×
Ad

ಲಕ್ಷಾ ಸೇನ್, ಇರಾ ಶರ್ಮ ರಾ.ಜೂನಿಯರ್ ಚಾಂಪಿಯನ್ಸ್

Update: 2016-12-17 20:30 IST

ಉಡುಪಿ, ಡಿ.17: ದೇಶದ ಅಗ್ರಸೀಡ್ ಆಟಗಾರ ಉತ್ತರಾಂಚಲನ ಲಕ್ಷಾ ಸೇನ್ ಹಾಗೂ 11ನೇ ಸೀಡ್ ಹರ್ಯಾಣದ ಇರಾ ಶರ್ಮ ಅವರು ಇಂದು ಅಜ್ಜರಕಾಡಿನ ಜಿಲ್ಲಾ ಒಳಾಂಗಣ ಕ್ರೀಡಾಂಗಣದಲ್ಲಿ ಉಡುಪಿ ಜಿಲ್ಲಾ ಬ್ಯಾಡ್ಮಿಂಟನ್ ಅಸೋಸಿಯೇಷನ್‌ನ ಆಶ್ರಯದಲ್ಲಿ ಮುಕ್ತಾಯಗೊಂಡ 41ನೇ ಜೂನಿಯರ್ ರಾಷ್ಟ್ರೀಯ ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್‌ನ 19 ವರ್ಷ ದೊಳಗಿನ ಬಾಲಕ- ಬಾಲಕಿಯರ ಸಿಂಗಲ್ಸ್ ಪ್ರಶಸ್ತಿಗಳನ್ನು ಗೆದ್ದುಕೊಂಡರು.

ಅದೇ ರೀತಿ ಎರಡನೇ ಸೀಡ್ ಆಟಗಾರ ಕೇರಳದ ಕಿರಣ್ ಜಾರ್ಜ್ ಅವರು 17 ವರ್ಷದೊಳಗಿನ ಬಾಲಕರ ವಿಭಾಗದಲ್ಲಿ ಹಾಗೂ ಚಂಡೀಗಢದ ಆಕರ್ಷಿ ಕಶ್ಯಪ್ 17 ವರ್ಷದೊಳಗಿನ ಬಾಲಕಿಯರ ವಿಭಾಗದ ಸಿಂಗಲ್ಸ್‌ನಲ್ಲಿ ಪ್ರಶಸ್ತಿ ಜಯಿಸುವ ಮೂಲಕ ರಾಷ್ಟ್ರೀಯ ಚಾಂಪಿಯನ್‌ಗಳಾಗಿ ಮೂಡಿಬಂದರು.

ಇಂದು ನಡೆದ 19 ವರ್ಷದೊಳಗಿನ ಬಾಲಕರ ವಿಭಾಗದ ಪೈನಲ್‌ನಲ್ಲಿ ಲಕ್ಷಾ ಸೇನ್, ಎರಡನೇ ಸೀಡ್ ಪಡೆದಿರುವ ಏರಿಂಡಿಯಾದ ಮಿಥುನ್ ಎಂ. ಅವರನ್ನು 21-15, 21-16ರ ನೇರ ಗೇಮ್‌ಗಳಿಂದ ಹಿಮ್ಮೆಟ್ಟಿಸಿ ಪ್ರಶಸ್ತಿಯನ್ನು ಜಯಿಸಿದರು.

ನೋವಿನಲ್ಲೂ ಆಟ:

