‘ಜಾತಿಗೆ ಸೀಮಿತಗೊಳಿಸಿದರೆ ಕೋಟಿ-ಚೆನ್ನಯರಿಗೆ ಅಪಮಾನ ’
ಪುತ್ತೂರು, ಡಿ.17 : ಜಾತಿ,ಮತ,ಧರ್ಮ,ಭಾಷೆಯ ಎಲ್ಲೆ ಮೀರಿ ದೈವತ್ವಕ್ಕೇರಿದ ಕೋಟಿ ಚೆನ್ನಯರನ್ನು ಬಂಟರು, ಜೈನರು, ಬಿಲ್ಲವರು ಸೆರಿದಂತೆ ಎಲ್ಲಾ ಜಾತಿಯವರು ಗರಡಿ ಮೂಲಕ ಆರಾಧಿಸಿಕೊಂಡು ಬರುತ್ತಿದ್ದರೂ ಕೋಟಿ ಚೆನ್ನಯರನ್ನು ಸ್ವಾರ್ಥಕ್ಕಾಗಿ ಒಂದು ಜಾತಿಗೆ ಸೀಮಿತಗೊಳಿಸುವ ಕೆಲಸವಾದರೆ ಅದು ಅವರಿಗೆ ಮಾಡುವ ಅಪಮಾನ, ಮಾತ್ರವಲ್ಲದೆ ಅವರ ಗೌರವಕ್ಕೆ ಧಕ್ಕೆ ಎಂದು ಕೋಟಿ ಚೆನ್ನಯ ಜನ್ಮಸ್ಥಳ ಸಂಚಲನಾ ಸಮಿತಿಯ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ್ ಅವರು ಹೇಳಿದರು.
ಪಡುಮಲೆ ಕ್ಷೇತ್ರದ ಅಭಿವೃದ್ಧಿಯ ಹಿನ್ನಲೆಯಲ್ಲಿ ಶನಿವಾರ ಪರ್ಮಲೆ ಧರ್ಮ ಚಾವಡಿ ವಠಾರದಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮಗಳ ಪ್ರಯುಕ್ತ ಹಮ್ಮಿಕೊಳ್ಳಲಾದ ಸಭಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕೋಟಿ ಪ್ರಾಣ ತ್ಯಜಿಸುವ ಸಂದರ್ಭದಲ್ಲಿ ಪಡುಮಲೆಯ ಬಲ್ಲಾಳರಲ್ಲಿ ನಾವು ದೈವತ್ವಕ್ಕೇರಿ ನಾಗಬಹ್ಮರ ಪಾದಸೇರಿಕೊಳ್ಳುತ್ತಿದ್ದು ಪಡುಮಲೆಯಲ್ಲಿ ನಮಗೆ ಗರಡಿ ನಿರ್ಮಿಸಿ ಆರಾಧಿಸಿಕೊಂಡು ಬನ್ನಿ ಎಂದು ಹೇಳಿರುವುದು, ಮರಣ ಹೊಂದಿದ ದೇಯಿ ಬೈದೆತಿಯನ್ನು ಬಲ್ಲಾಳರು ಅರಮನೆ ವಠಾರದ ನಾಗಬ್ರಹ್ಮ ಸನ್ನಿಧಿಯ ಸಮೀಪ ರಾಜ ಮರ್ಯಾದಿಯಲ್ಲಿ ಗಂಧದ ಮರ ಬಳಸಿ ದಹನ ಮಾಡಿ ಸಮಾಧಿ ನಿರ್ಮಿಸಿರುವುದು ಐತಿಹಾಸಿಕ ಚರಿತ್ರೆಯಾಗಿದ್ದು, ಇದು ನನ್ನೊಬ್ಬನ ಅಭಿಪ್ರಾಯ ಅಲ್ಲ, ಪಾಲ್ದನಗಳಲ್ಲಿ ಕೂಡ ಇದೆ.ಸ್ಥಳೀಯವಾಗಿಯೂ ಎಲ್ಲರಿಗೂ ಗೊತ್ತಿರುವ ವಿಚಾರ ಇದಾಗಿದೆ. ಆದರೆ ಸ್ವಾರ್ಥಿಗಳು ಜಾಸ್ತಿ ಇರುವುದರಿಂದ ಸಮಸ್ಯೆ ಎದುರಾಗಿದೆ ಎಂದರು.
