×
Ad

ಅಮೆರಿಕ ಚುನಾವಣೆ ಮೇಲಿನ ಸೈಬರ್ ದಾಳಿಯಲ್ಲಿ ಪುಟಿನ್ ಸ್ವತಃ ಶಾಮೀಲು : ಸಿಐಎ ವರದಿ

Update: 2016-12-15 20:25 IST

 ವಾಶಿಂಗ್ಟನ್, ಡಿ. 15: ಅಮೆರಿಕದ ಅಧ್ಯಕ್ಷೀಯ ಚುನಾವಣೆಯ ಪ್ರಚಾರದ ಅವಧಿಯಲ್ಲಿ, ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಹಿಲರಿ ಕ್ಲಿಂಟನ್ ಮೇಲಿನ ದ್ವೇಷಕ್ಕಾಗಿ ಅವರ ಸರ್ವರ್‌ಗಳಿಗೆ ಕನ್ನ ಹಾಕುವ ಸಂಚಿನಲ್ಲಿ ರಶ್ಯದ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ವೈಯಕ್ತಿಕವಾಗಿ ಶಾಮೀಲಾಗಿದ್ದರು ಎಂದು ಅಮೆರಿಕದ ಗುಪ್ತಚರ ಅಧಿಕಾರಿಗಳು ಭಾವಿಸಿದ್ದಾರೆ ಎಂದು ಎನ್‌ಬಿಸಿ ನ್ಯೂಸ್ ಬುಧವಾರ ವರದಿ ಮಾಡಿದೆ.

ಅಮೆರಿಕದ ಡೆಮಾಕ್ರಟ್ ಅಭ್ಯರ್ಥಿಯ ಸರ್ವರ್‌ಗಳಿಂದ ಕದ್ದ ಮಾಹಿತಿಗಳನ್ನು ಹೇಗೆ ಸೋರಿಕೆ ಮಾಡಬೇಕು ಹಾಗೂ ಬಳಸಿಕೊಳ್ಳಬೇಕು ಎಂಬುದಕ್ಕೆ ಸಂಬಂಧಿಸಿದ ನಿರ್ದೇಶನಗಳನ್ನು ಸ್ವತಃ ಪುಟಿನ್ ನೀಡಿದ್ದರು ಎಂದು ಅಮೆರಿಕದ ಟೆಲಿವಿಶನ್ ನೆಟ್‌ವರ್ಕ್ ಹೇಳಿದೆ.

ಹಿಲರಿ ಕ್ಲಿಂಟನ್ ವಿರುದ್ಧ ದ್ವೇಷ ಸಾಧಿಸುವ ಉದ್ದೇಶದಿಂದ ಅವರ ಸರ್ವರ್‌ಗಳಿಗೆ ಕನ್ನ ಹಾಕುವ ಸಂಚನ್ನು ಪುಟಿನ್ ರೂಪಿಸಿದರು ಎಂದು ಈ ಬಗ್ಗೆ ಮಾಹಿತಿಯಿರುವ ಇಬ್ಬರು ಗುಪ್ತಚರ ಅಧಿಕಾರಿಗಳು ಎನ್‌ಬಿಸಿ ನ್ಯೂಸ್‌ಗೆ ಹೇಳಿದ್ದಾರೆ.

ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಪರವಾಗಿ ಚುನಾವಣೆಯನ್ನು ತಿರುಗಿಸಲು ರಶ್ಯವು ಅಮೆರಿಕದ ವ್ಯಕ್ತಿಗಳು ಮತ್ತು ಸಂಸ್ಥೆಗಳ ಇಮೇಲ್‌ಗಳಿಗೆ ಕನ್ನ ಹಾಕಿತ್ತು ಎಂಬ ನಿರ್ಧಾರಕ್ಕೆ ಸಿಐಎ ಬಂದಿದೆ ಎಂಬುದಾಗಿ ಕಳೆದ ವಾರ ‘ದ ವಾಶಿಂಗ್ಟನ್ ಪೋಸ್ಟ್’ ವರದಿ ಮಾಡಿತ್ತು.
ಅಂತಿಮವಾಗಿ ನವೆಂಬರ್ 8ರಂದು ನಡೆದ ಚುನಾವಣೆಯಲ್ಲಿ ಹಿಲರಿಯನ್ನು ಸೋಲಿಸಿ ಟ್ರಂಪ್ ಗೆದ್ದೇ ಬಿಟ್ಟರು.

ಹಿಲರಿ ಮೇಲೆ ಪುಟಿನ್‌ಗೆ ಯಾಕೆ ದ್ವೇಷ?


