ಆದಿವಾಸಿಗಳ ಗುಡಿಸಲು ಧ್ವಂಸ ಪ್ರಕರಣ : ಅರಣ್ಯ ಸಚಿವರಿಗೆ ಮನವಿ
ಮಂಗಳೂರು,ಡಿ.16:ಕೊಡಗಿನಲ್ಲಿ ಆದಿವಾಸಿಗಳ ಗುಡಿಸಲು ಧ್ವಂಸ ಪ್ರಕರಣಕ್ಕೆ ಸಂಬಂಧಿಸಿದಂತೆ ನಿರ್ವಸಿತಗರಾಗಿರುವ ಕುಟುಂಬಗಳಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕು ಎಂದು ರಾಜ್ಯ ಭೂಮಿ ಮತ್ತು ವಸತಿ ವಂಚಿತರ ವೇದಿಕೆಯ ಸಂಚಾಲಕ ಸಮಿತಿಯ ಸದಸ್ಯರಾದ ಕೆ.ಎಲ್.ಅಶೋಕ್,ಗೌರಿ ಲಂಕೇಶ್ ,ಸುರೇಶ್ ಭಟ್ ಬಾಕ್ರ ಬೈಲ್ ,ರವಿ ಕುಮಾರ್ ಜಿಲ್ಲಾ ಉಸ್ತುವಾರಿ ಸಚಿವರನ್ನು ನಗರದ ಸರ್ಕ್ಯೂಟ್ ಹೌಸ್‌ನಲ್ಲಿ ಭೇಟಿ ಮಾಡಿ ಮನವಿ ಸಲ್ಲಿಸಿದರು.
ಭೂಮಿ ಇಲ್ಲದೆ ನಿರ್ವಸಿಗರಾದ ಆದಿವಾಸಿಗಳಿಗೆ ಪರ್ಯಾಯ ವ್ಯವಸ್ಥೆಗೆ ಕೊಡಗು ಜಿಲ್ಲಾಡಳಿತದೊಂದಿಗೆ ಸಮಾಲೋಚಿಸಿ ಕ್ರಮ:
ಹಲವಾರು ವರುಷಗಳಿಂದ ಅರಣ್ಯ ದೊಳಗೆ ವಾಸಿಸುವ ಆದಿವಾಸಿಗಳಿಗೆ ಅರಣ್ಯ ಇಲಾಖೆಯಿಂದ ತೊಂದರೆಯಾಗಿದ್ದರೆ ಈ ಬಗ್ಗೆ ಸೂಕ್ತ ಕ್ರಮ ಕೈ ಗೊಳ್ಳಲಾಗುವುದು.ಅರಣ್ಯದೊಳಗೆ ಹಿಂದಿನ ಕಾಲದಿಂದಲೂ ವಾಸಿಸುತ್ತಿರುವ ಆದಿವಾಸಿಗಳ ಹಕ್ಕುಗಳ ರಕ್ಷಣೆ ಯನ್ನು ಮಾಡಲು ಸರಕಾರ ಬದ್ಧವಾಗಿದೆ. ಅರಣ್ಯ ಸಂರಕ್ಷಣೆಯ ಬಗ್ಗೆ ಸುಪ್ರೀಂ ಕೋರ್ಟಿನ ಆದೇಶವನ್ನು ಸರಕಾರ ಪಾಲಿಸುವ ಹೊಣೆಗಾರಿಕೆಯನ್ನು ಹೊಂದಿದೆ. ಭೂಮಿ ಇಲ್ಲದ ಬಡವರಿಗೆ ಕಂದಾಯ ಇಲಾಖೆಯ ಭೂಮಿಯಲ್ಲಿ ಪರ್ಯಾಯ ಪುನರ್ವಸತಿ ಕಲ್ಪಿಸಲು ಕೊಡಗು ಜಿಲ್ಲಾಧಿಕಾರಿಗೆ ಜೊತೆ ಸಮಾಲೋಚನೆ ನಡೆಸಿ ಕ್ರಮ ಕೈ ಗೊಳ್ಳುವುದಾಗಿ ಅರಣ್ಯ ಸಚಿವ ಬಿ.ರಮಾನಾಥ ರೈ ತಿಳಿಸಿದರು.
