×
Ad

ಮಹಿಳಾ ಮತ್ತು ಮಕ್ಕಳ ಕಲಾಣ್ಯ ಇಲಾಖೆ ಅಧಿಕಾರಿಗಳಿಂದ ಮಹಿಳೆಗೆ ಅನ್ಯಾಯ

Update: 2016-12-16 23:17 IST

ಬಂಟ್ವಾಳ, ಡಿ.16 : ತಾಲೂಕಿನ ಮಹಿಳಾ ಮತ್ತು ಮಕ್ಕಳ ಕಲಾಣ್ಯ ಇಲಾಖೆ ಅಧಿಕಾರಿಗಳು ಮಹಿಳೆಗೆ ಅನ್ಯಾಯ ವೆಸಗಿದ್ದಾರೆ ಎಂಬ ಗಂಭೀರ ಆರೋಪವನ್ನು ಮೂಲತಃ ಪಾಣೆಮಂಗಳೂರಿನ ರಂಗೇಲು ನಿವಾಸಿ ಜಯಲಕ್ಷ್ಮಿ ಎನ್. ಭಟ್ ಮಾಡಿದ್ದಾರೆ.

ಅವರು ಶುಕ್ರವಾರ ಸಂಜೆ ಬಿ.ಸಿ.ರೋಡಿನ ಪ್ರೆಸ್ ಕ್ಲಬ್‌ನಲ್ಲಿ ಸುದ್ದಿಗೋಷ್ಠಿಯನ್ನು ನಡೆಸಿ ಬಂಟ್ವಾಳ ತಾಲೂಕು ಶಿಶು ಅಭಿವೃದ್ಧಿ ಇಲಾಖೆಯಿಂದ ತನಗಾದ ಅನ್ಯಾಯದ ಬಗ್ಗೆ ವಿವರಣೆ ನೀಡಿದರು.

 ರಂಗೇಲಿನ ಅಂಗನವಾಡಿ ಕೇಂದ್ರದ ದುರಸ್ಥಿಯ ಹಿನ್ನೆಲೆಯಲ್ಲಿ ತಾಲೂಕಿನ ಮಹಿಳಾ ಮತ್ತು ಮಕ್ಕಳ ಕಲಾಣ್ಯ ಇಲಾಖೆಯ ಕೋರಿಕೆಯಂತೆ 2013ರ ಮೇ 13ರಂದು 4 ತಿಂಗಳ ಮಟ್ಟಿಗೆ ತನ್ನ ವಾಸದ ಮನೆಯನ್ನು ಮಾನವೀಯ ನೆಲೆಯಲ್ಲಿ ಅಂಗನವಾಡಿ ಕೇಂದ್ರವನ್ನು ನಡೆಸಲು ಒದಗಿಸಿದ್ದೆ. ತಾತ್ಕಾಲಿಕವಾಗಿ ಪಡೆದ ನನ್ನ ಮನೆಯನ್ನು 2016ರವರೆಗೆ ನನಗೆ ವಿವಿಧ ಅಮಿಷಗಳನ್ನೊಡ್ಡಿ ಒಟ್ಟು 38 ತಿಂಗಳುಗಳ ಕಾಲ ಉಪಯೋಗಿಸಿದ್ದಾರೆ ಎಂದು ಅವರು ತಿಳಿಸಿದರು.

ಈ ನಡುವೆ ಮನೆಯನ್ನು ನಿಗದಿತ ವೇಳೆಯಲ್ಲಿ ಬಿಟ್ಟು ಕೊಡದಿದ್ದರಿಂದ ಇಲಾಖೆಯೊಂದಿಗೆ ಪತ್ರ ವ್ಯವಹಾರ ಹಾಗೂ ಖುದ್ದಾಗಿ ಅಧಿಕಾರಿಗಳನ್ನು ಭೇಟಿ ಮಾಡಿ ಮನೆ ಬಿಟ್ಟು ಕೊಡುವಂತೆ ಕೇಳಿ ಕೊಂಡರೂ ಇಲಾಖೆ ಅಧಿಕಾರಿಗಳು ಇದಕ್ಕೆ ಸ್ಪಂದಿಸಿಲ್ಲ ಎಂದು ಆರೋಪಿಸಿದ ಅವರು, ಇದನ್ನು ತಾನು ಸಚಿವ ಬಿ.ರಮಾನಾಥ ರೈ ಅವರ ಗಮನಕ್ಕೆ ತಂದ ಬಳಿಕ 2015 ಎಪ್ರಿಲ್‌ನಿಂದ ತಿಂಗಳಿಗೆ 943 ರೂಪಾಯಿಯಂತೆ 18 ತಿಂಗಳು ಮನೆ ಬಾಡಿಗೆಯನ್ನು ಇಲಾಖೆ ಪಾವತಿಸಿದೆ. ಆ ಬಳಿಕವೂ ಅಂಗನವಾಡಿ ಕೇಂದ್ರವಾಗಿ ಮನೆಯನ್ನು ಇಲಾಖೆ ಉಪಯೋಗಿಸಿಕೊಂಡಿದೆ. ನಂತರದ 13 ತಿಂಗಳ ಬಾಡಿಗೆಯನ್ನು ಪಾವತಿಸದೆ ಇದೀಗ ಮನೆಯಿಂದ ಅಂಗನವಾಡಿಯನ್ನು ಖಾಲಿ ಮಾಡಿದ್ದಾರೆ ಎಂದರು.

