×
Ad

ಬಿಜೆಪಿಯಿಂದ ಸಂಸತ್ ಕಲಾಪಕ್ಕೆ ತಡೆ: ಯೆಚೂರಿ

Update: 2016-12-16 18:21 IST

ಕೋಲ್ಕತಾ, ಡಿ.16: ನೋಟು ರದ್ದತಿಯ ಬಿಕ್ಕಟ್ಟು ದಿನೇ ದಿನೇ ವೃದ್ಧಿಸುತ್ತಿದೆಯೆಂದು ಹೇಳಿರುವ ಸಿಪಿಎಂನ ಪ್ರಧಾನ ಕಾರ್ಯದರ್ಶಿ ಸೀತಾರಾಮ ಯೆಚೂರಿ, ಈ ಬಿಕ್ಕಟ್ಟು ಯಾವಾಗ ಕೊನೆಗೊಳ್ಳಬಹುದೆಂಬ ಕುರಿತು ಸರಕಾರದ ಬಳಿ ಸರಿಯಾದ ಉತ್ತರವಿಲ್ಲದಿದ್ದುದರಿಂದ ಅದು ಸಂಸತ್ ಅಧಿವೇಶನವನ್ನು ಭಗ್ನಗೊಳಿಸಿದೆಯೆಂದು ಆರೋಪಿಸಿದ್ದಾರೆ.

 ನೋಟು ರದ್ದತಿಯಿಂದ ಇಡೀ ಆರ್ಥಿಕತೆಯ ಮೇಲೆ ಕೆಟ್ಟ ಪರಿಣಾಮವಾಗಿದೆ. ಮೊದಲು ಸಣ್ಣ ಕೈಗಾರಿಕೆಗಳಿಗಷ್ಟೇ ತೊಂದರೆಯಾಗಿತ್ತು. ಆದರೆ ಈಗ, ಮಧ್ಯಮ ಮತ್ತು ದೊಡ್ಡ ಕೈಗಾರಿಕೆಗಳಿಗು ಅದರ ಬಾಧೆ ತಟ್ಟಿದೆ. ಈ ಬಿಕ್ಕಟ್ಟು ಯಾವಾಗ ಕೊನೆಗೊಳ್ಳುವುದೆಂದು ಸರಕಾರ ಹಾಗೂ ಆರ್‌ಬಿಐ ಸ್ಪಷ್ಟಪಡಿಸಬೇಕೆಂದು ಇಲ್ಲಿ ನಡೆದ ಕಾರ್ಯಕ್ರಮವೊಂದರ ನೇಪಥ್ಯದಲ್ಲಿ ಅವರು ಪತ್ರಕರ್ತರೊಡನೆ ಹೇಳಿದರು.

ನೋಟು ಬದಲಾವಣೆ ಯಾವಾಗ ಮುಗಿಯುವುದೆಂಬುದನ್ನು ಆರ್‌ಬಿಐ ಸ್ಪಷ್ಟವಾಗಿ ಹೇಳಬೇಕು. ಜನರ ಬವಣೆ ಮುಂದುವರಿಯಬಾರದು. ಅದು ನಿಲ್ಲಬೇಕೆಂದು ಯೆಚೂರಿ ಆಗ್ರಹಿಸಿದರು.

ಬಿಜೆಪಿಯ ಬಳಿ ಇದಕ್ಕೆ ಯಾವುದೇ ಸರಿಯಾದ ಉತ್ತರವಿಲ್ಲದಿದ್ದುದರಿಂದ ಅದು ಸಂಸತ್ ಕಲಾಪವನ್ನು ಕೆಡಿಸಿದೆ. ಪ್ರಧಾನಿ ಚರ್ಚೆಯಲ್ಲಿ ಭಾಗವಹಿಸಬೇಕೆಂದು ತಾವು ಒತ್ತಾಯಿಸಿದ್ದೆವು. ಆದರೆ, ಅವರು ಬರಲಿಲ್ಲ. ಸೂಕ್ತ ಉತ್ತರವಿಲ್ಲದುದರಿಂದ ಬಿಜೆಪಿ ಸಂಸತ್ ಅಧಿವೇಶನವನ್ನು ಕೆಡಿಸಿದೆಯೆಂದು ಅವರು ಆರೋಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News