‘ಸಮಸ್ತ’ ಅಧ್ಯಕ್ಷ ಮುಹಮ್ಮದ್ ಮುಸ್ಲಿಯಾರ್ ನಿಧನ

Update: 2016-12-15 18:19 GMT

ಪಾಲಕ್ಕಾಡ್, ಡಿ.15: ಸಮಸ್ತ ಕೇರಳ ಜಂ-ಇಯ್ಯತುಲ್ ಉಲಮಾದ ಅಧ್ಯಕ್ಷ ಕುಮರಂಪುತ್ತೂರು ಎ.ಪಿ.ಮುಹಮ್ಮದ್ ಮುಸ್ಲಿಯಾರ್ ಪಾಲಕ್ಕಾಡಿನ ಇಸಾಫ್ ಆಸ್ಪತ್ರೆ ಯಲ್ಲಿ ಬುಧವಾರ ಮಧ್ಯರಾತ್ರಿ ನಿಧನರಾಗಿದ್ದಾರೆ.

ಕಳೆದ ನಾಲ್ಕು ವರ್ಷಗಳಿಂದ ಯಕೃತ ಸಂಬಂಧಿ ರೋಗದಿಂದ ಬಳಲುತ್ತಿದ್ದ ಅವರು ಮಂಗಳ ವಾರ ಮುಂಜಾನೆ ಆಸ್ಪತ್ರೆಗೆ ದಾಖಲಾಗಿದ್ದರು. ಮುಹಮ್ಮದ್ ಮುಸ್ಲಿಯಾರ್‌ರ ಮೃತದೇಹವನ್ನು ಗುರುವಾರ ಬೆಳಗ್ಗೆಯಿಂದ ಮಣ್ಣಾರ್ಕಾಡ್ ದಾರುನ್ನಜಾತ್ ಅನಾಥಾಶ್ರಮದ ಆವರಣದಲ್ಲಿ ಅಂತಿಮ ದರ್ಶನಕ್ಕಾಗಿ ಇಡಲಾಗಿತ್ತು. ಸಾವಿರಾರು ಅಭಿಮಾನಿಗಳು ಅಂತಿಮ ದರ್ಶನ ಪಡೆದರು. ಅಪರಾಹ್ನ 3ಕ್ಕೆ ಕುಮರಂಪುತ್ತೂರು ಜುಮಾ ಮಸೀದಿಯ ಖಬರ್‌ಸ್ಥಾನದಲ್ಲಿ ಅಂತ್ಯ ಸಂಸ್ಕಾರ ನೆರವೇರಿಸಲಾಯಿತು.

*ಪರಿಚಯ: ಆಬಾಡತ್ತ್ ಪುನ್ನಪ್ಪಾಡಿ ಮುಹಮ್ಮದ್ ಹಾಗೂ ಪೆರಿಮಣ್ಣಿಲ್ ಆಮಿನಾ ದಂಪತಿಯ ಮಗನಾಗಿ 1942ರಲ್ಲಿ ಜನಿಸಿದ್ದ ಮುಹಮ್ಮದ್ ಮುಸ್ಲಿಯಾರ್ ಪಾಲಕ್ಕಾಡ್ ಜಿಲ್ಲೆಯ ಮಣ್ಣಾರ್ಕಾಡ್ ಕುಮರಂಪುತ್ತೂರು ನಿವಾಸಿಯಾಗಿದ್ದರು. 1995ರಲ್ಲಿ ಸಮಸ್ತ ಕೇರಳ ಜಂ-ಇಯ್ಯತುಲ್ ಉಲಮಾದ ಕೇಂದ್ರ ಮುಶಾವರ ಸದಸ್ಯರಾಗಿ ನೇಮಕಗೊಂಡು 2012ರಲ್ಲಿ ‘ಸಮಸ್ತ’ದ ಉಪಾಧ್ಯಕ್ಷರಾಗಿಯೂ ಆಯ್ಕೆಯಾಗಿದ್ದರು. ಸಮಸ್ತದ ಅಧ್ಯಕ್ಷರಾಗಿದ್ದ ಆನಕ್ಕರ ಕೋಯಕುಟ್ಟಿ ಮುಸ್ಲಿಯಾರರ ನಿಧನದ ಬಳಿಕ ಸಮಸ್ತದ 10ನೆ ಅಧ್ಯಕ್ಷರಾಗಿಯೂ ಸಾರಥ್ಯ ವಹಿಸಿದ್ದರು.

