ಭಟ್ಕಳ: ಡಿ.21 ರಂದು ತಂಝೀಮ್ ನಿಂದ ಬೃಹತ್ ಶರಿಯತ್ ಸಂರಕ್ಷಣಾ ಸಮಾವೇಶ
ಭಟ್ಕಳ, ಡಿ.17 : ಕೇಂದ್ರ ಸರಕಾರ ಹಾಗೂ ನ್ಯಾಯಾಲಯಗಳಿಂದ ಮುಸ್ಲಿಮ್ ಪರ್ಸನಲ್ ಲಾ ಹಾಗೂ ಶರಿಯತ್ ಕಾನೂನಿನಲ್ಲಿ ಹಸ್ತಕ್ಷೇಪವನ್ನು ಖಂಡಿಸಿ ಡಿ.21 ರಂದು ರಾತ್ರಿ 8.30ಕ್ಕೆ ಜಾಮಿಯಾ ಇಸ್ಲಾಮಿಯಾ ಶಿಕ್ಷಣಸಂಸ್ಥೆಯ ಆವರಣದಲ್ಲಿ ಬೃಹತ್ ಶರಿಯತ್ ಸಂರಕ್ಷಣಾ ಸಮಾವೇಶ ನಡೆಸಲಾಗುವುದು ಎಂದು ಶರಿಯತ್ ಸಂರಕ್ಷಣಾ ಸಮಾವೇಶ ಮಾಧ್ಯಮ ಸಂಚಾಲಕ ಮೌಲಾನ ಅಬ್ದುಲ್ ಅಲೀಮ್ ಖಾಸ್ಮಿ ಹೇಳೀದರು.
ಅವರು ಶನಿವಾರ ಸಂಜೆ ತಂಝೀಮ್ ಕಾರ್ಯಾಲಯದಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮತನಾಡುತ್ತಿದ್ದರು.
ನಮ್ಮ ದೇಶದ ಸಂವಿಧಾನ ಪ್ರತಿಯೊಬ್ಬರಿಗೂ ತಮ್ಮ ತಮ್ಮ ಧರ್ಮದಂತೆ ಜೀವಿಸುವ ಸ್ವಾತಂತ್ರ್ಯ ನೀಡಿದೆ. ಅದೇ ರೀತಿ ಪ್ರತಿ ಸಮುದಾಯಕ್ಕೆ ತನ್ನದೆ ಆದ ವೈಯಕ್ತಿಕ ಹಾಗೂ ವಿಭಿನ್ನ ರೀತಿಯ ಕಾನೂನುಗಳಿದ್ದು , ಅದಕ್ಕೆ ಕಾನೂನಿನ ಮಾನ್ಯತೆಯಿದೆ. ಇವುಗಳಲ್ಲಿ ಕುರ್‌ಆನ್ ಮತ್ತು ಸುನ್ನತ್ ಆಧಾರದಲ್ಲಿ ರಚಿತಗೊಂಡಿರುವ ಮುಸ್ಲಿಮ್ ಪರ್ಸನಲ್ ಲಾ ಕೂಡ ಒಂದಾಗಿದೆ. ಓರ್ವ ಮುಸ್ಲಿಮನ ಬದುಕಿನ ತಳಹದಿ, ತನ್ನ ಜೀವನ ಮತ್ತು ಮರಣ ಕೇವಲ ಅಲ್ಲಾಹನಿಗಾಗಿದೆ ಎಂಬ ವಿಶ್ವಾಸದ ಆಧಾರದಲ್ಲಿ ಸ್ಥಾಪಿತವಾಗಿದೆ. ಅವನ ಪ್ರತಿಯೊಂದು ಕರ್ಮವು ಅಲ್ಲಾಹನ ಆಜ್ಞೆಗೆ ಅಧೀನವಾಗಿದೆ. ಆದ್ದರಿಂದ ಮುಸ್ಲಿಮರು ತಮ್ಮ ವೈಯಕ್ತಿಕ ಜೀವನದ ಎಲ್ಲ ಸಮಸ್ಯೆಗಳ ಪರಿಹಾರಕ್ಕೆ ಶರಿಯತ್ ಕಾನೂನನ್ನೇ ಅವಲಂಬಿಸಿದ್ದು ಇದಕ್ಕೆ ಬೇರೊಂದು ಮಾರ್ಗವೆ ಇರದು ಎಂದರು.