ರಶ್ಯದಲ್ಲಿ 2011ರಲ್ಲಿ ಸಂಸದೀಯ ಚುನಾವಣೆ ನಡೆದಿತ್ತು. ಆ ಚುನಾವಣೆಯ ಪ್ರಾಮಾಣಿಕತೆಯನ್ನು ಅಂದಿನ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಹಿಲರಿ ಕ್ಲಿಂಟನ್ ಸಾರ್ವಜನಿಕವಾಗಿ ಪ್ರಶ್ನಿಸಿದ್ದರು. ಹಿಲರಿ ವಿರುದ್ಧದ ಪುಟಿನ್‌ರ ದ್ವೇಷಕ್ಕೆ ಇದೇ ಕಾರಣ.
ಅದೂ ಅಲ್ಲದೆ, ತನ್ನ ವಿರುದ್ಧ ರಸ್ತೆಗಿಳಿದು ಹೋರಾಡುವಂತೆ ಜನರನ್ನು ಹಿಲರಿ ಪ್ರಚೋದಿಸಿದ್ದರು ಎಂಬುದಾಗಿಯೂ ರಶ್ಯದ ಅಧ್ಯಕ್ಷ ಭಾವಿಸಿದ್ದಾರೆ.


ಚುನಾವಣೆಯಲ್ಲಿ ರಶ್ಯ ಹಸ್ತಕ್ಷೇಪ ನಡೆಸಿದ್ದು ಟ್ರಂಪ್‌ಗೆ ಗೊತ್ತಿತ್ತು

ಶ್ವೇತಭವನ ವಾಶಿಂಗ್ಟನ್, ಡಿ. 15: ತನ್ನ ಎದುರಾಳಿ ಹಿಲರಿ ಕ್ಲಿಂಟನ್‌ರ ಪ್ರಚಾರ ತಂಡ ಮತ್ತು ಡೆಮಾಕ್ರಟಿಕ್ ಪಕ್ಷದ ಸರ್ವರ್‌ಗಳಿಗೆ ರಶ್ಯ ಕನ್ನ ಹಾಕಿರುವುದು ನಿಯೋಜಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ಗೆ ತಿಳಿದಿತ್ತು ಎಂಬ ಮಾಹಿತಿಯಿದೆ ಎಂದು ಅಮೆರಿಕದ ಅಧ್ಯಕ್ಷೀಯ ನಿವಾಸ ಮತ್ತು ಕಚೇರಿ ಶ್ವೇತಭವನ ಹೇಳಿದೆ.
‘‘ತನ್ನ ಎದುರಾಳಿಯ ಕಂಪ್ಯೂಟರ್ ಸರ್ವರ್‌ಗಳಿಗೆ ಕನ್ನ ಹಾಕುವಂತೆ ಸ್ವತಃ ರಿಪಬ್ಲಿಕನ್ ಅಧ್ಯಕ್ಷೀಯ ಅಭ್ಯರ್ಥಿಯೇ ರಶ್ಯಕ್ಕೆ ಹೇಳಿರುವ ಬಗ್ಗೆ ಸಾಕಷ್ಟು ಪುರಾವೆಗಳಿವೆ ಹಾಗೂ ಇದು ಅಕ್ಟೋಬರ್‌ಗಿಂತಲೂ ತುಂಬಾ ಹಿಂದೆಯೇ ಗೊತ್ತಿತ್ತು’’ ಎಂದು ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಜೋಶ್ ಅರ್ನೆಸ್ಟ್ ಸುದ್ದಿಗಾರರಿಗೆ ಹೇಳಿದರು.
ರಶ್ಯವು ಟ್ರಂಪ್‌ಗೆ ಸಹಾಯ ಮಾಡಲು ಅಧ್ಯಕ್ಷೀಯ ಚುನಾವಣೆಯಲ್ಲಿ ಹಸ್ತಕ್ಷೇಪ ನಡೆಸಿತ್ತು ಎಂಬ ರಹಸ್ಯ ತೀರ್ಮಾನಕ್ಕೆ ಸಿಐಎ ಬಂದಿದೆ ಎಂಬುದಾಗಿ ‘ವಾಶಿಂಗ್ಟನ್ ಪೋಸ್ಟ್’ ವರದಿ ಮಾಡಿತ್ತು.
‘‘ರಿಪಬ್ಲಿಕನ್ ಪಕ್ಷದ ಅಭ್ಯರ್ಥಿಯು ರಶ್ಯದ ಅಧ್ಯಕ್ಷರನ್ನು ಪ್ರಬಲ ನಾಯಕ ಎಂಬುದಾಗಿ ಬಣ್ಣಿಸಿದ್ದರು. ರಶ್ಯದೊಂದಿಗೆ ವಿಸ್ತೃತ, ಆಕರ್ಷಕ, ವೈಯಕ್ತಿಕ ವಾಣಿಜ್ಯ ಸಂಬಂಧಗಳನ್ನು ಹೊಂದಿರುವ ವ್ಯಕ್ತಿಯೊಬ್ಬರನ್ನು ಅವರು ತನ್ನ ಅಭಿಯಾನದ ಮುಖ್ಯಸ್ಥರನ್ನಾಗಿ ನೇಮಿಸಿದ್ದರು’’ ಎಂದು ಅರ್ನೆಸ್ಟ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News