×
Ad

ಕ್ಯಾಂಪಸ್‍ಗಳಲ್ಲಿ ಮಾದಕ ಜಾಲ: ಕ್ರಮಕ್ಕೆ ಆಗ್ರಹಿಸಿ ಎಸ್‍ಐಓ ಮನವಿ

Update: 2016-12-17 18:01 IST

ಮಂಗಳೂರು, ಡಿ.17 : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳೆದ ಹಲವಾರು ವರ್ಷಗಳಿಂದ ಹಲವಾರು ಕಾಲೇಜು ಕ್ಯಾಂಪಸ್ ಗಳಲ್ಲಿ ಡ್ರಗ್ಸ್ ಮತ್ತು ವಿಶೇಷವಾಗಿ ಗಾಂಜಾದಂತಹ ಮಾದಕ ದ್ರವ್ಯ ಮತ್ತು ಅಮಲು ಪದಾರ್ಥಗಳು ವ್ಯಾಪಕವಾಗುತ್ತಿದ್ದು, ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಸ್ಟೂಡೆಂಟ್ಸ್ ಇಸ್ಲಾಮಿಕ್ ಆರ್ಗನೈಝೇಶನ್ ಆಫ್ ಇಂಡಿಯಾ(ಎಸ್‍ಐಓ) ದಕ್ಷಿಣ ಕನ್ನಡ ಜಿಲ್ಲಾ ಘಟಕದ ನಿಯೋಗವು ದ.ಕ. ಜಿಲ್ಲಾಧಿಕಾರಿ ಕೆ.ಜಿ.ಜಗದೀಶ್ ರವರಿಗೆ ಮನವಿ ಸಲ್ಲಿಸತು.

ಜಿಲ್ಲೆಯಲಿ ಮಾದಕ ದ್ರವ್ಯ ಮತ್ತು ಅಮಲು ಪದಾರ್ಥಗಳ ಜಾಲವು ಇಂದು ಕ್ಯಾಂಪಸ್ ನೊಳಗೆ ಕಾಲಿಟ್ಟಿದ್ದು, ವಿದ್ಯಾರ್ಥಿ ಸಮುದಾಯವನ್ನು ತೀವ್ರವಾಗಿ ಬಾಧಿಸಿರುವುದು ಎಸ್‍ಐಓ ಗಮನಿಸಿದೆ. ಇದಕ್ಕೆ ಸ್ಪಷ್ಟ ಉದಾಹರಣೆ ಎಂಬಂತೆ ಕಳೆದ ಎರಡು ವಾರಗಳಿಂದ ಪತ್ರಿಕೆ ಹಾಗೂ ಮಾಧ್ಯಮಗಳಲ್ಲಿ ವರದಿಯಾಗಿರುವ ಹಲವು ಪ್ರಕರಣಗಳು ಸಾಕ್ಷಿಯಾಗಿವೆ.

ಕ್ಯಾಂಪಸ್, ಹಾಸ್ಟೆಲ್, ಅತಿಥಿಗೃಹ(ಪಿಜಿ) ಮುಂತಾದ ಕಡೆಗಳಲ್ಲಿ ಪರಿಸ್ಥಿತಿ ಗಂಭೀರಮಟ್ಟಕ್ಕೆ ತಲುಪುತ್ತಿದೆ. ಈ ಕುರಿತು ಶೀಘ್ರವಾಗಿ ಸೂಕ್ತವಾದ ಕ್ರಮ ಕೈಗೊಳ್ಳದಿದ್ದರೆ ಜಿಲ್ಲೆಯ ಕ್ಯಾಂಪಸ್‍ಗಳು ಮತ್ತು ವಿದ್ಯಾರ್ಥಿ-ಯುವ ಸಮುದಾಯವು ಸಮಾಜಕ್ಕೆ ಮಾರಕವಾಗುವ ಸ್ಥಿತಿಯನ್ನು ಎದುರಿಸಬೇಕಾದೀತು ಎಂದು ಎಸ್ ಐ ಓ ಮನವಿಯಲ್ಲಿ ಎಚ್ಚರಿಸಿದೆ. ಅಲ್ಲದೆ, ಪರಿಸ್ಥಿತಿಯ ಗಂಭೀರತೆಯನ್ನು ಪರಿಗಣಿಸಿ, ಎಸ್‍ಐಓವು 9 ಬೇಡಿಕೆಗಳನ್ನು ಮುಂದಿಡುತ್ತಿದ್ದು, ಈ ಬೇಡಿಕೆಗಳನ್ನು ಪೂರೈಸಬೇಕೆಂದು ಆಗ್ರಹಿಸಿದೆ.
1. ಮಾದಕ ಪದಾರ್ಥಗಳ ಮಾರಾಟ ಜಾಲದ ಮೂಲವನ್ನು ಪತ್ತೆ ಹಚ್ಚಿ, ಶೀಘ್ರವೇ ಅದರ ನಿರ್ಮೂಲನೆ ಮಾಡಬೇಕು.

2. ಮಂಗಳೂರು ನಗರದ ಹೊರವಲಯದಿಂದ ಕ್ಯಾಂಪಸ್‍ಗಳಿಗೆ ಮಾದಕ ಪದಾರ್ಥಗಳನ್ನು ತಲುಪಿಸುವ ಮಧ್ಯವರ್ತಿಗಳ ಜಾಲವನ್ನು ತಡೆಯಬೇಕು ಮತ್ತು ಅವರನ್ನು ಕಾನೂನು ರೀತಿಯಲ್ಲಿ ಶಿಕ್ಷಿಸಬೇಕು.