ನಮ್ಮ ದೇಶದಲ್ಲಿ ಸಮಾನ ಸಿವಿಲ್ ಕೋಡ್ ಅಥವಾ ಮುಸ್ಲಿಮ್ ಮಹಿಳೆಯರ ಮೇಲಿನ ಅತಿರೇಕದ ಹೆಸರಿನಲ್ಲಿ ಸರ್ಕಾರ ಮತ್ತು ನ್ಯಾಯಾಲಯಗಳ ಮೂಲಕ ಮುಸ್ಲಿಮರ ವೈಯಕ್ತಿಕ ಕಾನೂನಿನಲ್ಲಿ ಮೂಗು ತೂರಿಸುವ ಹುನ್ನಾರ ನಡೆಯುತ್ತಿದ್ದು ಇದನ್ನು ಯಾವುದೇ ಕಾರಣಕ್ಕೂ ಮುಸ್ಲಿಮ ಸಮುದಾಯ ಸಹಿಸದು ಎಂದಿದ್ದಾರೆ.
ತಂಝೀಮ್ ಮೀಡಿಯಾ ವಾಚ್ ಕಮಿಟಿ ಸಂಚಾಲಕ ಡಾ.ಮುಹಮ್ಮದ್ ಹನೀಫ್ ಶಬಾಬ್ ಮಾತನಾಡಿ, ಮುಸ್ಲಿಮ್ ಸಮುದಾಯ ಶರಿಯತ್ ಕಾನೂನಿನಲ್ಲಿ ಸರಕಾರ ಹಾಗೂ ನ್ಯಾಯಾಲಯಗಳ ಮಾಡುತ್ತಿರುವ ಹಸ್ತಕ್ಷೇಪವನ್ನು ಎಂದಿಗೂ ಸಹಿಸದು. ತಲಾಖ್ ಮತ್ತು ಮುಸ್ಲಿಮ್ ಮಹಿಳೆಯರ ಮೇಲೆ ಅತಿರೇಕ ನಡೆಯುತ್ತಿದೆ ಎಂಬ ಕಾರಣಕ್ಕಾಗಿ ಪ್ರಕರಣ ಈಗ ಮತ್ತೊಮ್ಮೆ ಸುಪ್ರೀಮ್ ಕೋರ್ಟ ಮೆಟ್ಟಲೇರಿದೆ. ಮೊತ್ತೊಂದಡೆ ಸ್ವತಃ ಸರ್ಕಾರವೇ ಮುಸ್ಲಿಮ್ ಪರ್ಸನಲ್ ಲಾ ಅನ್ನು ಗುರಿಯಾಗಿಸಿಕೊಂಡು ಲಾ ಕಮಿಷನ್ ಮೂಲಕ ಸಮಾನ ನಾಗರಿಕ ಸಂಹಿತೆ ಜಾರಿಗೊಳಿಸುವ ಪ್ರಯತ್ನಕ್ಕೆ ಕೈಹಾಕಿದೆ. ಆದರೆ ಸರ್ಕಾರದ ಸಮಾನ ನಾಗರಿಕ ಸಂಹಿತೆ ಕುರಿತ ಸ್ಪಷ್ಟ ಚಿತ್ರಣ ಇದುವರೆಗೂ ಸಾರ್ವಜನಿಕರ ಎದುರು ಇಟ್ಟಿರುವುದಿಲ್ಲ. ಆದ್ದರಿಂದ ಅದನ್ನು ರದ್ದು ಮಾಡುವ ಅಥವಾ ಮಾನ್ಯ ಮಾಡುವ ಪ್ರಶ್ನೆಯೇ ಉದ್ಭವಿಸದು. ಒಂದು ವೇಳೆ ಸಮಾನ ನಾಗರಿಕ ಸಂಹಿತೆ ಜಾರಿಗೊಂಡರೂ ಇದು ಕೇವಲ ಮುಸ್ಲಿಮರ ಸಮಸ್ಯೆಯಲ್ಲ. ಬದಲಾಗಿ, ಯಾವೆಲ್ಲ ಸಮುದಾಯಗಳಲ್ಲಿ ತಮ್ಮದೇ ಆದ ವೈಯ್ಯಕ್ತಿಕ ಕಾನೂನು ಇದೆಯೇ ಆ ಎಲ್ಲ ಸಮುದಾಯ, ವರ್ಗ, ಸಮಾಜದ ಸಮಸ್ಯೆಯೂ ಆಗುವುದರಲ್ಲಿ ಎರಡು ಮಾತಿಲ್ಲ.
