ಕರ್ನಾಟಕ ರಾಜ್ಯ ಅಭಿವೃದ್ಧಿಯಲ್ಲಿ ಮುಂಚೂಣಿಯಲ್ಲಿದೆ

Update: 2016-12-15 12:31 GMT

ಬಂಟ್ವಾಳ, ಡಿ. 15:  ಬಂಡವಾಳ ಹೂಡಿಕೆಯಲ್ಲಿ ಕರ್ನಾಟಕ ರಾಜ್ಯ ದೇಶದಲ್ಲೇ ನಂ. 1 ಆಗಿದ್ದು ಗುಜರಾತ್ ರಾಜ್ಯವನ್ನು ಬಿಟ್ಟರೆ ಕರ್ನಾಟಕ ರಾಜ್ಯ ಹಾಲು ಉತ್ಪಾದನೆಯಲ್ಲಿ ದೇಶದಲ್ಲೇ ನಂ. 2 ಸ್ಥಾನದಲ್ಲಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರದ ಅಧಿಕಾರಕ್ಕೆ ಬಂದ ಬಳಿಕ ಕರ್ನಾಟಕ ರಾಜ್ಯ ಅಭಿವೃದ್ಧಿಯಲ್ಲಿ ಇಡೀ ದೇಶದಲ್ಲೇ ಮುಂಚೂನಿಯಲ್ಲಿದ್ದು,  ಸರಕಾರದ ಸಾಧನೆಗಳನ್ನು ಪಕ್ಷದ ಕಾರ್ಯಕರ್ತರು ಗ್ರಾಮೀಣ ಪ್ರದೇಶದಲ್ಲಿ ಪ್ರಚಾರ ಮಾಡಬೇಕು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಕರೆ ನೀಡಿದರು.

ಬಂಟ್ವಾಳ ತಾಲೂಕಿನ ಕಳ್ಳಿಗೆ ಗ್ರಾಮದಲ್ಲಿ ಬಂಟ್ವಾಳ ಹಾಗೂ ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಸಮಿತಿ ಆಶ್ರಯದಲ್ಲಿ ಗುರುವಾರ ನಡೆದ ಕಾಂಗ್ರೆಸ್ ನಡಿಗೆ ಸ್ವರಾಜ್ಯದ ಕಡೆಗೆ ಕಾರ್ಯಕ್ರಮದಲ್ಲಿ ಕಾರ್ಯಾಗಾರ, ಉಪನ್ಯಾಸ ಮತ್ತು ಸಂವಾದ ಕಾರ್ಯಕ್ರಮವನ್ನು ಉದ್ಘಾಟಿಸಿ ಕರ್ನಾಟಕ ಸರಕಾರದ ಸಾಧನೆಗಳ ಬಗ್ಗೆ ಅವರು ಮಾತನಾಡಿದರು.

ನೋಟು ಅಮಾನ್ಯಗೊಳಿಸಿದ ಕೇಂದ್ರ ಸರಕಾರದ ನೀತಿಯಿಂದ ದೇಶದಲ್ಲಿ ಆರ್ಥಿಕ ಅರಾಜಕತೆ ಉಂಟಾಗಿದೆ. ನರೇಂದ್ರ ಮೋದಿ ದೇಶಕ್ಕಾಗಿ ಯಾವುದೇ ತ್ಯಾಗವನ್ನೂ ಮಾಡಿಲ್ಲ. ಕಾಂಗ್ರೆಸ್ ಪಕ್ಷದಿಂದಷ್ಟೇ ದೇಶದ ರಕ್ಷಣೆ ಸಾಧ್ಯ. ಬಿಜೆಪಿಗೆ ಶ್ರೀಮಂತರಿಗೆ ಲಾಭ ಮಾಡುವ ಯೋಜನೆಗಳನ್ನು ಮಾತ್ರ ಹಮ್ಮಿಕೊಳ್ಳುತ್ತದೆ. ಯಾರದ್ದೋ ಹೆಣದ ಮೇಲೆ ರಾಜಕಾರಣ ಮಾಡುತ್ತದೆ. ಮೋದಿಯಿಂದ ಯಾವ ಕೊಡುಗೆಯೂ ದೇಶಕ್ಕೆ ಇಲ್ಲ. ಬದಲಾಗಿ ತೊಂದರೆಯೇ ಹೆಚ್ಚಾಗಿದೆ ಎಂದರು.

ದಕ್ಷಿಣ ಕನ್ನಡ ಜಿಲ್ಲೆ ಕೋಮುವಾದ ಸಿದ್ಧಾಂತಗಳ ರಾಜಧಾನಿಯಾಗಿದೆ ಎಂದು ವಿಷಾದಿಸಿದ ದಿನೇಶ್ ಗುಂಡೂರಾವ್,  ಜನರನ್ನು ಒಡೆಯುವ ಕೆಲಸ ಈ ಜಿಲ್ಲೆಯ ಕೋಮುವಾದಿಗಳಿಂದ ಆಗುತ್ತಿದೆ. ಕಾಂಗ್ರೆಸ್ ಸೃಷ್ಟಿಸಿದ ಹಳೆ ಇತಿಹಾಸವನ್ನು ಜನರು ಮರೆತಿದ್ದಾರೆ. ಅವರಿಗೆ ಕಾಂಗ್ರೆಸ್ ತತ್ವ ಸಿದ್ಧಾಂತ, ಬಡವರ ಪರ ಯೋಜನೆಗಳ ನೆನಪು ಮಾಡುವ ಕಾರ್ಯ ಆಗಬೇಕಿದೆ ಎಂದು ಅವರು ಹೇಳಿದರು.

