ರೈಲ್ವೆ ಪೊಲೀಸ್ ಪ್ರಶಿಕ್ಷಣಾರ್ಥಿಗಳ ನಿರ್ಗಮನ ಪಥ ಸಂಚಲನ

Update: 2016-12-17 14:12 GMT

ಉಡುಪಿ, ಡಿ.17: ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಂವಿಧಾನ ಉಳಿಸುವಲ್ಲಿ ಪೊಲೀಸ್ ಇಲಾಖೆಯ ಕೊಡುಗೆ ಬಹಳಷ್ಟು ಮಹತ್ವದ್ದಾಗಿದೆ. ಹೀಗಾಗಿ ಸಂವಿಧಾನದ ಕರ್ತವ್ಯವನ್ನು ಬದ್ಧತೆಯಿಂದ ಪಾಲಿಸಿಕೊಂಡು ಕಾರ್ಯ ನಿರ್ವಹಿಸಬೇಕಾಗಿದೆ. ಸೇವೆಯಲ್ಲಿ ಪರಂಪರೆ, ಪ್ರಾಮಾಣಿಕತೆ, ವೌಲ್ಯಗಳನ್ನು ಉಳಿಸಿಕೊಳ್ಳಬೇಕು ಎಂದು ಬೆಂಗಳೂರು ರೈಲ್ವೇಸ್‌ನ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಅಮರ್‌ಕುಮಾರ್ ಪಾಂಡೆ ಹೇಳಿದ್ದಾರೆ.

ಉಡುಪಿ ಚಂದು ಮೈದಾನದಲ್ಲಿ ಶನಿವಾರ ನಡೆದ ಪೊಲೀಸ್ ತರಬೇತಿ ಶಾಲೆಯ 10ನೆ ತಂಡದ ರೈಲ್ವೆ ಪೊಲೀಸ್ ಪ್ರಶಿಕ್ಷಣಾರ್ಥಿಗಳ ನಿರ್ಗಮನ ಪಥ ಸಂಚಲನದಲ್ಲಿ ಪರೇಡ್ ಪರಿವೀಕ್ಷಣೆ ಮಾಡಿ ಗೌರವ ರಕ್ಷೆ ಸ್ವೀಕರಿಸಿ ಅವರು ಮಾತನಾಡುತಿದ್ದರು.

ಭಾರತದಲ್ಲಿ 1861ರಲ್ಲಿ ಪೊಲೀಸ್ ವ್ಯವಸ್ಥೆ ಹಾಗೂ 20 ವರ್ಷಗಳ ಬಳಿಕ 1881ರಲ್ಲಿ ರೈಲ್ವೆ ಪೊಲೀಸ್ ವ್ಯವಸ್ಥೆ ಅಸ್ತಿತ್ವಕ್ಕೆ ಬಂತು. ರೈಲ್ವೆ ಪೊಲೀಸ್ ದೇಶದ ಅತ್ಯಂತ ಹಳೆಯ ಪಡೆಯಾಗಿದ್ದು, ಈಗಲೂ ಇದಕ್ಕೆ ವಿಶೇಷ ಸ್ಥಾನಮಾನ ಇದೆ. 100ವರ್ಷ ಇತಿಹಾಸ ಇರುವ ರೈಲ್ವೆ ಪೊಲೀಸ್‌ಗೆ ಅದರದ್ದೆ ಆದ ಪರಂಪರೆ ಹಾಗೂ ವೈಶಿಷ್ಟತೆಗಳಿವೆ ಎಂದರು.

ರಾಜ್ಯದಲ್ಲಿ ರೈಲು ಪ್ರಯಾಣಿಕರು ಹಾಗೂ ರೈಲ್ವೆ ಸೊತ್ತುಗಳ ಸುರಕ್ಷತೆ ಕಾಪಾಡುವುದು ರೈಲ್ವೆ ಪೊಲೀಸರ ಕರ್ತವ್ಯವಾಗಿದೆ. ಇದಕ್ಕಾಗಿ ಸಾಕಷ್ಟು ಪೊಲೀಸರು ತ್ಯಾಗ ಬಲಿದಾನ ಮಾಡಿದ್ದಾರೆ. ರೈಲ್ವೆ ಪೊಲೀಸ್ ಪರಂಪರೆ ಯೊಂದಿಗೆ ಬಲಿಷ್ಠವಾಗಿ ಬೆಳೆಯಲು ಹಿಂದಿನ ಪೊಲೀಸ್ ಅಧಿಕಾರಿಗಳ ಹಾಗೂ ಸಿಬ್ಬಂದಿಗಳ ತ್ಯಾಗ ಬಲಿದಾನವೇ ಕಾರಣ. ಈ ಪರಂಪರೆಯನ್ನು ಮುಂದುವರಿಸಿಕೊಂಡು ಹೋಗುವುದು ನಮ್ಮ ಕರ್ತವ್ಯವಾಗಿದೆ ಎಂದು ಅವರು ಹೇಳಿದರು.

ಮಂಗಳೂರು ಪಶ್ಚಿಮ ವಲಯ ಪೊಲೀಸ್ ಮಹಾನಿರೀಕ್ಷಕ ಜೆ.ಅರುಣ್ ಚಕ್ರವರ್ತಿ, ಬೆಂಗಳೂರು ರೈಲ್ವೆ ಪೊಲೀಸ್ ಅಧೀಕ್ಷಕ ಡಾ.ಡಿ.ಸಿ.ರಾಜಪ್ಪ ಉಪಸ್ಥಿತರಿದ್ದರು. ಹೆಚ್ಚುವರಿ ಪೊಲೀಸ್ ಅಧೀಕ್ಷಕ ಎನ್.ವಿಷ್ಣುವರ್ಧನ್ ಪ್ರತಿಜ್ಞಾ ವಿಧಿ ಬೋಧಿಸಿ ವರದಿ ವಾಚಿಸಿದರು.

