡ ಮತ್ತೊಂದು ಕ್ರಿಸ್ಮಸ್ ಹಬ್ಬದ ಸಂದೇಶ ಸಾರುತ್ತವೆ. ಇದರಂತೆ ಕ್ರೈಸ್ತರು ವಾರದ ಮೊದಲೇ ತಿಂಡಿಗಳ ತಯಾರಿ ಬಲುಜೋರಾಗಿ ಆರಂಭವಾಗಿದೆ.

ಉಡುಪಿ ತಾಲೂಕಿನ ಬ್ರಹ್ಮಾವರ ಸಮೀಪದ ಪಾಂಡೇಶ್ವರ-ಸಾಸ್ತಾನ ಕ್ರೈಸ್ತ ಸ್ವಸಹಾಯ ಸಂಘಟನೆಗಳು, ಹಾಗೂ ಯುನಾಯ್ಟೆಡ್ ಕ್ರಿಶ್ಚಿಯನ್ ಎಸೋಸಿಯೇಶನ್ ಕುಂದಾಪುರ-ಉಡುಪಿ ವಲಯ ಇವರುಗಳ ಜಂಟಿ ಆಶ್ರಯದಲ್ಲಿ ಸದಸ್ಯರುಗಳು ಸಾಮೂಹಿಕವಾಗಿ ಕುಸ್ವಾರ್ (ಕ್ರಿಸ್ಮಸ್ ವಿಶೇಷ ತಿಂಡಿಗಳ ತಯಾರಿ) ಗುರುವಾರ ತಯಾರಿಸಿದರು.

ಯುಸಿಎ ಸಂಘಟನೆ ಹಾಗೂ ಸಾಸ್ತಾನದ ಸ್ವಸಹಾಯ ಸಂಘಟೆಗಳಾದ ಮದರ್ ತೆರೆಸಾ, ಎಂಜಲ್, ಸೈಂಟ್ ಎಂಟನಿ ಮತ್ತು ಆದರ್ಶ ಸ್ವಸಹಾಯ ಸಂಘದ ಸದಸ್ಯರು ಒಟ್ಟಾಗಿ ಸೇರಿ ಕ್ರಿಸ್ಮಸ್ ಹಬ್ಬದ ಪ್ರಮುಖ ತಿಂಡಿಗಳಾದ ಅಕ್ಕಿಯ ಲಾಡು, ನೆವ್ರಿ, ಕುಕ್ಕಿಸಾಂ, ಕಾರಕಡ್ಡಿ, ಚಕ್ಕುಲಿ ಇತ್ಯಾದಿಗಳನ್ನು ಸಾಸ್ತಾನ ಮಾಬುಕಳ ಸಮೀಪದ ಅ್ಯಂಡ್ರು ಟೆಲ್ಲಿಸ್ ಅವರ ಮನೆಯಲ್ಲಿ ಒಟ್ಟಾಗಿ ಸೇರಿ ತಯಾರಿಸಿದರು. ಸುಮಾರು 30ಕ್ಕೂ ಅಧಿಕ ಮಂದಿ ಸದಸ್ಯರು ಜೊತೆಯಾಗಿ ಸೇರಿ ಬೆಳಗ್ಗಿನಿಂದ ಸಂಜೆಯವರೆಗೆ ವಿವಿಧ ರೀತಿಯ ತಿಂಡಿಗಳನ್ನು ತಯಾರಿಸಿದರು. ತಯಾರಿಸಿದ ತಿಂಡಿಗಳನ್ನು ಡಿಸೆಂಬರ್ 24 ಸಂಜೆ ಕ್ರಿಸ್ಮಸ್ ಈವ್ ಸಂದರ್ಭದಲ್ಲಿ ತಮ್ಮ ನೆರೆಹೊರೆಯವರೊಂದಿಗೆ ಹಂಚಿಕೊಂಡು ಹಬ್ಬದ ಸಂಭ್ರಮವನ್ನು ಪರಸ್ಪರ ವಿನಿಮಯ ಮಾಡಿಕೊಳ್ಳುತ್ತಾರೆ. ಇದರೊಂದಿಗೆ ಕ್ರಿಸ್ಮಸ್ ಹಬ್ಬ ಕೇವಲ ಒಬ್ಬರಿಗೆ ಸೀಮಿತವಾಗಿರದೆ ತಮ್ಮ ನೆರೆಮನೆಯವರೂ ಕೂಡ ಹಬ್ಬದಲ್ಲಿ ಸಂತೋಷದಿಂದ ಪಾಲ್ಗೊಳ್ಳಬೇಕು ಎನ್ನುವುದು ಇದರ ಪ್ರಮುಖ ಉದ್ದೇಶವಾಗಿದೆ.

ಇಂದಿನ ಕಾಲದಲ್ಲಿ ಬಹುತೇಕರು ಕ್ರಿಸ್ಮಸ್ ತಿಂಡಿಗಾಗಿ ಬೇಕರಿಗಳನ್ನು ಅವಲಂಬಿಸಿದ್ದು, ಇದರಿಂದಾಗಿ ಕ್ರೈಸ್ತ ಸಮುದಾಯದ ಸಂಸ್ಕ್ರತಿಯ ಒಂದು ಭಾಗವಾಗಿದ್ದ ಕುಸ್ವಾರ ತಯಾರಿ ಕಾರ್ಯಕ್ರಮ ಇಂದಿನ ಆಧುನಿಕ ಮನೆಗಳಲ್ಲಿ ನಶಿಸಲಾರಂಭಿಸಿದೆ. ಇಂದಿನ ಮಕ್ಕಳಿಗೆ ಇದನ್ನು ಪರಿಚಯಿಸುವ ಸಲುವಾಗಿ ಈ ಪ್ರಯತ್ನವನ್ನು ಕಳೆದ ಹಲವಾರು ವರ್ಷಗಳಿಂದ ನಡೆಸಿಕೊಂಡು ಬರುವ ಪ್ರಯತ್ನ ಮಾಡಿದ್ದು ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ ಎನ್ನುತ್ತಾರೆ ಸಂಘಟನೆಯ ಸದಸ್ಯರುಗಳಲ್ಲಿ ಒಬ್ಬರಾದ ಜೀನ್ ಮೇರಿ ಲೂವಿಸ್.

