ಕಪ್ಪು ಹಣ ಬಿಳಿ ಇನ್ನೂ ಮೂರು ತಿಂಗಳು ಅವಕಾಶ: ಸರಕಾರ
ಹೊಸದಿಲ್ಲಿ, ಡಿ.16: ಮುಂದಿನ ವರ್ಷದ ಎ.1ರ ಮೊದಲು ಬ್ಯಾಂಕ್ ಖಾತೆಯಲ್ಲಿ ಠೇವಣಿಯಿರಿಸಿದ ಲೆಕ್ಕ ನೀಡದ ಹಣವನ್ನು ಹೊಸ ಪಿಎಂಜಿಕೆವೈ ಯೋಜನೆಯನ್ವಯ, ಶೇ.50 ತೆರಿಗೆ ಹಾಗೂ ದಂಡ ಪಾವತಿಸಿ ಘೋಷಿಸಿಕೊಳ್ಳಬಹುದೆಂದು ಸರಕಾರವಿಂದು ಹೇಳಿದೆ.
ಬ್ಯಾಂಕ್‌ನಲ್ಲಿ ಠೇವಣಿಯಿರಿಸಿದ ಕಪ್ಪುಹಣದ ಘೋಷಣೆಗೆ ಶೇ.50 ತೆರಿಗೆ ಹಾಗೂ ಮೇಲ್ತೆರಿಗೆ ಪಾವತಿಸಲು ಪ್ರಧಾನಮಂತ್ರಿ ಗರೀಬ್ ಕಲ್ಯಾಣ್ ಯೋಜನೆ(ಪಿಎಂಜಿಕೆವೈ) ಅವಕಾಶ ಕಲ್ಪಿಸುತ್ತದೆ. ಘೋಷಣೆ ಮಾಡಿದವರು ಒಟ್ಟು ಮೊತ್ತದ ಕಾಲಂಶವನ್ನು ನಾಲ್ಕು ವರ್ಷಗಳ ಕಾಲ ಬಡ್ಡಿ ರಹಿತ ಠೇವಣಿಯಿರಿಸಬೇಕು.
2017ರ ಎ.1 ಅಥವಾ ಅದಕ್ಕೆ ಮೊದಲು ಆರಂಭವಾಗುವ ಯಾವುದೇ ಅಂದಾಜು ವರ್ಷಕ್ಕೆ ಆದಾಯ ತೆರಿಗೆ ಕಾಯ್ದೆಯನ್ವಯ ತೆರಿಗೆ ವಿಧಿಸಬಹುದಾದ ವ್ಯಕ್ತಿಯೊಬ್ಬನ ಬ್ಯಾಂಕ್ ಖಾತೆಯಲ್ಲಿರುವ ಠೇವಣಿ ಅಥವಾ ನಗದು ರೂಪದ ಯಾವುದೇ ಆದಾಯವನ್ನು ಈ ಯೋಜನೆಯನ್ವಯ ಘೋಷಿಸಬಹುದೆಂದು ಕೇಂದ್ರ ಸಹಾಯಕ ವಿತ್ತ ಸಚಿವ ಸಂತೋಷ್‌ಕುಮಾರ್ ಗಂಗ್ವಾರ್ ಲಿಖಿತ ಉತ್ತರವೊಂದರಲ್ಲಿ ಲೋಕಸಭೆಗೆ ತಿಳಿಸಿದ್ದಾರೆ.
ತೆರಿಗೆ ಕಾಯ್ದೆ(2ನೆ ತಿದ್ದುಪಡಿ) ಮಸೂದೆ-2016ನ್ನು ನ.29ರಂದು ಆರ್ಥಿಕ ಮಸೂದೆಯಾಗಿ ಲೋಕಸಭೆ ಅಂಗೀಕರಿಸಿದ್ದು, ಪಿಎಂಜಿಕೆವೈ ಅದರ ಒಂದು ಭಾಗವಾಗಿದೆ.