ಆದರೆ ಮುಸ್ಲಿಮ್ ವೈಯ್ಯಕ್ತಿಕ ಕಾನೂನಿನ ಹರಣ ಮಾಡುವ ಯೋಜನೆ ಮಾತ್ರ ಇಲ್ಲಿ ಸ್ಪಷ್ಟವಾಗಿ ಕಾಣಿಸುತ್ತಿದೆ. ಮುಸ್ಲಿಮ್ ಪರ್ಸನಲ್ ಲಾಷರಿಯತ್ ಆಧಾರದ ಮೇಲೆ ನಿಂತಿರುವ ಕಾರಣಕ್ಕಾಗಿ ಮುಸ್ಲಿಮರು ಯಾವುದೇ ಕಾರಣಕ್ಕೂ ಹಿಂದಕ್ಕೆ ಸರಿಯರು. ನಮ್ಮ ಮದುವೆ, ತಲಾಖ್, ವಾರಿಸು ಹಕ್ಕು ಇತ್ಯಾದಿ ಇದು ನಮ್ಮ ಸಮುದಾಯಕ್ಕಾಗಿ ಮಾತ್ರವಾಗಿದೆ. ಮತ್ತು ಇದರಲ್ಲಿ ಹಸ್ತಕ್ಷೇಪ ಮಾಡುವುದು, ಅಥವಾ ಮತ್ತಾವುದೂ ಕಾರಣಕ್ಕೆ ಇದರಲ್ಲಿ ಬದಲಾವಣೆ ಅಸಾಧ್ಯವಾಗಿದೆ.
ಈಗ ಪ್ರಕರಣ ವಿವಿಧ ಹಂತಗಳನ್ನು ದಾಟಿ ಸುಪ್ರಿಮ್ ಕೋರ್ಟ್ ತಲುಪಿದೆ. ಈ ನಿಟ್ಟಿನಲ್ಲಿ ಕಾನೂನು ಹೋರಾಟಕ್ಕಳಿದ ಮುಸ್ಲಿಮ ಪರ್ಸನಲ್ ಲಾ ಬೋರ್ಡ ಬ್ಯಾನರ್ ನಡಿ ಮುಸ್ಲಿಮ್ ಸಮುದಾಯ ಒಂದುಗೂಡಿದೆ. ನಮ್ಮ ಉದ್ದೇಶ ಕೇವಲ ಧರ್ಮದ ಆಧಾರದಂತೆ ಜೀವಿಸುವ ಸ್ವಾತಂತ್ರ್ಯ ನಮಗೆ ನಮ್ಮ ಸಂವಿಧಾನ ನೀಡಿದ್ದು ಅದನ್ನು ಮೊಟಕುಗೊಳಿಸುವ ಪ್ರಯತ್ನವನ್ನು ತಡೆಯುವುದಾಗಿದೆ. ಇಡಿ ದೇಶದಾದ್ಯಂತ ಮುಸ್ಲಿಮರು, ಶರಿಯತ್ ಸಂರಕ್ಷಣೆಗಾಗಿ ಮತ್ತು ಮುಸ್ಲಿಮ್ ಪರ್ಸನಲ್ ಲಾ ಬೋರ್ಡ್‌ನ ಪರವಹಿಸಿ ಕಟಿಬದ್ದರಾಗಿ ನಿಂತುಕೊಂಡಿದ್ದು ತಮ್ಮ ಧ್ವನಿಯನ್ನು ಸರ್ಕಾರಕ್ಕೆ ಹಾಗೂ ನ್ಯಾಯಾಲಯಕ್ಕೆ ತಲುಪಿಸಲು ಒಗ್ಗಟ್ಟಾಗಿ ಎದ್ದು ನಿಂತಿದ್ದಾರೆ ಎಂದರು.
