×
Ad

ಉಪಾಹಾರಕ್ಕೆ 5 ರೂ, ಊಟಕ್ಕೆ 8 ರೂ.

Update: 2016-12-16 19:50 IST

ಜೈಪುರ, ಡಿ.15: ತಮಿಳುನಾಡಿನ ಜನಪ್ರಿಯ ‘ಅಮ್ಮಾ’ ಕ್ಯಾಂಟೀನ್‌ಗಳ ರೀತಿಯಲ್ಲೇ ಈಗ ರಾಜಸ್ತಾನದಲ್ಲಿ 5 ರೂಪಾಯಿಗೆ ಬೆಳಗ್ಗಿನ ಉಪಾಹಾರ ಮತ್ತು 8 ರೂಪಾಯಿಗೆ ಹೊಟ್ಟೆತುಂಬಾ ಊಟ ನೀಡುವ ‘ಅನ್ನಪೂರ್ಣ ರಸೋಯೀಸ್’ ಆರಂಭವಾಗಿದೆ.

 ‘ಅನ್ನಪೂರ್ಣ ರಸೋಯೀಸ್’ನಲ್ಲಿ ಆಹಾರ ತಿನಿಸುಗಳು ನಾಲ್ಕುಪಟ್ಟು ಕಡಿಮೆ ದರದಲ್ಲಿ ದೊರೆಯುತ್ತದೆ. ಆರಂಭಿಕ ಹಂತದಲ್ಲಿ ಈ ಯೋಜನೆಯಿಂದ ರಾಜ್ಯದ ಬೊಕ್ಕಸಕ್ಕೆ ಪ್ರತೀ ವರ್ಷ ಸುಮಾರು 50 ಕೋಟಿ ರೂ.ಗಳಷ್ಟು ಹೊರೆ ಬೀಳಲಿದೆ ಎಂದು ಅಂದಾಜಿಸಲಾಗಿದೆ.

  ಗ್ರಾಮೀಣ ಭಾಗದ ಬಡಜನರಿಗೆ ಆಹಾರ ಒದಗಿಸುವುದು ಯೋಜನೆಯ ಮುಖ್ಯ ಉದ್ದೇಶವಾಗಿದೆ. ರಾಜ್ಯದ 12 ಜಿಲ್ಲೆಗಳ ಗ್ರಾಮೀಣ ಪ್ರದೇಶದ ಜನರಿಗೆ ಸಂಚಾರಿ ವಾಹನಗಳ ಮೂಲಕ ಖಾದ್ಯವಸ್ತುಗಳನ್ನು ಪೂರೈಸಲಾಗುತ್ತದೆ. ಆರಂಭದಲ್ಲಿ 80 ವಾಹನಗಳನ್ನು ಈ ಕಾರ್ಯಕ್ಕೆ ನಿಯೋಜಿಸಲಾಗಿದ್ದು, ಯೋಜನೆ ಪೂರ್ಣ ಪ್ರಮಾಣದಲ್ಲಿ ಅನುಷ್ಠಾನಗೊಂಡಾಗ 200 ವಾಹನಗಳನ್ನು ಬಳಸಿಕೊಳ್ಳಲಾಗುವುದು ಎಂದು ಮೂಲಗಳು ತಿಳಿಸಿವೆ. ರಾಜಸ್ತಾನದ ಸಾಂಪ್ರದಾಯಿಕ ಶೈಲಿಯ ತಿನಿಸುಗಳಾದ- ದಾಲ್ ಬತ್ತಿ ಕೂರ್ಮ, ಬಜ್ರೆ ಕೀ ರೋಟಿ, ಮಕ್ಕೀ ಕಿ ಖಿಚಿಡಿ- ಮುಂತಾದವುಗಳನ್ನು ಉಣಬಡಿಸಲಾಗುತ್ತದೆ.

   ರಾಜ್ಯ ಸರಕಾರದ ಈ ಮಹಾತ್ವಾಕಾಂಕ್ಷೆಯ ಯೋಜನೆಗೆ ಗುರುವಾರ ರಾಜ್ಯದ ಮುಖ್ಯಮಂತ್ರಿ ವಸುಂಧರ ರಾಜೆ , ದಲಿತ ಮತ್ತು ಗುಜ್ಜಾರ್ ಸಮುದಾಯದ ಪ್ರತಿನಿಧಿಗಳಾದ ಮುನ್ನಿ ಮತ್ತು ಕೈಲಾಶಿಯವರೊಂದಿಗೆ -ಬಜ್ರೆ ಕಿ ಖಿಚಿಡಿ, ಬೇಸನ್ ಗಟ್ಟ ಮತ್ತು ಗಾರ್ಲಿಕ್ ಚಟ್ನಿಯನ್ನು ಒಳಗೊಂಡ ಭೋಜನ ಸವಿಯುವ ಮೂಲಕ ಚಾಲನೆ ನೀಡಿದರು. ಕಠಿಣ ದುಡಿಮೆ ಮಾಡುವ ಓರ್ವ ವ್ಯಕ್ತಿ ಹೊಟ್ಟೆ ತುಂಬಾ ಉಣ್ಣಬೇಕು ಎಂಬುದು ಈ ಯೋಜನೆಯ ಹಿಂದಿರುವ ಉದ್ದೇಶವಾಗಿದೆ. ಇದಕ್ಕಾಗಿ ಸಾಕಷ್ಟು ಮೊತ್ತವನ್ನು ಮೀಸಲಿರಿಸಲಾಗಿದೆ ಎಂದು ಅವರು ಈ ಸಂದರ್ಭದಲ್ಲಿ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News