ಪಟ್ಟಿಕ್ಕಾಡ್ ಜಾಮಿಯಾ ನೂರಿಯಾ ಅರಬಿಕ್ ಕಾಲೇಜಿನ ಪ್ರಥಮ ಸನದುದಾನ ಸಮ್ಮೇಳನದಲ್ಲಿ ಸನದು ಪಡೆದುಕೊಂಡಿದ್ದ ಅವರು ನಂತರ ಎರಡು ದಶಕಗಳಿಂದ ಅಲ್ಲಿಯೇ ಪ್ರಧಾನ ಗುರುಗಳಾಗಿ, ಉಪಪ್ರಾಂಶುಪಾಲರಾಗಿ ಸೇವೆಗೈದಿದ್ದಾರೆ.

ಸಮಸ್ತ ಫತ್ವಾ ಕಮಿಟಿಯ ಸದಸ್ಯ, ಸಮಸ್ತ ಕೇರಳ ಮದ್ರಸ ಮ್ಯಾನೇಜ್‌ಮೆಂಟ್ ಅಧ್ಯಕ್ಷ, ಸಮಸ್ತ ಪಾಲಕ್ಕಾಡ್ ಜಿಲ್ಲಾ ಉಪಾಧ್ಯಕ್ಷ, ಮಣ್ಣಾರ್ಕಾಡ್ ತಾಲೂಕು ಅಧ್ಯಕ್ಷ, ನಾಡುಕ್ಕಲ್ ಇಮಾಂ ನವವಿ ಇಸ್ಲಾಮಿಕ್ ಕಾಂಪ್ಲೆಕ್ಸ್‌ನ ಪ್ರಧಾನ ಕಾರ್ಯದರ್ಶಿ, ಮಣ್ಣಾರ್ಕಾಡ್ ದಾರುನ್ನಜಾತ್ ಅನಾಥಾಶ್ರಮದ ಕಾರ್ಯಾಧ್ಯಕ್ಷ ಸೇರಿದಂತೆ ಹಲವಾರು ಸ್ಥಾನಗಳನ್ನು ಅವರು ಅಲಂಕರಿಸಿದ್ದರು.

ಪಟ್ಟಿಕ್ಕಾಡ್ ಜಾಮಿಯಾ ನೂರಿಯಾ, ನಂದಿ ದಾರುಸ್ಸಲಾಂ, ಓರವಂಪುರ, ಕಣ್ಣೂರಿನ ಮಾಟ್ಟೂಲ್, ಕುಳಪ್ಪರಂಬ್, ಮಣಲಡಿ, ಏಪ್ಪಿಕ್ಕಾಡ್, ಇರುಂಬುಝಿ, ಚೆಂಬ್ರಶ್ಶೇರಿ, ಆಲತ್ತೂರ್ಪ್ಪಾಡಿ, ಪಾಲಕ್ಕಾಡ್ ಜನ್ನಾತುಲ್ ಉಲೂಂ, ಪಲ್ಲಿಶ್ಶೇರಿ, ಕಾರಂದೂರು, ಚೆಮ್ಮಾಡ್, ಮಾವೂರ್ ಮುಂತಾದೆಡೆ ಅಧ್ಯಾಪಕರಾಗಿ ಸೇವೆಗೈದಿದ್ದಾರೆ.

