ನಕಲಿ ಪಾಸ್ ಮೂಲಕ ಮರಳು ಸಾಗಾಟ: ಇಬ್ಬರ ಬಂಧನ

Update: 2016-12-16 18:20 GMT

ಕಾಸರಗೋಡು, ಡಿ.16: ನಕಲಿ ಪಾಸ್ ಮೂಲಕ ಮರಳು ಸಾಗಾಟ ಪ್ರಕರಣವೊಂದು ಕಾಸರಗೋಡಿನಲ್ಲಿ ಪತ್ತೆಯಾಗಿದ್ದು, ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಸೂತ್ರಧಾರ ತಲೆಮರೆಸಿ ಕೊಂಡಿದ್ದು, ಬಂಧಿತರನ್ನು ಕಾಞಂಗಾಡ್ ಭೀಮನಡಿಯ ರಾಜು(42) ಮತ್ತು ಬೇಡಡ್ಕದ ಶರತ್(23) ಎಂದು ಗುರುತಿಸಲಾಗಿದೆ.

 ಸೂತ್ರಧಾರ ಎನ್ನಲಾಗಿರುವ ಮೊಗ್ರಾಲ್ ಪುತ್ತೂರು ಚೌಕಿ ಮಜಲ್ನ ಅಶ್ರಫ್ ಎಂಬಾತ ತಲೆಮರೆಸಿ ಕೊಂಡಿದ್ದಾನೆ.

ಈತನ ಮನೆಗೆ ಪೊಲೀಸರು ದಾಳಿ ನಡೆಸಿ ಲ್ಯಾಪ್ಟಾಪ್, ಪ್ರಿಂಟರ್, ನಕಲಿ ಗುರುತಿನ ಚೀಟಿಗಳು, ಆಧಾರ್ ಕಾರ್ಡ್‌ಗಳನ್ನು ವಶಪಡಿಸಿಕೊಂಡಿದ್ದಾರೆ. ಅಲ್ಲದೆ ಹಲವು ಕಟ್ಟಡಗಳ ಪ್ಲಾನ್ ಹಾಗೂ ಸಂಬಂಧಪಟ್ಟ ದಾಖಲೆಗಳನ್ನು ಈತನ ಮನೆಯಿಂದ ವಶಪಡಿಸಿಕೊಳ್ಳಲಾಗಿದೆ.

ನಕಲಿ ದಾಖಲೆ ತಯಾರಿಸಿ ಮರಳು ಸಾಗಾಟ ನಡೆಸಿದ ಹಿಂದೆ ಕೆಲ ಉನ್ನತ ವ್ಯಕ್ತಿಗಳ ಕೈವಾಡ ಇದೆ ಎನ್ನಲಾಗಿದೆ. ನ.29ರಂದು ಕಾಸರಗೋಡು ನೆಲ್ಲಿಕುಂಜೆಯಲ್ಲಿ ರಾತ್ರಿ ಗಸ್ತು ತಿರುಗುತ್ತಿದ್ದ ಪೊಲೀಸರನ್ನು ಕಂಡು ಮರಳು ತುಂಬಿಕೊಂಡು ಬರುತ್ತಿದ್ದ ಲಾರಿಯನ್ನು ತೊರೆದು ಚಾಲಕ ಪರಾರಿಯಾಗಿದ್ದನು ಎನ್ನಲಾಗಿದೆ. ಲಾರಿಯಲ್ಲಿ ಲಭಿಸಿದ್ದ ದಾಖಲೆ ಪತ್ರಗಳನ್ನು ತಪಾಸಣೆ ನಡೆಸಿದಾಗ ನಕಲಿ ಪಾಸ್‌ಗಳು ಲಭಿಸಿದೆ. ಈ ಬಗ್ಗೆ ತನಿಖೆ ನಡೆಸಿದಾಗ ಬೃಹತ್ ಜಾಲವೇ ಇದರ ಹಿಂದೆ ಅಡಗಿದೆ ಎಂಬ ಮಾಹಿತಿ ಪೊಲೀಸರಿಗೆ ಲಭಿಸಿದೆ. ಕಾಸರಗೋಡು, ಬೇಡಗಂ, ನೀಲೇಶ್ವರ ಹಾಗೂ ಇತರ ಪೊಲೀಸ್ ಠಾಣೆ ಕೇಂದ್ರೀಕರಿಸಿ ತನಿಖೆ ನಡೆಸಿದಾಗ ಹಲವು ಮಹತ್ವದ ಮಾಹಿತಿಗಳು ಪೊಲೀಸರಿಗೆ ಲಭಿಸಿದೆ.

 ಮರಳು ಬುಕ್ಕಿಂಗ್ ವೆಬ್ಸೈಟನ್ನು ದುರುಪ ಯೋಗ ಪಡಿಸಿಕೊಂಡು ಮರಳು ಬುಕ್ಕಿಂಗ್ ನಡೆಸಿರುವ ಬಗ್ಗೆಯೂ ತನಿಖೆಯಿಂದ ತಿಳಿದು ಬಂದಿದೆ. ಪ್ರತಿದಿನ 60 ರಿಂದ 70 ಲೋಡ್  ವರೆಗೆ ಮರಳು ಸಾಗಾಟ ಮಾಡಿರುವುದಾಗಿ ತನಿಖೆಯಿಂದ ಮಾಹಿತಿ ಲಭ್ಯವಾಗಿದೆ. ಇದರ ಹಿಂದೆ ಪೊಲೀಸರು, ಅಧಿಕಾರಿಗಳು ಹಾಗೂ ರಾಜಕಾರಣಿಗಳ ಕೈವಾಡ ಇದೆ ಎಂಬ ಸಂಶಯ ಉಂಟಾಗಿದೆ.

   

  ಮೊಗ್ರಾಲ್ ಪುತ್ತೂರಿನ ಮರಳು ಅಡ್ಡೆಯನ್ನು ಕೇಂದ್ರೀಕರಿಸಿ ಮರಳು ಸಾಗಾಟ ಮಾಡಲಾಗಿದು,್ದ ಕಣ್ಣೂರು, ನೀಲೇಶ್ವರ ಮೊದಲಾದೆಡೆಗಳಿಗೆ ಮರಳು ಸಾಗಾಟ ಮಾಡಿರುವುದು ಬೆಳಕಿಗೆ ಬಂದಿದೆ. ಕಾಸರಗೋಡು, ನೀಲೇಶ್ವರ ಮತ್ತು ಬೇಡಡ್ಕ ಪೊಲೀಸ್ ಠಾಣಾ ವ್ಯಾಪ್ತಿಯ ಆರು ಮನೆಗಳನ್ನು ಕೇಂದ್ರೀಕರಿಸಿ ಮರಳು ಪಾಸ್‌ಗಳನ್ನು ತಯಾರಿಸಲಾಗಿತ್ತು. ಗ್ರಾಹಕರಿಗೆ ಬೆಂಬಲ ಬೆಲೆಯಲ್ಲಿ ಲಭಿಸಬೇಕಾದ ಮರಳನ್ನು ನಕಲಿ ದಾಖಲೆಗಳನ್ನು ಸೃಷ್ಟಿಸಿ ಈ ವಂಚನೆ ನಡೆಸಲಾಗಿದ್ದು , ಇನ್ನಷ್ಟು ಮಂದಿ ಕೃತ್ಯದಲ್ಲಿ ಶಾಮೀಲಾಗಿರುವ ಸಾಧ್ಯತೆ ಇದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News