ಅಲೆಪ್ಪೊ ನಗರದ ನಾಗರಿಕರಿಗಾಗಿ ಪ್ಯಾರಿಸ್‌ನಲ್ಲಿ ಪ್ರತಿಭಟನೆ : ಆರಿದ ಐಫೆಲ್ ಗೋಪುರದ ದೀಪಗಳು

Update: 2016-12-15 15:04 GMT

ಪ್ಯಾರಿಸ್, ಡಿ. 15: ಸಿರಿಯದ ಯುದ್ಧಪೀಡಿತ ನಗರ ಅಲೆಪ್ಪೊದ ನಾಗರಿಕರಿಗೆ ಬೆಂಬಲ ಸೂಚಿಸುವುದಕ್ಕಾಗಿ ಪ್ಯಾರಿಸ್‌ನ ಐಫೆಲ್ ಗೋಪುರದ ದೀಪಗಳನ್ನು ಬುಧವಾರ ಆರಿಸಲಾಯಿತು.

ಗೋಪುರವು ಸ್ಥಳೀಯ ಸಮಯ ರಾತ್ರಿ 8 ಗಂಟೆಯಿಂದ ಕತ್ತಲೆಯಲ್ಲಿ ಮುಳುಗಿತು.

ಯುದ್ಧಗ್ರಸ್ತ ನಗರದಲ್ಲಿ ಜನರು ಎದುರಿಸುತ್ತಿರುವ ಅಸಹನೀಯ ಪರಿಸ್ಥಿತಿಯ ವಿರುದ್ಧ ಪ್ರತಿಭಟನೆ ನಡೆಸುವುದಕ್ಕಾಗಿ ಈ ಕ್ರಮವನ್ನು ತೆಗೆದುಕೊಳ್ಳಲಾಗಿದೆ ಎಂದು ಪ್ಯಾರಿಸ್ ಮೇಯರ್ ಆ್ಯನ್ ಹಿಡಾಲ್ಗೊ ಹೇಳಿದರು.

‘‘ಬಂಡುಕೋರರ ನಿಯಂತ್ರಣದಲ್ಲಿದ್ದ ಅಲೆಪ್ಪೊದ ಕೊನೆಯ ರಸ್ತೆಗಳನ್ನು ಈಗ ಸರಕಾರದ ಪಡೆಗಳು ವಹಿಸಿಕೊಂಡಿವೆ. ಹಾಗಾಗಿ, ಅಲ್ಲೀಗ ನೂರಾರು ಸಂತ್ರಸ್ತರು ಸಿಕ್ಕಿಹಾಕಿಕೊಂಡಿದ್ದಾರೆ’’ ಎಂದು ಗೋಪುರ ದೀಪಗಳನ್ನು ಆರಿಸುವ ಮುನ್ನ ನೀಡಿದ ಹೇಳಿಕೆಯೊಂದರಲ್ಲಿ ಹಿಡಾಲ್ಗೊ ತಿಳಿಸಿದರು.

ಅಲೆಪ್ಪೊ ನಿವಾಸಿಗಳ ಪರವಾಗಿ ನೂರಾರು ಮಂದಿ ಬುಧವಾರ ಪ್ಯಾರಿಸ್‌ನಲ್ಲಿ ಪ್ರತಿಭಟನೆ ನಡೆಸಿದರು ಎಂದು ಎಎಫ್‌ಪಿ ಪತ್ರಕರ್ತರೊಬ್ಬರು ವರದಿ ಮಾಡಿದ್ದಾರೆ.
ಸಿರಿಯದ ಎರಡನೆ ಅತಿ ದೊಡ್ಡ ನಗರದಲ್ಲಿ ಸುರಿದಿರುವ ರಕ್ತವನ್ನು ಸಂಕೇತಿಸುವ ಕೆಂಪು ಬಟ್ಟೆಯ ತುಂಡುಗಳನ್ನು ಕೆಲವು ಪ್ರತಿಭಟನಕಾರರು ಧರಿಸಿದ್ದರು.


ಅಲೆಪ್ಪೊದಿಂದ ಮೊದಲ ಸಂತ್ರಸ್ತರ ನಿರ್ಗಮನ

ಅಲೆಪ್ಪೊ (ಸಿರಿಯ), ಡಿ. 15: ಸಂಘರ್ಷ ಪೀಡಿತ ನಗರ ಅಲೆಪ್ಪೊದ ಅಳಿದುಳಿದ ಬಂಡುಕೋರ ನಿಯಂತ್ರಣದ ಸ್ಥಳಗಳಿಂದ ಮೊದಲ ಸಂತ್ರಸ್ತರನ್ನು ಹೊತ್ತ ಆ್ಯಂಬುಲೆನ್ಸ್‌ಗಳು ಮತ್ತು ಬಸ್‌ಗಳು ಗುರುವಾರ ಹೊರಟವು ಎಂದು ಎಎಫ್‌ಪಿ ವರದಿಗಾರರೊಬ್ಬರು ವರದಿ ಮಾಡಿದ್ದಾರೆ.

ಸಂತ್ರಸ್ತರನ್ನು ಸಂಘರ್ಷ ವಲಯದಿಂದ ಹೊರಗೆ ಕಳುಹಿಸುವ ದುರ್ಬಲ ಒಪ್ಪಂದವೊಂದರ ಅನ್ವಯ ನಾಗರಿಕರ ತೆರವು ಕಾರ್ಯ ನಡೆಯುತ್ತಿದೆ.

ಸಂತ್ರಸ್ತರನ್ನು ಹೊತ್ತ ಸುಮಾರು ಎರಡು ಡಝನ್ ವಾಹನಗಳು ಅಲ್-ಅಮೀರಿಯ ಜಿಲ್ಲೆಯಿಂದ ಹೊರಟು ಸರಕಾರಿ ನಿಯಂತ್ರಣದ ರಮುಸದ ಮೂಲಕ ಅಲೆಪ್ಪೊ ಪ್ರಾಂತದ ಪಶ್ಚಿಮದಲ್ಲಿರುವ ಬಂಡುಕೋರ ನಿಯಂತ್ರಣದ ಪ್ರದೇಶವೊಂದಕ್ಕೆ ಹೊರಟವು.

ಸಂತ್ರಸ್ತರ ವಾಹನಗಳನ್ನು ಅಂತಾರಾಷ್ಟ್ರೀಯ ರೆಡ್ ಕ್ರಾಸ್ ಸಮಿತಿ ಮತ್ತು ಅರಬ್ ರೆಡ್ ಕ್ರೆಸೆಂಟ್ ವಾಹನಗಳು ಸುತ್ತುವರಿದವು.


 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News