ಆಲ್ ಇಂಡಿಯಾ ಮುಸ್ಲಿಮ್ ಪರ್ಸನಲ್ ಲಾ ಬೋರ್ಡ್ ಅಧ್ಯಕ್ಷ ಹಝ್ರತ್ ಮೌಲಾನಾ ಸೈಯ್ಯದ್ ಮುಹಮ್ಮದ್ ರಾಬೇ ಹಸನಿ ನದ್ವಿ , ಪ್ರಧಾನ ಕಾರ್ಯದರ್ಶಿ ಹಝರತ್ ಮೌಲಾನ ವಲೀ ರಹ್ಮಾನಿ ಸಾಹೇಬ್ , ದಾರುಲ್ ಉಲೂಮ್ ನದ್ವತುಲ್ ಉಲಮಾ ಲಖ್ನೋ ಇದರ ಆಡಳಿತಾಧಿಕಾರಿ ಹಝ್ರತ್ ಮೌಲಾನಾ ಸಯ್ಯದ್ ಮುಹಮ್ಮದ್ ವಾಝೆಹ್ ರಷೀದ್ ಸಾಹೇಬ್ ನದ್ವಿ, ದಾರುಲ್ ಉಲೂಮ್ ನದ್ವತುಲ್ ಉಲಮಾ ಲಖ್ನೋ ದ ಪ್ರಾಂಶುಪಾಲ ಹಝ್ರತ್ ಮೌಲಾನಾ ಡಾ. ಸಯೀದುರ್ರಹ್ಮಾನ್ ಸಾಹೇಬ್ ಆಝ್ಮಿ, ಮೌಲಾನ ತೌಖೀರ್ ರಝಾ, ಜಮಾಅತೆ ಇಸ್ಲಾಮಿ ಹಿಂದ್ ರಾಷ್ಟ್ರೀಯ ಉಪಾಧ್ಯಕ್ಷ ಸೈಯ್ಯದ್ ಸಾದತುಲ್ಲಾ ಹುಸೇನಿ, ಅಂತರಾಷ್ಟ್ರೀಯ ಮುಸ್ಲಿಮ ವಿದ್ವಾಂಸ್ ಹಝ್ರತ್ ಮೌಲಾನಾ ಸಯ್ಯದ್ ಸಲ್ಮಾನ್ ಸಾಹೇಬ್ ಹುಸೈನಿ ನದ್ವಿ ಮುಂತಾದ ಗಣ್ಯರು ಮುಖಂಡರು, ಉಲೇಮಾಗಳು ಪಂಡಿತು ಸಮಾವೇಶವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.
ಇದರಲ್ಲಿ ಗೋವಾ ದಿಂದ ಮಂಗಳೂರು ವರೆಗಿನ ವಿವಿಧ ಜಮಾಅತ್ ಸದಸ್ಯರು, ಸಾರ್ವಜನಿಕರು ಸಾವಿರಾರು ಸಂಖ್ಯೆಯಲ್ಲಿ ಭಾಗವಹಿಸುತ್ತಿದ್ದಾರೆ ಎಂದರು.
ತಂಝೀಮ್ ಪ್ರಧಾನ ಕಾರ್ಯದರ್ಶಿ ಮುಹಿದ್ದಿನ್ ಅಲ್ತಾಫ್ ಖರೂರಿ, ತಂಝೀಮ್ ಉಪಾಧ್ಯಕ್ಷ ಜಾಫರ್ ಮೊಹತೆಶಮ್, ಅಬ್ದುಲ್ ರಕೀಬ್ ಎಂ.ಜೆ, ಸಿದ್ದಿಖ್ ಡಿ.ಎಫ್, ಮತ್ತಿತರರು ಉಪಸ್ಥಿತರಿದ್ದರು.