3. ಕ್ಯಾಂಪಸ್‍ಗಳಲ್ಲಿರುವ Anti Drug Cell ಅನ್ನು ಬಲಪಡಿಸಬೇಕು ಮತ್ತು ಅದರ ಕಾರ್ಯ ಚಟುವಟಿಕೆಯನ್ನು ಫಲಪ್ರದಗೊಳಿಸುವಂತೆ ನಿಗಾ ವಹಿಸಬೇಕು.

4. ಕೇರಳ ಮಾದರಿ Anti Drug ಪೊಲೀಸ್ ಕಾರ್ಯಾಚರಣೆಯನ್ನು(ವಿದ್ಯಾರ್ಥಿಗಳ ಹೆಸರು ಬಯಲು ಮಾಡದೆ ಕ್ಯಾಂಪಸ್ ಮುಖ್ಯಸ್ಥರು ಮತ್ತು ವಿದ್ಯಾರ್ಥಿಯ ಪೋಷಕರ ಮಧ್ಯಸ್ಥಿಕೆಯಲ್ಲಿ ಅದನ್ನು ಪರಿಹರಿಸಬೇಕು.) ನಡೆಸಬೇಕು.

5. ಮಾದಕ ವ್ಯಸನಿಗಳ ಪುನರ್ವಸತಿಯ ಕುರಿತು ಪೊಲೀಸ್ ಇಲಾಖೆಯು ಇತರ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಜಾಗೃತಿಗಾಗಿ ನಿರಂತರ ಶ್ರಮಿಸಬೇಕು.

6. ಜಿಲ್ಲೆಯಾದ್ಯಂತ ಮಾದಕ ದ್ರವ್ಯದ ದುಷ್ಪರಿಣಾಮ ಮತ್ತು ಈ ಅಪರಾಧದ ಬಗೆಗಿನ ಕಾನೂನು ಜಾಗೃತಿಯನ್ನು ಮೂಡಿಸಬೇಕು.

7. ನಗರದಲ್ಲಿ ಮತ್ತು ನಗರದ ಹೊರವಲಯದಲ್ಲಿ ಮಾದಕ ವ್ಯಸನದ ಪ್ರಭಾವ ಹೆಚ್ಚಾಗುತ್ತಿದೆಯೋ ಅಲ್ಲಿ ಸಾಮಾಜಿಕ, ಶೈಕ್ಷಣಿಕ, ರಾಜಕೀಯ, ಧಾರ್ಮಿಕ ಮತ್ತು ವಿದ್ಯಾರ್ಥಿ ನಾಯಕರ ಸಭೆಯನ್ನು ಆಯೋಜಿಸಿ ಪರಿಹಾರ ಕಾರ್ಯಗಳ ಕುರಿತು ಚರ್ಚಿಸಬೇಕು.

8. ಶಾಲಾ ಕಾಲೇಜಿನ 100 ಮೀಟರ್ ಅಂತರದಲ್ಲಿ ಬೀಡಿ, ಸಿಗರೇಟು, ಗುಟ್ಕಾ, ಮದ್ಯಪಾನ ಮುಂತಾದವುಗಳ ನಿಷೇಧ ಕಾನೂನು ಇದ್ದರೂ ಹಲವೆಡೆ ಅದರ ಮಾರಾಟ ನಡೆಯುತ್ತಿರುವುದು ಗಮನಿಸಬಹುದಾಗಿದೆ ಇದನ್ನು ಶೀಘ್ರವಾಗಿ ತಡೆಗಟ್ಟವಂತೆ ಮಾಡಬೇಕು.

9. ಜಿಲ್ಲೆಯಾದ್ಯಂತ ವ್ಯಾಪಕವಾಗುತ್ತಿರುವ ಮಾದಕ ವ್ಯಸನದ ಪ್ರಭಾವದ ಕುರಿತು ಕಾನೂನು ತಜ್ಞರು, ಸಮಾಜ ಸೇವಕರು, ಸಂಶೋಧನಾ ವಿದ್ಯಾಥಿಗಳು ಮತ್ತು ಬುದ್ಧಿ ಜೀವಿಗಳನ್ನೊಳಗೊಂಡ ಒಂದು ತಂಡದಿಂದ ಜಿಲ್ಲೆಯ ಅಧ್ಯಯನ, ಪರಿಸ್ಥಿಯ ಅವಲೋಕನ ಮತ್ತು ಪರಿಹಾರ ಕಾರ್ಯಗಳ ಕುರಿತು ತೀರ್ಮಾನಗಳನ್ನು ಕೈಗೊಳ್ಳಬೇಕು.

ಎಸ್ ಐ ಓ ದ.ಕ. ಜಿಲ್ಲಾ ಮಾಧ್ಯಮ ಕಾರ್ಯದರ್ಶಿ ಮುಹಮ್ಮದ್ ಇರ್ಷಾದ್ ವೇಣೂರ್, ಮಂಗಳೂರು ಶಾಖೆ ಅಧ್ಯಕ್ಷ ಮುಂಝಿರ್ ಕಂದಕ್, ಮಿಹಾಲ್ ಸಯೀದ್, ಅಫ್ನಾನ್ ಹಸನ್ ನಿಯೋಗದಲ್ಲಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News