ನಮ್ಮಿಂದ ಪಕ್ಷಕ್ಕೆ ಹಿತವಾಗಬೇಕೆ ಹೊರತು ಮಾರಕವಾಗಬಾರದು. ನಮ್ಮಲ್ಲಿ ಕೆಲವು ಮಂದಿ ಐಸ್‌ಕ್ಯಾಂಡಿಯಂತೆ ಇದ್ದಾರೆ. ಪಕ್ಷದಿಂದ ಎಲ್ಲವನ್ನೂ ಸವಿದು ಐಸ್‌ಕ್ಯಾಂಡಿಯ ಕಡ್ಡಿ ಬಿಸಾಕಿದಂತೆ ಬಳಿಕ ಪಕ್ಷದವರನ್ನೇ ದೂರುತ್ತಾರೆ. ಸರಕಾರದ ಯೋಜನೆಗಳನ್ನು ಟೀಕಿಸುತ್ತಾರೆ ಹಾಗೂ ಮುಖ್ಯಮಂತ್ರಿಯವರ ವಿರುದ್ಧವೇ ಕೆಟ್ಟದಾಗಿ ಮಾತನಾಡುತ್ತಾರೆ ಎಂದು ಹೆಸರು ಹೇಳದೆ ಪರೋಕ್ಷವಾಗಿ ವಾಗ್ದಾಳಿ ನಡೆಸಿದರು.

ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ, ಇಂದಿರಾ ಗಾಂಧಿ ಬಡವರನ್ನು ಬ್ಯಾಂಕ್ ಪ್ರವೇಶಿಸುವಂತೆ ಮಾಡಿದರೆ ನರೇಂದ್ರ ಮೋದಿ ಬಡವರನ್ನು ಬ್ಯಾಂಕಿನ ಹೊರಗೆ ನಿಲ್ಲಿಸಿದರು. ಅವರು ನರೇಂದ್ರ ದಾಮೋದರ ಮೋದಿಯಾಗಿರದೆ ನರೇಂದ್ರ ಡ್ರಾಮೋದರ್ ಮೋದಿ ಎಂದು ಲೇವಡಿ ಮಾಡಿದರು. ಎಲ್ಲ ಜಾತಿ, ಧರ್ಮಗಳನ್ನು ಒಗ್ಗೂಡಿಸಿಕೊಂಡು ಹೋಗುವ ಪಕ್ಷ ಕಾಂಗ್ರೆಸ್. ಅನೇಕ ಮಹನೀಯರು ಪಕ್ಷಕ್ಕಾಗಿ ತ್ಯಾಗ ಮಾಡಿದ್ದಾರೆ. ಅವರ ಇತಿಹಾಸವನ್ನು ನಾವು ಅರಿಯಬೇಕಾಗಿದೆ. ಈ ನಿಟ್ಟಿನಲ್ಲಿ ಕಾಂಗ್ರೆಸ್ ಕಾರ್ಯಕರ್ತರೆಲ್ಲರೂ ಪ್ರತಿ ಗ್ರಾಮದಲ್ಲೂ ಗಾಂಧಿ ಕಟ್ಟೆ ಸ್ಥಾಪಿಸಿ ಚರಕದ ಧ್ವಜವನ್ನು ಹಾರಿಸಬೇಕು. ತನ್ಮೂಲಕ ಸ್ವಾತಂತ್ರ್ಯ ಹೋರಾಟಕ್ಕೆ ಪಕ್ಷದ ಕೊಡುಗೆಯನ್ನು ವಿವರಿಸುವ ಕೆಲಸವಾಗಬೇಕು ಎಂದು  ಹೇಳಿದರು.

ಕಾರ್ಯಕ್ರಮದಲ್ಲಿ ಶಾಸಕರಾದ ಡಾ. ಸುಧಾಕರ್, ಮೊಯ್ದಿನ್ ಬಾವಾ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಎಲ್.ಹನುಮಂತಯ್ಯ, ವಿಧಾನಪರಿಷತ್ ಮುಖ್ಯ ಸಚೇತಕ ಐವನ್ ಡಿಸೋಜ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದರು.

ಮೂಡ ಅಧ್ಯಕ್ಷ ಸುರೇಶ್ ಬಲ್ಲಾಳ್, ಬಂಟ್ವಾಳ ತಾಲೂಕು ಪಂಚಾಯತ್ ಅಧ್ಯಕ್ಷ ಚಂದ್ರಹಾಸ ಕರ್ಕೇರ, ಪುರಸಭಾ ಅಧ್ಯಕ್ಷ ರಾಮಕೃಷ್ಣ ಆಳ್ವ, ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷ ಬಿ.ಎಚ್.ಖಾದರ್, ಜಿಲ್ಲಾ ಕಾಂಗ್ರೆಸ್ ಹಂಗಾಮಿ ಅಧ್ಯಕ್ಷ ಇಬ್ರಾಹೀಂ ಕೋಡಿಜಾಲ್, ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಾಯಿಲಪ್ಪ ಸಾಲ್ಯಾನ್, ಬಂಟ್ವಾಳ ಕ್ಷೇತ್ರದ ಉಸ್ತುವಾರಿ ಧರ್ಣೇಂದ್ರ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಬ್ಬಾಸ್ ಅಲಿ ಸ್ವಾಗತಿಸಿದರು. ಬಾಲಕೃಷ್ಣ ಕೊಡಾಜೆ, ರಾಜೀವ್ ಕಕ್ಕೆಪದವು ಕಾರ್ಯಕ್ರಮ ನಿರ್ವಹಿಸಿದರು.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News