ಫೆಲೆಸ್ತೀನ್ ನೆಲವನ್ನು ಆಕ್ರಮಿಸಲು ಇಸ್ರೇಲ್ ಮುಂದಾದರೆ ಅಂತಾರಾಷ್ಟ್ರೀಯ ನ್ಯಾಯಾಲಯಕ್ಕೆ
ಜಿದ್ದಾ, ಡಿ. 17: ಪಶ್ಚಿಮ ದಂಡೆಯಲ್ಲಿರುವ ಇಸ್ರೇಲ್‌ನ ಹೊರಠಾಣೆಗಳನ್ನು ಸಕ್ರಮಗೊಳಿಸುವ ಇಸ್ರೇಲ್‌ನ ಮಸೂದೆಯು, ‘ಎರಡು-ದೇಶ’ ಪರಿಹಾರದ ಯಾವುದೇ ಸಾಧ್ಯತೆಯನ್ನು ಚಿವುಟಿಹಾಕುವ ಉದ್ದೇಶವನ್ನು ಹೊಂದಿದೆ ಎಂದು ‘ಫತಾಹ್ ಇಂಟರ್‌ನ್ಯಾಶನಲ್ ಮೀಡಿಯ’ದ ವಕ್ತಾರ ಝಿಯಾದ್ ಖಲೀಲ್ ಅಬು ಝಾಯೇದ್ ಶುಕ್ರವಾರ ‘ಅರಬ್ ನ್ಯೂಸ್’ಗೆ ಹೇಳಿದ್ದಾರೆ.
‘‘ಈ ಮಸೂದೆಯು ಇಸ್ರೇಲಿಗರ ಹೆಚ್ಚು ವಸಾಹತುಗಳನ್ನು ನಿರ್ಮಿಸಲು ಅವಕಾಶ ನೀಡುವುದಷ್ಟೇ ಅಲ್ಲ, ಅಂತಾರಾಷ್ಟ್ರೀಯ ಕಾನೂನಿಗೆ ವಿರುದ್ಧವಾಗಿ ಫೆಲೆಸ್ತೀನಿಯನ್ ನೆಲದಲ್ಲಿ ವಾಸಿಸುತ್ತಿರುವ ಇಸ್ರೇಲ್‌ನ ಅಕ್ರಮ ನಿವಾಸಿಗಳ ಸಂಖ್ಯೆ ಹೆಚ್ಚಲೂ ಕಾರಣವಾಗುತ್ತದೆ.
‘‘ಇಸ್ರೇಲ್ ಸರಕಾರದ ಇಂಥ ಕ್ರಮದ ವಿರುದ್ಧ ಅಂತಾರಾಷ್ಟ್ರೀಯ ಕ್ರಿಮಿನಲ್ ನ್ಯಾಯಾಲಯ ಮತ್ತು ವಿಶ್ವಸಂಸ್ಥೆಗೆ ದೂರುಗಳನ್ನು ನೀಡಲು ಫೆಲೆಸ್ತೀನ್ ಪ್ರಾಧಿಕಾರ ಮುಂದಾಗುವುದು ಅನಿವಾರ್ಯವಾಗಿದೆ’’ ಎಂದು ಅವರು ಹೇಳಿದರು.
ಪಶ್ಚಿಮ ದಂಡೆಯ ಖಾಸಗಿ ಫೆಲೆಸ್ತೀನ್ ನೆಲದಲ್ಲಿರುವ ಇಸ್ರೇಲ್ ವಸಾಹತುಗಳನ್ನು ಕಾನೂನುಬದ್ಧಗೊಳಿಸುವ ‘ವಸಾಹತು ಮಸೂದೆ’ಯನ್ನು ಅಂಗೀಕರಿಸುವುದನ್ನು ಮರುಪರಿಶೀಲಿಸುವಂತೆ ವಿಶ್ವಸಂಸ್ಥೆಯ ಮಹಾಕಾರ್ಯದರ್ಶಿ ಬಾನ್ ಕಿ ಮೂನ್ ಶುಕ್ರವಾರ ಇಸ್ರೇಲ್ ಸಂಸದರನ್ನು ಒತ್ತಾಯಿಸಿದ್ದಾರೆ.