ಬಾಲಕಿಯರ ವಿಭಾಗದಲ್ಲಿ ನಿನ್ನೆ ಅಗ್ರಸೀಡ್ ಕರ್ನಾಟಕದ ಶಿಖಾ ಗೌತಮ್‌ರನ್ನು ಸೋಲಿಸಿ ಅಚ್ಚರಿ ಫಲಿತಾಂಶ ನೀಡಿದ್ದ ಇರಾ ಶರ್ಮ ಇಂದು ಫೈನಲ್‌ನಲ್ಲಿ ಚಂಡೀಗಢದ ಎರಡನೇ ಸೀಡ್ ಆಟಗಾರ್ತಿ ಅಕರ್ಷಿ ಕಶ್ಯಪ್‌ರನ್ನು 17-21, 21-17 ಹಾಗೂ 21-10ರ ಅಂತರದಿಂದ ಪರಾಭವಗೊಳಿಸಿ ಸತತ ಎರಡನೇ ಅಚ್ಚರಿ ಜಯದೊಂದಿಗೆ ಚಾಂಪಿಯನ್ ಆಟಗಾರ್ತಿಯಾಗಿ ಮೂಡಿಬಂದರು.

  ಆದರೆ ಇದಕ್ಕೆ ಮೊದಲೇ 17 ವರ್ಷದೊಳಗಿನ ಬಾಲಕಿಯರ ವಿಭಾಗದಲ್ಲಿ ಸಿಂಗಲ್ಸ್ ಪ್ರಶಸ್ತಿ ಜಯಿಸಿದ್ದ ಆಕರ್ಷಿ ಕಶ್ಯಪ್, ಪಂದ್ಯದ ಮಧ್ಯದಲ್ಲಿ ಸ್ನಾಯು ಸೆಳೆತಕ್ಕೊಳಗಾದರೂ, ಆಟದಿಂದ ನಿರ್ಗಮಿಸದೇ, ಕೆಚ್ಚದೆಯಿಂದ ಹೋರಾಡಿ ಮೂರನೇ ಗೇಮ್‌ನಲ್ಲಿ ನೋವಿನಿಂದ ಕುಂಟುತ್ತಾ ಆಡಿ ಪಂದ್ಯವನ್ನು ಸೋತರು. ಈ ಮೂಲಕ ಅವರು ಅಂತಾರಾಷ್ಟ್ರೀಯ ಆಟಗಾರ ಹಾಗೂ ಖ್ಯಾತ ಕೋಚ್ ಆಗಿರುವ ವಿಮಲ್ ಕುಮಾರ್ ಸೇರಿ ನೆರೆದ ಎಲ್ಲರ ಪ್ರಶಂಸೆಗೆ ಪಾತ್ರರಾದರು.

17 ವರ್ಷದೊಳಗಿನ ಬಾಲಕರ ಸಿಂಗಲ್ಸ್ ಫೈನಲ್‌ನಲ್ಲಿ ಕೇರಳದ ಕಿರಣ್ ಜಾರ್ಜ್ ಅವರು, ಅಗ್ರಸೀಡ್ ಏರಿಂಡಿಯಾದ ಕಾರ್ತಿಕೇಯ ಗುಲ್ಶನ್ ಕುಮಾರ್ ಅವರನ್ನು 21-9, 23-21ರ ಅಂತರದಿಂದ ಹಿಮ್ಮೆಟ್ಟಿಸಿದರು. ಮೊದಲ ಗೇಮ್‌ನ್ನು ಏಕಪಕ್ಷೀಯವಾಗಿ ಸೋತ ಕಾತಿಕೇಯ, ಎರಡನೇ ಸೆಟ್‌ನಲ್ಲಿ ಜಿದ್ದಾಜಿದ್ದಿನ ಹೋರಾಟ ನೀಡಿದರೂ ಅಂತಿಮವಾಗಿ ಸೋಲನ್ನು ಒಪ್ಪಿಕೊಳ್ಳಬೇಕಾಯಿತು.

ಬಾಲಕಿಯರ ಸಿಂಗಲ್ಸ್ ಫೈನಲ್‌ನಲ್ಲಿ ಅಗ್ರಸೀಡ್ ಆಟಗಾರ್ತಿಯಾಗಿರುವ ಆಕರ್ಷಿ ಕಶ್ಯಪ್ ಅವರು, ಎರಡನೇ ಸೀಡ್ ಆಟಗಾರ್ತಿಯಾದ ಏರಿಂಡಿಯಾದ ಪ್ರಾಶಿ ಜೋಷಿ ಅವರನ್ನು 21-13, 22-20ರ ಅಂತರದಿಂದ ಸುಲಭವಾಗಿ ಸೋಲಿಸಿ ಪ್ರಶಸ್ತಿ ಜಯಿಸಿದರು.