ಸುಮಾರು ಮೂರೂವರೆ ವರ್ಷಗಳ ಕಾಲ ಮನೆಯನ್ನು ಉಪಯೋಗಿಸಿದ್ದು ಅದೀಗ ಸಂಪೂರ್ಣವಾಗಿ ಶಿಥಿಲಾವಸ್ಥೆಗೆ ತಲುಪಿದ್ದು ತಾನೇ ಅದನ್ನು ಸ್ವಂತ ಖರ್ಚಿನಲ್ಲಿ ದುರಸ್ಥಿಗೊಳಿಸಿದ್ದೇನೆ. ಇದಕ್ಕೆ ತಗಲಿರುವ ವಚ್ಚವನ್ನು ಕೂಡಾ ಇಲಾಖೆ ಪಾವತಿಸಲು ಹಿಂದೇಟು ಹಾಕುತ್ತಿದೆ ಎಂದು ಆಪಾದಿಸಿದ ಅವರು, ಈ ಬಗ್ಗೆ ಇಲಾಖೆಯ ಜಿಲ್ಲಾ ನಿರ್ದೇಶಕರನ್ನು ಭೇಟಿಯಾಗಿ ವಿಚಾರಿಸಿದಾಗ ಬಂಟ್ವಾಳ ತಾಲೂಕು ಶಿಶು ಅಭಿವೃದ್ಧಿ ಇಲಾಖೆಯಿಂದ ಇಂತಹ ಒಂದು ವಿಚಾರದ ಯಾವುದೇ ಮಾಹಿತಿ ತನಗೆ ಬಂದಿಲ್ಲ ಎಂದು ನಿರ್ದೇಶಕರು ತನಗೆ ಸ್ಪಷ್ಟ ಪಡಿಸಿದ್ದಾರೆ ಎಂದು ಜಯಲಕ್ಷಿ ಅವರು ತಿಳಿಸಿದರು.

ಅಂಗನವಾಡಿ ಕೇಂದ್ರದ ಪುನರ್ ನಿರ್ಮಾಣಕ್ಕೆ ಟೆಂಡರ್ ಆಗಿದ್ದರೂ ಇದುವರೆಗೂ ಕಟ್ಟಡ ನಿರ್ಮಿಸದಿರಲು ಕಾರಣವೇನು? ಜಿಲ್ಲಾ ನಿರ್ದೇಶಕರಿಗೆ ಯಾವುದೇ ಮಾಹಿತಿಯನ್ನು ನೀಡದೆ ಮತ್ತು ಅವರಿಂದ ಯಾವುದೇ ಒಪ್ಪಿಗೆಯೂ ಇಲ್ಲದೆ ಮೆಲ್ಕಾರ್ ರಂಗೇಲು ಅಂಗನವಾಡಿ ಕೇಂದ್ರವನ್ನು ತಾತ್ಕಾಲಿಕ ಕಟ್ಟಡಕ್ಕೆ ಸ್ಥಳಾಂತರಿಸಿದ ಉದ್ದೇಶವಾದರೂ ಏನೆಂದು ಪ್ರಶ್ನಿಸಿದ ಅವರು, ನನಗೆ ಬಾಕಿರುವ 23 ತಿಂಗಳ ಮನೆ ಬಾಡಿಗೆ ಇಲ್ಲವೇ ಮನೆಯ ದುರಸ್ಥಿಗೆ ವ್ಯಯ ಮಾಡಿದ ಅಂದಾಜು 25 ಸಾವಿರ ರೂ. ಹಣವನ್ನು ಪಾವತಿಸಬೇಕೆಂದು ಅವರು ಒತ್ತಾಯಿಸಿದ್ದು ಇಲ್ಲದಿದ್ದಲ್ಲಿ ರಾಜ್ಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಉಮಾಶ್ರೀ ಅವರಿಗೆ ದೂರು ನೀಡಲಾಗುವುದು ಎಂದು ಎಚ್ಚರಿಕೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News