ಅಟಲ್ ಆವಿಷ್ಕಾರ ಮಿಷನ್‌ಗೆ ಉಡುಪಿಯ ವಳಕಾಡು ಶಾಲೆ ಆಯ್ಕೆ
ಉಡುಪಿ, ಡಿ.17: ಕೇಂದ್ರ ಸರಕಾರವು ನೀತಿ ಆಯೋಗದಡಿ ಅಟಲ್ ಅವಿಷ್ಕಾರ್ ಮಿಷನ್‌ಗೆ ಉಡುಪಿಯ ವಳಕಾಡು ಸರಕಾರಿ ಸಂಯುಕ್ತ ಪ್ರೌಢ ಶಾಲೆ ಆಯ್ಕೆಯಾಗಿದೆ.
ರಾಷ್ಟ್ರದಾದ್ಯಂತ ಒಟ್ಟು 500 ಶಾಲೆಗಳನ್ನು ಆಯ್ಕೆ ಮಾಡಿ ತನ್ಮೂಲಕ ವಿದ್ಯಾರ್ಥಿಗಳಲ್ಲಿ ಸೃಜನಾತ್ಮಕತೆ ಮತ್ತು ವೈಜ್ಞಾನಿಕ ಮನೋಭಾವ ಬೆಳೆಸುವ ಉದ್ದೇಶವನ್ನು ಈ ಮಿಷನ್ ಹೊಂದಿದೆ.
ಶಾಲೆಯಲ್ಲಿನ ಮೂಲಭೂತ ಸೌಕರ್ಯ, ಶಿಕ್ಷಕರ ವಿದ್ಯಾರ್ಹತೆ, ಗುಣಮಟ್ಟ, ವಿದ್ಯಾರ್ಥಿಗಳ ದಾಖಲಾತಿ, ಸಾಧನೆ ಆಧರಿಸಿ ಈ ಆಯ್ಕೆ ಮಾಡಲಾಗುತ್ತದೆ. ಅಂತಿಮವಾಗಿ ಆಯ್ಕೆಯಾದ ಶಾಲೆಗೆ ಅಟಲ್ ಟಿಂಕರಿಂಗ್ ಪ್ರಯೋಗಾಲಯ ಆರಂಭಿಸಲು ಧನ ಸಹಾಯ ನೀಡುತ್ತದೆ. ಅನಂತರ 5 ವರ್ಷಗಳ ಅವಧಿಯಲ್ಲಿ ಪ್ರಯೋಗಾಲಯ ನಿರ್ವಹಣೆ ಹಾಗೂ ವಿಜ್ಞಾನ, ತಂತ್ರಜ್ಞಾನ, ಗಣಿತ ವಿಷಯಗಳಲ್ಲಿ ತರಬೇತಿ, ವಿಜ್ಞಾನ ಉಪನ್ಯಾಸ ಸರಣಿ ಸಂಘಟಿಸಲು ಮತ್ತು ಇತರ ವೈಜ್ಞಾನಿಕ ಚಟುವಟಿಕೆ ಗಳನ್ನು ಏರ್ಪಡಿಸಲು ನೆರವು ನೀಡುತ್ತದೆ.
ಈ ವರ್ಷದ ಜುಲೈ ತಿಂಗಳಿನಲ್ಲಿ ಇಲಾಖೆಯ ಸೂಚನೆಯಂತೆ ವಳಕಾಡು ಶಾಲೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿದ್ದು, ವಿವರವಾದ ಪೂರ್ವಭಾವಿ ಹಂತದ ಆಯ್ಕೆಯ ನಂತರ ಪುಣೆಯಲ್ಲಿ ನಡೆದ ಅಟಲ್ ಇನ್ನೊವೇಶನ್ ಚಾಲೆಂಜ್‌ನಲ್ಲಿ ವಿದ್ಯಾರ್ಥಿಗಳಾದ ಪುರುಷೋತ್ತಮ ಆಚಾರ್ಯ ಹಾಗೂ ಅನಿರುದ್ಧ ವಿಜ್ಞಾನ ಮಾದರಿ ಬಗ್ಗೆ ಮತ್ತು ಶಿಕ್ಷಕ ರಾಧಾಕೃಷ್ಣ ಉಪಾಧ್ಯಾಯ ಶಾಲೆಯ ಬಗ್ಗೆ ಮಾಹಿತಿಯನ್ನು ಪ್ರಸ್ತುತ ಪಡಿಸಿದ್ದರು.
ಅಂತಿಮವಾಗಿ ಒಟ್ಟು 257 ಶಾಲೆಗಳು ಆಯ್ಕೆಯಾಗಿದ್ದು, ಇದರಲ್ಲಿ ಕರ್ನಾಟಕದ 15ಶಾಲೆಗಳು ಸೇರಿವೆ. ಉಡುಪಿ ಜಿಲ್ಲೆಯಿಂದ ವಳಕಾಡು ಶಾಲೆ ಆಯ್ಕೆಯಾಗಿರುವ ಏಕೈಕ ಶಾಲೆಯಾಗಿದ್ದು, ಶೀಘ್ರದಲ್ಲಿ ಅಟಲ್ ಲಾಂಚ್ ಇವೆಂಟ್‌ನಲ್ಲಿ ಭಾಗವಹಿಸಲಿದೆ.