ಸಭೆಗೆ ಅಡ್ಡಿ: ಶಿವಸೇನಾ ಕಾರ್ಪೊರೇಟರ್ ವಿರುದ್ಧ ಮೊಕದ್ದಮೆ

Update: 2016-12-16 14:46 GMT

ಠಾಣೆ, ಡಿ.16: ಕೊಳೆಗೇರಿ ಕಾಲನಿಯ ಅಭಿವೃದ್ಧಿಗೆ ಸಂಬಂಧಿಸಿ ನಡೆದ ನಾಗರಿಕರ ಸಭೆಯೊಂದಕ್ಕೆ ಅಡ್ಡಿಮಾಡಿದ ಆರೋಪದಲ್ಲಿ ಠಾಣೆ ಮಹಾನಗರ ಪಾಲಿಕೆಯ ಒಬ್ಬ ಶಿವಸೇನಾ ಕಾರ್ಪೊರೇಟರ್ ಸಹಿತ 12ಕ್ಕೂ ಹೆಚ್ಚು ಮಂದಿಯ ವಿರುದ್ಧ ಪ್ರಕರಣವೊಂದು ದಾಖಲಾಗಿದೆ.

ಈ ಘಟನೆ ಡಿ.11ರಂದು ನಡೆದಿದ್ದು, ಶಂಕಿತರ ವಿರುದ್ಧ ನಿನ್ನೆ ಮೊಕದ್ದಮೆ ದಾಖಲಿಸಲಾಗಿದೆಯೆಂದು ಪೊಲೀಸರು ತಿಳಿಸಿದ್ದಾರೆ.

ಘಟನೆಯ ಸಂಬಂಧ ಯಾರನ್ನೂ ಈ ವರೆಗೆ ಬಂಧಿಸಲಾಗಿಲ್ಲ.

ಡೆವಲಪರ್ ಆಗಿರುವ ಈ ಕಾರ್ಪೊರೇಟರ್‌ಗೆ ಪೋಖ್ರಾನ್ ರಸ್ತೆ-2ರ ಕೊಳೆಗೇರಿ ಕಾಲನಿಯ ಅಭಿವೃದ್ಧಿ ಹಾಗೂ ನಿವಾಸಿಗಳಿಗೆ ಹಕ್ಕುಪತ್ರ ನೀಡುವ ಕೆಲಸವನ್ನು 2009ರಲ್ಲಿ ಒಪ್ಪಿಸಲಾಗಿತ್ತು. ಆದರೆ, ಆತ ಅದರಲ್ಲಿ ವಿಫಲನಾದ ಕಾರಣ, ಸಂತ್ರಸ್ತರು ವಿವಾದದ ಚರ್ಚೆಗಾಗಿ ಸಭೆಯೊಂದನ್ನು ಕರೆದಿದ್ದರು. ಸಭೆ ಆರಂಭವಾದಾಗ ಬಂದ ಕಾರ್ಪೊರೇಟರ್ ಮೈಕ್ ಸೆಳೆದುಕೊಂಡು ಹಾಗೂ ಕುರ್ಚಿಗಳನ್ನು ಎಸೆದು ಅಡ್ಡಿಪಡಿಸಿದರೆಂದು ಚಾಕೊ ಎಂಬವರು ದೂರು ಸಲ್ಲಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News