ಕರ್ನಾಟಕದ ಬಾಲೆಯರಿಗೆ ಡಬಲ್:

ಆತಿಥೇಯ ಕರ್ನಾಟಕವೂ ಟೂರ್ನಿಯಲ್ಲಿ ಗಮನಾರ್ಹ ಪ್ರದರ್ಶನ ನೀಡಿತು. ಕರ್ನಾಟಕದ ಅಶ್ವಿನಿ ಭಟ್ ಕೆ. ಹಾಗೂ ಮಿಥುಲಾ ಯು.ಕೆ. ಜೋಡಿ 19 ವರ್ಷದೊಳಗಿನ ಬಾಲಕಿಯರ ಡಬಲ್ಸ್ ಹಾಗೂ 17 ವರ್ಷದೊಳಗಿನ ಬಾಲಕಿಯರ ಡಬಲ್ಸ್ ಪ್ರಶಸ್ತಿಗಳನ್ನು ಗೆಲ್ಲುವ ಮೂಲಕ ಡಬಲ್ಸ್‌ನ ‘ಡಬಲ್’ ಪಡೆಯಿತು.

ಇದರೊಂದಿಗೆ ಕರ್ನಾಟಕದ ಮಿಥುಲಾ ಯು.ಕೆ. ಅವರು ಟೂರ್ನಿಯಲ್ಲಿ ಆತ್ಯಧಿಕ ಮೂರು ಚಿನ್ನದ ಪದಕಗಳನ್ನು ಜಯಿಸಿ ಇನ್ನೊಂದು ಅಪರೂಪದ ಸಾಧನೆ ಮಾಡಿದರು. ಅವರು ಅಶ್ವಿನಿ ಭಟ್‌ರೊಂದಿಗೆ 19 ಮತ್ತು 17 ವರ್ಷದೊಳಗಿನ ಬಾಲಕಿಯರ ಡಬಲ್ಸ್ ಪ್ರಶಸ್ತಿ ಜಯಿಸಿದರೆ, ನಂತರ 19 ವರ್ಷದೊಳಗಿನ ಮಿಕ್ಸೆಡ್ ಡಬಲ್ಸ್‌ನಲ್ಲೂ ಏರಿಂಡಿಯಾದ ಧ್ರುವ ಕಪಿಲ್ ರೊಂದಿಗೆ ಸೇರಿ ಪ್ರಶಸ್ತಿ ಜಯಿಸಿ ಟೂರ್ನಿಯನ್ನು ಸ್ಮರಣೀಯಗೊಳಿಸಿದರು.
 
19 ವರ್ಷದೊಳಗಿನ ಬಾಲಕಿಯರ ಡಬಲ್ಸ್‌ನಲ್ಲಿ ಕರ್ನಾಟಕದ ಜೋಡಿ ಫೈನಲ್‌ನಲ್ಲಿ ಎದುರಾಳಿ ಕರ್ನಾಟಕದ ಶಿಖಾ ಗೌತಮ್ ಹಾಗೂ ಎಎಐನ ಮಹಿಮಾ ಅಗರ್ವಾಲ ಜೋಡಿಯ ವಿರುದ್ಧ ಮೊದಲ ಸೆಟ್‌ನ್ನು 21-14ರಿಂದ ಗೆದ್ದಾಗ, ಶಿಖಾ ಗೌತಮ್-ಅಗರ್ವಾಲ ಜೋಡಿ ಆಟದಿಂದ ನಿರ್ಗಮಿಸಿತು.

