ಶಕ್ತಿನಗರ: ದೇವಮಾತಾ ಕ್ರೈಸ್ತ ದೇವಾಲಯದ ನೂತನ ಕಟ್ಟಡ ಉದ್ಘಾಟನೆ
ಮಂಗಳೂರು, ಡಿ. 12: ಶಕ್ತಿನಗರದ ದೇವ ಮಾತಾ ಕ್ರೈಸ್ತ ದೇವಾಲಯದ ನೂತನ ಕಟ್ಟಡವನ್ನು ಮಂಗಳೂರು ಧರ್ಮ ಪ್ರಾಂತದ ಧರ್ಮಾಧ್ಯಕ್ಷ ರೆ. ಡಾ.ಅಲೋಶಿಯಸ್ ಪಾವ್ಲ್ ಡಿಸೋಜಾ ಇಂದು ಉದ್ಘಾಟಿಸಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಬೆಳೆಯುತ್ತಿರುವ ಮಂಗಳೂರು ನಗರಕ್ಕೆ ಶಕ್ತಿನಗರ ಪ್ರದೇಶವು ಸಾಮಾಜಿಕ ಹಾಗೂ ಸಾಂಸ್ಕೃತಿಕವಾಗಿ ತನ್ನದೇ ಆದ ಕೊಡುಗೆಗಳನ್ನು ನೀಡಿದೆ. ದೇವ ಮಾತಾ ಚರ್ಚ್‌ನ ಹೊಸ ಕಟ್ಟಡವು ಕೈಸ್ತರ ಆವಶ್ಯಕತೆಗಳಿಗೆ ಸೂಕ್ತವಾಗಿ ಸ್ಪಂದಿಸಿ ಸಾಮಾಜಿಕ ನೆಮ್ಮದಿಯನ್ನು ತರಲಿ ಎಂದು ಹಾರೈಸಿದರು.
ಹೊಸ ಚರ್ಚ್ ಕಟ್ಟಡ ನಿರ್ಮಾಣಕ್ಕಾಗಿ ಕಳೆದ 4 ವರ್ಷಗಳಿಂದ ಅವಿರತವಾಗಿ ಶ್ರಮಿಸಿದ ಧರ್ಮಗುರು ಫಾ.ವಾಲ್ಟರ್ ಡಿಸೋಜಾ ಮತ್ತು ಅವರೊಂದಿಗೆ ಕೈಜೋಡಿಸಿದ ಉಪಾಧ್ಯಕ್ಷ, ಕಾರ್ಯದರ್ಶಿ, ವಾರ್ಡಿನ ಮುಖ್ಯಸ್ಥರು, ಪಾಲನಾ ಸಮಿತಿಯ ಸದಸ್ಯರನ್ನು ಹರಸಿದರು.
ಉದ್ಘಾಟನೆಯ ಬಳಿಕ ಧರ್ಮಾಧ್ಯಕ್ಷರ ಅಧ್ಯಕ್ಷತೆಯಲ್ಲಿ ಬಲಿ ಪೂಜೆ ನೆರವೇರಿತು. ಪ್ರಚವನ ನೀಡಿದ ಫಾ.ಬೊನಿಸ್ ಪಿಂಟೊ ಅವರು, ದೇವಾಲಯವನ್ನು ಪ್ರವೇಶಿಸುವಾಗ ಭಕ್ತಿ, ಶ್ರದ್ಧೆ ಮತ್ತು ಸಂತೋಷದಿಂದ ಪ್ರವೇಶಿಸಬೇಕು. ವಿಶ್ವಾಸದಿಂದ ಪ್ರಾರ್ಥನೆಗಳನ್ನು ಸಲ್ಲಿಸಬೇಕು ಎಂದು ಹೇಳಿದರು.
ವಿಧಾನ ಪರಿಷತ್ ಮುಖ್ಯ ಸಚೇತಕ ಐವನ್ ಡಿಸೋಜಾ ಮಾತನಾಡಿದರು.
ಶಕ್ತಿನಗರದಲ್ಲಿ ಈ ಹಿಂದೆ ಸೇವೆ ಸಲ್ಲಿಸಿದ ಫಾ.ಹೆರಾಲ್ಡ್ ಪಿರೇರಾ, ಫಾ.ಫ್ರಾನ್ಸಿಸ್ ಕ್ಸೇವಿಯರ್ ಗೋಮ್ಸ್ ಮತ್ತು ಫಾ.ಜಯ ಪ್ರಕಾಶ್ ಡಿಸೋಜಾ ಅವರನ್ನು ಈ ಸಂದರ್ಭದಲ್ಲಿ ಸಮ್ಮಾನಿಸಲಾಯಿತು.
ದೇಣಿಗೆ ನೀಡಿದ ದಾನಿಗಳನ್ನು ಗೌರವಿಸಲಾಯಿತು.
ಪ್ರಚಾರ ಕಾರ್ಯದ ಜವಾಬ್ದಾರಿ ವಹಿಸಿದ್ದ ಫೋರ್‌ವಿಂಡ್ಸ್ ಸಂಸ್ಥೆಯ ಇ. ಫೆರ್ನಾಂಡಿಸ್ ಅವರಿಗೆ ಕೃತಜ್ಞತೆ ಸಲ್ಲಿಸಲಾಯಿತು.ಉಪಾಧ್ಯಕ್ಷ ಡೆನಿಸ್ ಮಚಾದೊ, ಕಾರ್ಯದರ್ಶಿ ಆಶಾ ಮೊಂತೆರೊ ಉಪಸ್ಥಿತರಿದ್ದರು.