ಡಿ.17ರಿಂದ ಮಂಗಳೂರಿನಲ್ಲಿ ಅಖಿಲ ಭಾರತ ಸ್ಥಾನಿಕ ಬ್ರಾಹ್ಮಣ ಸಮಾವೇಶ

Update: 2016-12-15 13:55 GMT

ಮಂಗಳೂರು, ಡಿ.15: ಶ್ರೀಸುಬ್ರಹ್ಮಣ್ಯ ಸ್ಥಾನಿಕ ಬ್ರಾಹ್ಮಣ ಮಹಾಮಂಡಲದ ವತಿಯಿಂದ ನಡೆಯುವ ‘ಅಖಿಲ ಭಾರತ ಸ್ಥಾನಿಕ ಬ್ರಾಹ್ಮಣ ಸಮಾವೇಶ-2016’ ಡಿ.17,18ರಂದು ನಗರದ ಬಿಜೈ ರಸ್ತೆಯಲ್ಲಿರುವ ಸುಬ್ರಹ್ಮಣ್ಯ ಸಭಾಸದನದಲ್ಲಿ ಜರಗಲಿದೆ ಎಂದು ಅಖಿಲ ಭಾರತ ಸ್ಥಾನಿಕ ಬ್ರಾಹ್ಮಣ ಸಮಾವೇಶದ ಅಧ್ಯಕ್ಷ ಎಂ.ಆರ್. ವಾಸುದೇವ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಬ್ರಾಹ್ಮಣ ಸಮಾಜದ ಇಂದಿನ ಜ್ವಲಂತ ಸಮಸ್ಯೆಗಳ ಚಿಂತನ- ಮಂಥನ- ಸಾಧನೆ- ಸನ್ಮಾನ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಅವಿಭಜಿತ ಜಿಲ್ಲೆ ಮಾತ್ರವಲ್ಲದೆ ಕೊಡಗು, ಬೆಂಗಳೂರು, ಮುಂಬೈನಿಂದ 2 ಸಾವಿರ ಮಂದಿ ಭಾಗವಹಿಸಲಿದ್ದಾರೆ ಎಂದು ಹೇಳಿದರು.

ಡಿ.17ರಂದು ಪೂ.11ಕ್ಕೆ ರಿಯರ್ ಅಡ್ಮಿರಲ್ (ನಿವೃತ್ತ) ಬಿ.ಆರ್. ವಸಂತ ಉದ್ಘಾಟಿಸುವರು. ಹುಬ್ಬಳ್ಳಿಯ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾನಿಲಯದ ಮಾಜಿ ಉಪಕುಲಪತಿ ಹಾಗು ಕೊಲ್ಕತ್ತ ರಾಷ್ಟ್ರೀಯ ಕಾನೂನು ವಿದ್ಯಾನಿಲಯದ ಸಂಶೋಧನಾ ಪ್ರಾಚಾರ್ಯ ಡಾ. ಟಿ.ಕೆ. ಸುಬ್ರಹ್ಮಣ್ಯ ದಿಕ್ಸೂಚಿ ಭಾಷಣ ಮಾಡುವರು. ಮಧ್ಯಾಹ್ನ 12ರಿಂದ ನಡೆಯುವ ಹಿರಿಯ ನಾಗರಿಕರ ಸಮ್ಮೇಳನವನ್ನು ಡಾ. ಸಂತೋಷ್ ಕುಮಾರ್ ಶಾಸ್ತ್ರಿ ಉದ್ಘಾಟಿಸುವರು.

ಬಳಿಕ ಹಿರಿಯ ನಾಗರಿಕರಿಗೆ ದೊರಕುವ ಸೌಲಭ್ಯಗಳ ಮಾಹಿತಿ, ಪ್ರಶ್ನೋತ್ತರ ಕಾರ್ಯಕ್ರಮ, ಸಮಾಜದ ಹಿರಿಯರಿಗೆ ಗೌರವಾರ್ಪಣೆ, ವಿವಿಧ ಸಂಘ-ಸಂಸ್ಥೆಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗಲಿವೆ ಎಂದು ತಿಳಿಸಿದರು.

ಡಿ.18ರಂದು ಪೂ.10ರಿಂದ ಸ್ಥಾನಿಕ ಬ್ರಾಹ್ಮಣ ಸಮಾಜ ಕೈಗೊಳ್ಳಬೇಕಾದ ಕಾರ್ಯಕ್ರಮಗಳ ಬಗ್ಗೆ ಚಿಂತನೆ, ಬದಲಾಗುತ್ತಿರುವ ಪ್ರಪಂಚದಲ್ಲಿ ಕೌಟುಂಬಿಕ ಸಮಸ್ಯೆಗಳ ಬಗ್ಗೆ ವಿಚಾರಗೋಷ್ಠಿ, ಪೊಳಲಿ ನಿವೇಶನ ಅಭಿವೃದ್ಧಿ ಯೋಜನೆ, ಹೊರ ಊರಿನಲ್ಲಿರುವ ಸ್ಥಾನಿಕ ಸಾಧಕರ ಸಾಧನೆಗಳನ್ನು ಪ್ರಸ್ತುತಪಡಿಸುವುದು ಮತ್ತು ವಿವಿಧ ಸ್ಥಾನಿಕ ಸಂಘಟನೆಗಳು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ವಿಚಾರ ವಿನಿಮಯಗಳು ಜರಗಲಿವೆ ಎಂದರು.

ಸುದ್ದಿಗೋಷ್ಠಿಯಲ್ಲಿ ಸುಬ್ರಹ್ಮಣ್ಯ ಸಭಾದ ಶ್ರೀಕಾಂತ್‌ರಾವ್, ಸಮಾವೇಶದ ಸಾಂಸ್ಕೃತಿಕ ಸಮಿತಿಯ ಸಂಚಾಲಕ ಸಂಜಯ್‌ರಾವ್, ಕೋಶಾಧಿಕಾರಿ ಪಿ. ಉದಯಕುಮಾರ್ ರಾವ್, ಸ್ವಾಗತ ಸಮಿತಿ ಅಧ್ಯಕ್ಷ ಹರ್ಷ ಕುಮಾರ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News