ಅಲೆಪ್ಪೊ ನರಕದ ಇನ್ನೊಂದು ರೂಪ: ಬಾನ್ ಕಿ ಮೂನ್
ವಿಶ್ವಸಂಸ್ಥೆ, ಡಿ. 17: ಸಿರಿಯದ ಯುದ್ಧಪೀಡಿತ ಪಟ್ಟಣ ಅಲೆಪ್ಪೊ ‘ನರಕದ ಇನ್ನೊಂದು ರೂಪ’ ಎಂಬುದಾಗಿ ವಿಶ್ವಸಂಸ್ಥೆಯ ಮಹಾಕಾರ್ಯದರ್ಶಿ ಬಾನ್ ಕಿ ಮೂನ್ ಹೇಳಿದ್ದಾರೆ. ಅಂತಾರಾಷ್ಟ್ರೀಯ ಸಮುದಾಯ ಸಿರಿಯದ ಜನರನ್ನು ಕೈಬಿಟ್ಟಿದೆ ಹಾಗೂ ಅಲ್ಲಿ ನಡೆಯುತ್ತಿರುವ ನರಮೇಧ ಜಾಗತಿಕ ಆತ್ಮಸಾಕ್ಷಿಯನ್ನು ಚುಚ್ಚುತ್ತಿದೆ ಎಂದು ಅವರು ಹೇಳಿದ್ದಾರೆ.
ವಿಶ್ವಸಂಸ್ಥೆಯ ಮಹಾಕಾರ್ಯದರ್ಶಿಯಾಗಿ ಶುಕ್ರವಾರ ತನ್ನ ಕೊನೆಯ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮೂನ್, ಅಂತಾರಾಷ್ಟ್ರೀಯ ಕಳವಳಕ್ಕೆ ಕಾರಣವಾಗಿರುವ ವಿಷಯಗಳಾದ ಸಿರಿಯ ಮತ್ತು ದಕ್ಷಿಣ ಸುಡಾನ್‌ಗಳ ಬಗ್ಗೆ ಎಚ್ಚರಿಕೆ ನೀಡಿದರು.
‘‘ಸಿರಿಯದಲ್ಲಿ ನಡೆಯುತ್ತಿರುವ ನರಮೇಧ ಜಾಗತಿಕ ಆತ್ಮಸಾಕ್ಷಿಯ ವೈಫಲ್ಯವಾಗಿದೆ ಹಾಗೂ ದಕ್ಷಿಣ ಸುಡಾನ್ ಜನಾಂಗೀಯ ಹತ್ಯೆಯ ಭೀತಿಯನ್ನು ಎದುರಿಸುತ್ತಿದೆ’’ ಎಂದರು.
‘‘ಅಲೆಪ್ಪೊ ಈಗ ನರಕಕ್ಕೆ ಪರ್ಯಾಯವಾಗಿದೆ’’ ಎಂದು ಅವರು ಅಭಿಪ್ರಾಯಪಟ್ಟರು.
‘‘ನಾವು ಸಾಮೂಹಿಕವಾಗಿ ಸಿರಿಯದ ಜನರನ್ನು ನಿರಾಶೆಗೊಳಿಸಿದ್ದೇವೆ. ನಾವು ಈಗ ನೋಡುತ್ತಿರುವ ಭೀಕರ ಅಪರಾಧಗಳಿಗೆ ಹೊಣೆ ಹೊರಿಸಿದಾಗ, ನ್ಯಾಯವನ್ನು ಖಾತರಿಪಡಿಸಿದಾಗ ಹಾಗು ಅನುಕಂಪ ಇದ್ದರೆ ಮಾತ್ರ ಶಾಂತಿ ನೆಲೆಸಬಲ್ಲುದು’’ ಎಂದು ಮೂನ್ ನುಡಿದರು.