ಯುನಾಯ್ಟೆಡ್ ಕ್ರಿಶ್ಚಿಯನ್ ಎಸೋಶಿಯೇಶನ್ ಕಳೆದ ಹಲವಾರು ವರುಷಗಳಿಂದ ಸಮಾಜಪರ ಕೆಲಸಗಳನ್ನು ನಿರ್ವಹಿಸಿಕೊಂಡು ಬಂದಿದ್ದು ಅದರ ಒಂದು ಭಾಗವಾಗಿ ಈ ಒಂದು ಕುಸ್ವಾರ್ ತಯಾರಿ ಕಾರ್ಯಕ್ರಮವನ್ನು ಆಯೋಜಿಸಿಕೊಂಡು ಬಂದಿದೆ. ಇದರಿಂದ ನಮ್ಮ ಸಂಸ್ಕ್ರತಿಯ ಒಂದು ಭಾಗವೇ ಆದ ಈ ಕೆಲಸಕ್ಕೆ ಸದಸ್ಯರು ಉತ್ತಮವಾಗಿ ಸ್ಪಂದಿಸಿ ಕುಸ್ವಾರ್ ನಿರ್ಮಾಣದ ಕಾರ್ಯದಲ್ಲಿ ಸಹಕರಿಸಿದ್ದಾರೆ. ಇದರಿಂದ ಸಂಘಟನೆಯ ಸದಸ್ಯರಲ್ಲಿ ಒಗ್ಗಟ್ಟು ಮೂಡಿಸುವುದರೊಂದಿಗೆ ನಮ್ಮ ಸಂಸ್ಕೃತಿಯನ್ನು ಅರಿಯುವ ಅವಕಾಶವಾಗಿದೆ. ಯುನಾಯ್ಟೆಡ್ ಕ್ರಿಶ್ಚಿಯನ್ ಎಸೋಶಿಯೇಶನ್ ಸಂಘಟನೆ ಕಳೆದ 6 ವರ್ಷಗಳಿಂದ ಸಮಾಜಪರ ಚಟುವಟಿಕೆಗಳನ್ನು ಮಾಡುತ್ತಾ ಬಂದಿದ್ದು, ಬಡ ವಿದ್ಯಾರ್ಥಿಗಳ ಶಿಕ್ಷಣಕ್ಕೆ ರೂ 25000 ಸಹಾಯಧನವನ್ನು ಪ್ರತಿವರ್ಷ ನೀಡುತ್ತಿದ್ದು, ಅಶಕ್ತ 5 ಕುಟುಂಬಗಳನ್ನು ದತ್ತು ಪಡೆದು ಮಾಸಿಕ ಸಹಾಯಧನವನ್ನು ನೀಡುತ್ತಿದ್ದು ರೂ 1.30 ಲಕ್ಷ ಮೊತ್ತವನ್ನು ವ್ಯಯಿಸಲಾಗಿದೆ. ಬಡವರಿಗೆ ಮನೆ ನಿರ್ಮಾಣಕ್ಕೆ ಈ ವರ್ಷ ರೂ 3.5 ಲಕ್ಷ ವ್ಯಯಿಸಿದ್ದು, ವೈದ್ಯಕೀಯ ಚಿಕಿತ್ಸೆಗಾಗಿ ರೂ 70000 ನೀಡಲಾಗಿದೆ. ಸ್ವಸಹಾಯ ಸಂಘಗಳ ಸ್ಥಾಪನೆಯ ಮೂಲಕ ಸ್ವುದ್ಯೋಗಕ್ಕೆ ಪ್ರೋತ್ಸಾಹ ನೀಡುವ ಸಲುವಾಗಿ ಬಡ್ಡಿರಹಿತ ಸಾಲವನ್ನು ಸಂಘಟನೆ ನೀಡುತ್ತಿದೆ ಎಂದು ಅಧ್ಯಕ್ಷ ಸಿಲ್ವೆಸ್ಟರ್ ಡಿಸೋಜ ಹೇಳಿದರು.

ಕುಸ್ವಾರ್ ತಯಾರಿಯಲ್ಲಿ ಸಂಘಟೆಯ ಸದಸ್ಯರುಗಳಾದ ಕ್ಲೋಡ್ ಲೂವಿಸ್, ವೀಣಾ ಲೂವಿಸ್, ಮೇಬಲ್ ಡಿಸೋಜ, ಫ್ರೀಡಾ ಡಿಕೋಸ್ತಾ, ಪ್ರೀತಿ ಲೂವಿಸ್, ಮಾರ್ಗರೆಟ್ಟ ಟೆಲ್ಲಿಸ್, ರೋಬರ್ಟ್ ಪಿ. ಲೂವಿಸ್, ವಿಕ್ಟೋರಿಯ ಲೂವಿಸ್, ಪ್ರಕಾಶ್ ಟೆಲ್ಲಿಸ್, ಡೈಝಿ ಡಿಆಲ್ಮೇಡಾ ಹಾಗೂ ಇತರರು ಸಹಕರಿಸದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News