ಆದಿವಾಸಿಗಳ ಮೇಲೆ ದೌರ್ಜನ್ಯ :
ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ಅಮ್ಮತ್ತಿ ಹೋಬಳಿಯ ಮಾಲ್ದರೆ ಗ್ರಾಮದಲ್ಲಿ 577 ಕುಟುಂಬಗಳಲ್ಲಿ 3000 ಜನ ಸದಸ್ಯರು 1964ರಲ್ಲಿ ಸಮಾಜ ಕಲ್ಯಾಣ ಇಲಾಖೆಗೆ ಸೇರಿದ್ದ ಕುಟುಂಬಗಳನ್ನು ಒಕ್ಕಲೆಬ್ಬಿಸಿ ಬೀದಿ ಪಾಲು ಮಾಡಲಾಗುತ್ತಿದೆ.
ಡಿ.7ರಂದು 3 ಕುಟುಂಬಗಳ ಸದಸ್ಯರನ್ನು ಅರಣ್ಯ ಇಲಾಖೆಯವರು ಒಕ್ಕಲೆಬ್ಬಿಸಿ ಬೆತ್ತಲೆಗೊಳಿಸಿ ದೌರ್ಜನ್ಯ ನಡೆಸಿದ್ದಾರೆ. ಇವರಿಗೆ ಅನ್ಯಾಯವಾಗಿದೆ. ಈ ಆದಿವಾಸಿಗಳಿಗೆ ಬೇರೆ ಯಾವೂದೇ ಭೂಮಿ ನಿವೇಶನ ಇಲ್ಲದೆ ಇರುವುದರಿಂದ ತಕ್ಷಣ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕು ಎಂದು ಭೂಮಿ ಮತ್ತು ವಸತಿ ವಂಚಿತರ ವೇದಿಕೆಯ ಸಂಚಾಲಕರಾದ ಗೌರಿ ಲಂಕೇಶ್ ಹಾಗೂ ಕೆ.ಎಲ್.ಅಶೋಕ್ ನೇತೃತ್ವದ ಸಮಿತಿಯ ಸದಸ್ಯರು ಅರಣ್ಯ ಸಚಿವರ ಜೊತೆ ಮನವಿ ಸಲ್ಲಿಸಿ ಆಗ್ರಹಿಸಿದರು.
ಡಿ.18 ಸಂತ್ರಸ್ಥರ ಪ್ರದೇಶಕ್ಕೆ ಸ್ವಾತಂತ್ರ ಹೋರಾಟಗಾರ ದೊರೆ ಸ್ವಾಮಿ ನೇತೃತ್ವದ ಸಮಿತಿ ಭೇಟಿ:
ಕೊಡಗಿನ ಅಮ್ಮತ್ತಿಯಲ್ಲಿ ಆದಿವಾಸಿಗಳ ಗುಡಿಸಲು ಧ್ವಂಸ ಪ್ರಕರಣನಡೆದ ಸ್ಥಳಕ್ಕೆ ಸ್ವಾತಂತ್ರ ಹೋರಾಟಗಾರ ದೊರೆಸ್ವಾಮಿ ನೇತೃತ್ವದ ಭೂಮಿ ಮತ್ತು ವಸತಿ ವಂಚಿತರ ವೇದಿಕೆಯ ನಿಯೋಗ ಸಂತ್ರಸ್ಥರನ್ನು ಭೇಟಿ ಮಾಡಲಿದೆ ಎಂದು ಕೆ.ಎಲ್.ಅಶೋಕ್ ತಿಳಿಸಿದ್ದಾರೆ.