×
Ad

ಬಂಟ್ವಾಳ : ತುಂಬೆ ಉತ್ಸವ ಕಾರ್ಯಕ್ರಮ

Update: 2016-12-17 19:05 IST

ಬಂಟ್ವಾಳ, ಡಿ. 17: ಒಗ್ಗಟ್ಟು, ಪ್ರೀತಿ ವಿಶ್ವಾಸದಿಂದ ಸುಂದರ ಗ್ರಾಮ ನಿರ್ಮಾಣ ಸಾಧ್ಯವಾಗಲಿದೆ. ಪ್ರೀತಿ ವಿಶ್ವಾಸದ ಕೊರತೆಯಿದ್ದರೆ ಯಾವುದೇ ಸಾಧನೆ ಮಾಡಲು ಸಾಧ್ಯವಿಲ್ಲ. ಈ ನಿಟ್ಟಿನಲ್ಲಿ ತುಂಬೆ ಅಭಿಮಾನಿ ಬಳಗ ಊರಿನ ಅಭಿವೃದ್ಧಿಯಲ್ಲಿ ತೊಡಗಿಸಿಕೊಂಡು ಮಾದರಿಯಾಗಿದೆ ಎಂದು ಜಿ.ಪಂ.ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ ಹೇಳಿದರು. 

ತುಂಬೆ ಅಭಿಮಾನಿ ಬಳಗದ ವತಿಯಿಂದ ತುಂಬೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ರಾಣಿ ಅಬ್ಬಕ್ಕ ವೇದಿಕೆಯಲ್ಲಿ ನಡೆದ ತುಂಬೆ ಉತ್ಸವ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಶೋಷಣೆ ಮುಕ್ತ, ಸ್ವಾವಲಂಬಿ ಬದುಕಿಗೆ ಶಿಕ್ಷಣ ಅತ್ಯಗತ್ಯ. ಸರ್ಕಾರವು ಶಿಕ್ಷಣಕ್ಕೆ ಹೆಚ್ಚಿನ ಪ್ರೋತ್ಸಾಹ ನೀಡುತ್ತಿದೆ. ಶಿಕ್ಷಿತ ಸಮುದಾಯದಿಂದ ಊರಿನ ಅಭಿವೃದ್ದಿಯೂ ಸಾಧ್ಯವಾಗಲಿದೆ ಎಂದರು. ಅನಿವಾಸಿ ಭಾರತೀಯ ಸಮಿತಿ ಉಪಾಧ್ಯಕ್ಷೆ ಡಾ. ಆರತಿ ಕೃಷ್ಣ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಬಳಿಕ ಮಾತನಾಡಿ,  ಅನಿವಾಸಿ ಭಾರತೀಯರು ಎದುರಿಸುತ್ತಿರುವ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಹೊಸ ನೀತಿಯೊಂದನ್ನು ರೂಪಿಸಲಾಗಿದ್ದು ಮುಂದಿನವಾರ ಜಾರಿಯಾಗಲಿದೆ ಎಂದರು.

ಗಲ್ಪ್ ಕನ್ನಡಿಗರು ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ತಾನು ಈ ಹಿಂದೆ ಅಮೇರಿಕಾ ಮತ್ತು ಭಾರತೀಯ ರಾಯಭಾರಿ ಕಚೇರಿಗಳ ಮಧ್ಯೆ ಸಂಪರ್ಕ ಕೊಂಡಿಯಾಗಿ ಅನಿವಾಸಿ ಭಾರತೀಯರಿಗಾಗುತ್ತಿದ್ದ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಶ್ರಮವಹಿಸಿದ್ದೇನೆ. ಇದೀಗ ಸರಕಾರ ಜಾರಿಗೆ ತರುವ ಈ ನೀೀತಿಯಿಂದ ಅನಿವಾಸಿ ಭಾರತೀಯರಿಗೆ ಪ್ರಯೋಜನವಾಗಲಿದೆ ಎಂದರು.

ಕಾರ್ಯಕ್ರಮದಲ್ಲಿ ತುಂಬೆ ಬಿ.ಎ. ಸಮೂಹ ಸಂಸ್ಥೆಗಳ ಸ್ಥಾಪಕ ಡಾ. ಬಿ.ಅಹ್ಮದ್ ಹಾಜಿ ಮುಹಿಯುದ್ದೀನ್ ಅವರನ್ನು ಸನ್ಮಾನಿಸಲಾಯಿತು.

ಅನಿವಾಸಿ ಭಾರತೀಯ ಸಮಿತಿ ಉಪಾಧ್ಯಕ್ಷೆ ಡಾ. ಆರತಿ ಕೃಷ್ಣ ಹಾಗೂ ಗೇರು ಅಭಿವೃದ್ದಿ ನಿಗಮದ ಅಧ್ಯಕ್ಷ ಬಿ.ಎಚ್.ಖಾದರ್ ಅವರನ್ನು ಗೌರವಿಸಲಾಯಿತು.

ಮುಖ್ಯ ಅತಿಥಿಗಳಾಗಿ ಜಿ.ಪಂ.ಸದಸ್ಯ ರವೀಂದ್ರ ಕಂಬಳಿ, ತಾ.ಪಂ.ಸದಸ್ಯ ಗಣೇಶ್ ಸುವರ್ಣ, ತುಂಬೆ ಗ್ರಾ.ಪಂ.ಅಧ್ಯಕ್ಷೆ ಹೇಮಲತಾ ಜಿ. ಪೂಜಾರಿ, ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಸಿ., ಕ್ಷೇತ್ರ ಸಂಪನ್ಮೂಲ ಕೇಂದ್ರದ ಸಮನ್ವಾಯಾಧಿಕಾರಿ ರಾಜೇಶ್, ತುಂಬೆ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಕೆ.ಎನ್.ಗಂಗಾಧರ ಆಳ್ವ, ತುಂಬೆ ಸ.ಹಿ.ಪ್ರಾ ಶಾಲೆಯ ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷ ಅಶೋಕ್, ಮುಖ್ಯೋಪಾಧ್ಯಾಯಿನಿ ಯಮುನ ಭಾಗವಹಿಸಿದ್ದರು.

ತುಂಬೆ ಅಭಿಮಾನಿ ಬಳಗದ ಗೌರವಾದ್ಯಕ್ಷ ಗೋಪಾಲಕೃಷ್ಣ ತುಂಬೆ ಕಾರ್ಯಧ್ಯಕ್ಷ ಡಾ. ಅಮೀರ್ ಅಹಮದ್ ತುಂಬೆ, ಅಧ್ಯಕ್ಷ ದೇವದಾಸ ತುಂಬೆ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News