19 ವರ್ಷದೊಳಗಿನ ಬಾಲಕರ ಡಬಲ್ಸ್ ಫೈನಲ್‌ನಲ್ಲಿ ಮಣಿಪುರದ ಮಂಜಿತ್ ಸಿಂಗ್ ಕೆ. ಹಾಗೂ ದಿಂಕು ಸಿಂಗ್ ಕೆ. ಅವರು ಮಧ್ಯಪ್ರದೇಶದ ಅಮನ್ ರಾಯ್ಕರ್ ಹಾಗೂ ಯಶ್ ರಾಯ್ಕರ್ ಜೋಡಿಯನ್ನು 21-16, 15-21, 21-17ರ ಅಂತರದಿಂದ ಹಿಮ್ಮೆಟ್ಟಿಸಿ ಪ್ರಶಸ್ತಿ ಜಯಿಸಿದರು.

ಇದೇ ವಿಭಾಗದ ಮಿಕ್ಸೆಡ್ ಡಬಲ್ಸ್ ಫೈನಲ್‌ನಲ್ಲಿ ಏರಿಂಡಿಯಾದ ಧ್ರುವ ಕಪಿಲಾ ಮತ್ತು ಮಿಥುಲಾ ಯು.ಕೆ. ಅವರು, ಆಂಧ್ರ ಪ್ರದೇಶದ ಕೃಷ್ಣ ಪ್ರಸಾದ್ ಜಿ. ಮತ್ತು ಎಎಐನ ಮಹಿಮಾ ಅಗರ್ವಾಲರನ್ನು 18-21, 21-15, 21-19ರ ಅಂತರದಿಂದ ಪರಾಭವಗೊಳಿಸಿದರು.
 
17 ವರ್ಷದೊಳಗಿನ ಬಾಲಕರ ಡಬಲ್ಸ್ ಫೈನಲ್‌ನಲ್ಲಿ ಏರಿಂಡಿಯಾದ ಧ್ರುವ ಕಪಿಲಾ ಮತ್ತು ಆಂಧ್ರದ ಪ್ರದೇಶದ ಕೃಷ್ಣ ಪ್ರಸಾದ್ ಜಿ. ಅವರು, ಉತ್ತರಾಂಚಲದ ಬೋಧಿತ್ ಜೋಶಿ ಹಾಗೂ ಏರಿಂಡಿಯಾದ ಮಿಥುನ್ ಎಂ. ಜೋಡಿಯನ್ನು 21-18, 23-21ರ ಅಂತರದಿಂದ ಹಿಮ್ಮೆಟ್ಟಿಸಿದರು.

17 ವರ್ಷದೊಳಗಿನ ಬಾಲಕರ ಡಬಲ್ಸ್ ಫೈನಲ್‌ನಲ್ಲಿ ಏರಿಂಡಿಯಾದ  ಧ್ರುವಕಪಿಲಾಮತ್ತು ಆಂಧ್ರ ಪ್ರದೇಶದ ಕೃಷ್ಣ ಪ್ರಸಾದ್ ಜಿ. ಅವರು, ಉತ್ತರಾಂಚಲದ ಬೋಧಿತ್ ಜೋಶಿ ಹಾಗೂ ಏರಿಂಡಿಯಾದ ಮಿಥುನ್ ಎಂ. ಜೋಡಿಯನ್ನು 21-18, 23-21ರ ಅಂತರದಿಂದ ಹಿಮ್ಮೆಟ್ಟಿಸಿದರು. ಅದೇ ವಯೋಮಾನದ ಬಾಲಕಿಯರ ಡಬಲ್ಸ್ ಫೈನಲ್‌ನಲ್ಲಿ ಕರ್ನಾಟಕದ ಅಶ್ವಿನಿ ಭಟ್ ಕೆ. ಹಾಗೂ ಮಿಥುಲಾ ಯು.ಕೆ. ಅವರು, ಮಹಾರಾಷ್ಟ್ರದ ಸಿಮ್ರಾನ್ ಸಿಂಗ್ ಮತ್ತು ರಿತಿಕಾ ಠಾಕರ್ ಜೋಡಿಯನ್ನು 21-13, 21-11ರ ಅಂತರದಿಂದ ಪರಾಭವಗೊಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News