ಈ ಸಂದರ್ಭದಲ್ಲಿ ಆಲ್‌ರೌಂಡರ್ ಹಾಗೂ ಒಳಾಂಗಣ ಸ್ಪರ್ಧೆಯಲ್ಲಿ ಪ್ರಥಮ ನಾಗೇಂದ್ರ ಶೆಟ್ಟಿ, ಹೊರಾಂಗಣ ಸ್ಪರ್ಧೆಯಲ್ಲಿ ಪ್ರಥಮ ರವಿ ಕುಮಾರ್ ವೈ.ಟಿ., ಫೈಯರಿಂಗ್‌ನಲ್ಲಿ ಪ್ರಥಮ ಬಹುಮಾನ ಗಳಿಸಿದ ರುದ್ರಪ್ಪ ಅವರಿಗೆ ಬಹುಮಾನ ವಿತರಿಸಲಾಯಿತು.

ಜಿಲ್ಲಾ ಪೊಲೀಸ್ ಅಧೀಕ್ಷಕ ಕೆ.ಟಿ.ಬಾಲಕೃಷ್ಣ ಸ್ವಾಗತಿಸಿದರು. ಉಡುಪಿ ಡಿವೈಎಸ್ಪಿ ಎಸ್.ಜೆ.ಕುಮಾರಸ್ವಾಮಿ ವಂದಿಸಿದರು. ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಪೊಲೀಸ್ ನಿರೀಕ್ಷಕ ರಾಘವೇಂದ್ರ ಆರ್. ಪರೇಡ್ ಕಮಾಂಡರ್ ಆಗಿ ಕಾರ್ಯನಿರ್ವಹಿಸಿದರು. ಜಿಲ್ಲಾ ಪೊಲೀಸ್ ಕಂಟ್ರೋಲ್ ರೂಮ್‌ನ ಪ್ರಭಾರ ಪಿಎಸ್ಸೈ ಬಿ.ಮನಮೋಹನ ರಾವ್ ಕಾರ್ಯಕ್ರಮ ನಿರೂಪಿಸಿದರು.

10ನೆ ತಂಡದ 96 ಪ್ರಶಿಕ್ಷಣಾರ್ಥಿಗಳು
ಉಡುಪಿ ಪೊಲೀಸ್ ತರಬೇತಿ ಶಾಲೆಯ 10ನೆ ತಂಡದಲ್ಲಿ ಒಟ್ಟು 96 ರೈಲ್ವೆ ಪೊಲೀಸ್ ಪ್ರಶಿಕ್ಷಣಾರ್ಥಿಗಳು 2016ರ ಮಾ.27ರಿಂದ ತರಬೇತಿ ಪಡೆದು ನಿರ್ಗಮಿಸಿದ್ದಾರೆ.

35 ಪಿಯುಸಿ, 10 ಪದವಿ, 4 ಸ್ನಾತಕೋತ್ತರ ಪದವಿ, 18 ಡಿಎಡ್, 8 ಬಿಎಡ್, ಒಬ್ಬರು ಬಿಪಿಎಡ್ ಶಿಕ್ಷಣ ಅರ್ಹತೆ ಹೊಂದಿದ್ದು, ಇವರಲ್ಲಿ ಐವರು ಮಾಜಿ ಸೈನಿಕರು ಇದ್ದಾರೆ. ಮಂಗಳೂರು ಯುನಿಟ್‌ನಿಂದ 2, ಆರಸೀಕೆರೆ 2, ಶಿವಮೊಗ್ಗ 10, ಮೈಸೂರು 11, ಬೆಂಗಳೂರು ಬಿಎನ್‌ಸಿ 3, ಕೋಲಾರ ಬಂಗಾರಪೇಟೆ 5, ಬೆಳಗಾವಿ 3, ಗದಗ 8, ಹುಬ್ಬಳ್ಳಿ 10, ವಿಜಯಪುರ 6, ಬೆಂಗಳೂರು ನಗರ 13, ಬೆಂಗಳೂರು ಬೈಯಪ್ಪನಹಳ್ಳಿ 6, ಬೆಂಗಳೂರು ಗ್ರಾಮಾಂತರ 12, ದಾವಣಗೆರೆ ಯುನಿಟ್‌ನಿಂದ 5 ಮಂದಿ ಪ್ರಶಿಕ್ಷಣಾರ್ಥಿ ಗಳಿದ್ದಾರೆ.

 1999ರಲ್ಲಿ ಸ್ಥಾಪನೆಗೊಂಡ ಉಡುಪಿ ಪೊಲೀಸ್ ತರಬೇತಿ ಶಾಲೆಯಿಂದ ನಾಲ್ಕು ಸಶಸ್ತ್ರ ಮೀಸಲು ಪಡೆ, ಐದು ನಾಗರಿಕ ಸೇವಾ ಪೊಲೀಸ್ ಹಾಗೂ ಒಂದು ರೈಲ್ವೆ ಪೊಲೀಸ್ ತಂಡದಲ್ಲಿ ಪ್ರಸ್ತುತ 96 ಮಂದಿ ಸೇರಿದಂತೆ ಒಟ್ಟು 928 ಮಂದಿ ತರಬೇತಿ ಪಡೆದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News