ಮೃತರು ಪತ್ನಿ, ಎಂಟು ಮಂದಿ ಪುತ್ರರು, ಆರು ಮಂದಿ ಪುತ್ರಿಯರು ಸೇರಿದಂತೆ ಅಪಾರ ಬಂಧುಮಿತ್ರರು ಹಾಗೂ ಶಿಷ್ಯಂದಿರನ್ನು ಅಗಲಿದ್ದಾರೆ.

*ಸಂತಾಪ: ಎ.ಪಿ.ಮುಹಮ್ಮದ್ ಮುಸ್ಲಿಯಾರ್‌ರ ನಿಧನಕ್ಕೆ ಪಾಣಕ್ಕಾಡ್ ಹೈದರ್ ಅಲಿ ಶಿಹಾಬ್ ತಂಙಳ್, ಎಂ.ಟಿ.ಉಸ್ತಾದ್, ಆಲಿಕುಟ್ಟಿ ಉಸ್ತಾದ್, ಕೋಟುಮಲೆ ಉಸ್ತಾದ್, ತ್ವಾಖಾ ಉಸ್ತಾದ್, ಜಬ್ಬಾರ್ ಉಸ್ತಾದ್, ಝೈನುಲ್ ಆಬಿದೀನ್ ತಂಙಳ್, ಖಾಸಿಂ ಉಸ್ತಾದ್, ಕೆ.ಎಸ್.ಹೈದರ್ ದಾರಿಮಿ, ಕೆ.ಎಲ್.ಉಮರ್ ದಾರಿಮಿ, ಕುಕ್ಕಿಲ ದಾರಿಮಿ, ಸಿದ್ದೀಕ್ ಫೈಝಿ ಕರಾಯ, ನೌಷಾದ್ ಹಾಜಿ ಸೂರಲ್ಪಾಡಿ, ಸಿತಾರ್ ಅಬ್ದುಲ್ ಮಜೀದ್ ಹಾಜಿ, ಮುಸ್ತಫಾ ಫೈಝಿ ಕಿನ್ಯ, ಬಶೀರ್ ಅಝ್‌ಹರಿ ಬಾಯಾರ್, ರಫೀಕ್ ಅಜ್ಜಾವರ, ಅಬ್ದುಲ್ಲ ಎಂ.ಎ.ಬೆಳ್ಮ, ಇಬ್ರಾಹೀಂ ಕುಂಬಕುದಿ, ಇಕ್ಬಾಲ್ ಬಾಳಿಲ, ಹನೀಫ್ ಹಾಜಿ ಪಾಜಪಲ್ಲ, ರಿಯಾಝುದ್ದೀನ್ ಹಾಜಿ ಬಂದರ್, ಹನೀಫ್ ಹಾಜಿ, ಲತೀಫ್ ಹಾಜಿ, ಉಸ್ಮಾನ್ ಹಾಜಿ, ಬಂಬ್ರಾಣ ಉಸ್ತಾದ್, ಐ.ಮೊಯ್ದಿನಬ್ಬ ಹಾಜಿ, ಮೆಟ್ರೊ ಹಾಜಿ, ಶೇಕಬ್ಬ ಹಾಜಿ ಕಿನ್ಯ, ಎಸ್ಕೆಎಸ್ಸೆಸ್ಸೆಫ್ ಬೆಳ್ತಂಗಡಿ ವಲಯ ಸಮಿತಿ, ಮೂಡುಬಿದಿರೆಯ ದಾರುನ್ನೂರು ಎಜುಕೇಷನ್ ಸೆಂಟರ್ ಹಾಗೂ ಅಂಗ ಸಂಸ್ಥೆಗಳು, ಡಿಕೆಎಸ್‌ಸಿ ಯುಎಇ ರಾಷ್ಟ್ರೀಯ ಸಮಿತಿ, ಎಸ್ಕೆಎಸ್ಸೆಸ್ಸೆಫ್ ಹಳೆಯಂಗಡಿ ಘಟಕ, ಜೆಡಿಎಸ್ ಮುಖಂಡ ಹಾರೂನ್ ರಶೀದ್ ಮೊದಲಾದವರು ಸಂತಾಪ ಸೂಚಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News