ತಮ್ಮ ಸ್ವಾರ್ಥಕ್ಕಾಗಿ ಸತ್ಯವನ್ನು ಎಂದೂ ಸುಳ್ಳಾಗಿಸಬಾರದು, ಸತ್ಯವನ್ನು ಕತ್ತಲಲ್ಲಿಟ್ಟು ಅಡಗಿಸಬಾರದು ಎಂದ ಅವರು ಕೋಟಿ ಚೆನ್ನಯರ ಚರಿತ್ರೆಗೆ 600 ವರ್ಷಗಳ ಇತಿಹಾಸವಿದ್ದರೂ ಕೋಟಿ ಚೆನ್ನಯರು ಶಾಪವಿಟ್ಟು ಪಡುಮಲೆಯಿಂದ ತೆರಳಿದ್ದಾರೆ. ಪಡುಮಲೆಗೆ ಮತ್ತೆ ಕಾಲಿಡುವುದಿಲ್ಲ ಎಂಬ ಭಯಮಿಶ್ರಿತ ನಂಬಿಕೆಯಿಂದ ಅವರ ಜನ್ಮಸ್ಥಳವಾದ ಇಲ್ಲಿ ಮೂಲ ಗರಡಿ ರಚನೆ ಮಾಡಲು ಸಾಧ್ಯವಾಗಿಲ್ಲ. ಇದೀಗ ಅಷ್ಟಮಂಗಲ ಪ್ರಶ್ನಾ ಚಿಂತನೆಯಲ್ಲಿ ಕಂಡು ಬಂದಂತೆ ಈ ಕ್ಷೇತ್ರವನ್ನು ಜನತೆಯ ಹಿತದೃಷ್ಟಿಯಿಂದ ಅಭಿವೃದ್ಧಿ ಪಡಿಸುವುದು ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ನಾವೆಲ್ಲರೂ ಒಂದಾಗಿ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಮುಂದಾಗಬೇಕಿದೆ. ಇದರಲ್ಲಿ ನಮಗೆ ಸ್ವಾರ್ಥ ಇಲ್ಲ ಎಂದು ಅವರು ತಿಳಿಸಿದರು.
ವಿನೋದ್ ಆಳ್ವ ಅವರು ಸ್ಥಳದಾನ ಮಾಡುವ ಜೊತೆಗೆ ಪಡುಮಲೆ ಕ್ಷೇತ್ರದ ಅಭಿವೃದ್ಧಿಗೆ ಸರ್ವ ರೀತಿಯ ಸಹಕಾರ ನೀಡಲು ಮುಂದೆ ಬಂದಿದ್ದಾರೆ. ಅವರಿಗೆ ನಾವು ಕೈ ಮುಗಿಯಬೇಕಾಗಿದೆ.ಅವರು ಜಾಗ ನೀಡದಿದ್ದಲ್ಲಿ ನಾನು ಅಧ್ಯಕ್ಷನಾಗಲು, ರುಕ್ಮಯ ಪೂಜಾರಿ ಕಾರ್ಯಾಧ್ಯಕ್ಷರಾಗಲು ಸಾಧ್ಯವಿರುತ್ತಿರಲಿಲ್ಲ ಎಂದ ಅವರು ಕ್ಷೇತ್ರದ ಅಭಿವೃದ್ಧಿಯ ನೀಲಿ ನಕಾಶೆ ಮಾಡಿಕೊಂಡು ಬನ್ನಿ, ತಾನು ಸಂಪೂರ್ಣ ಸಹಕಾರ ನೀಡುವುದಾಗಿ ಧರ್ಮಸ್ಥಳ ಕ್ಷೇತ್ರದ ಡಾ.ವೀರೇಂದ್ರ ಹೆಗ್ಗಡೆ ಅವರು ಹೇಳಿದ್ದಾರೆ ಎಂದು ಅವರು ತಿಳಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ವಿನೋದ್ ಆಳ್ವ , ಕೋಟಿ ಚೆನ್ನಯರ ಜನ್ಮಸ್ಥಳ ಪಡುಮಲೆ (ಪರ್ಮಲೆ) ಬಲ್ಲಾಳರ ಅರಮನೆಯಾಗಿದ್ದು, ಕೋಟಿ ಚೆನ್ನಯರ ಚರಿತ್ರಗೆ ಸಂಬಂಧಿಸಿ 2 ಸಿನೇಮಾ ಮತ್ತು ಯಕ್ಷಗಾನಗಳು ಆಗಿರುವುದು ಎಲ್ಲರಿಗೂ ಗೊತ್ತಿದೆ. ಕೋಟಿ ಚೆನ್ನಯರು ಇಲ್ಲೇ ಹುಟ್ಟಿದವರು, ಇಲ್ಲೇ ಬೆಳೆದವರು. ಈ ಇತಿಹಾಸವನ್ನು ಬದಲಾವಣೆ ಮಾಡಲು ಸಾಧ್ಯವಿಲ್ಲ. ತಾನು ಪಡುಮಲೆಯಲ್ಲೇ ಹುಟ್ಟಿ ಬೆಳೆದವರನಾಗಿದ್ದು, ಈ ಕ್ಷೇತ್ರವನ್ನು ಜಿಲ್ಲೆಯ ಒಂದು ಪುಣ್ಯ ಕ್ಷೇತ್ರವನ್ನಾಗಿಸಬೇಕು ಎಂಬುವುದು ತನ್ನ ಕಲ್ಪಣೆಯಾಗಿತ್ತು. ಎಲ್ಲರೂ ಸೇರಿಕೊಂಡಾಗ ಮಾತ್ರ ಈ ಕೆಲಸವನ್ನು ಮಾಡಲು ಸಾಧ್ಯವಾಗಬಹುದು ಎಂದರು.
ಚಿತ್ರನಟ ಸುಮನ್, ಸಮಿತಿಯ ಗೌರವಾಧ್ಯಕ್ಷ ವಿನೋದ್ ಆಳ್ವ , ಕಾರ್ಯಾಧ್ಯಕ್ಷ ಶಾಸಕ ರುಕ್ಮಯ ಪೂಜಾರಿ ,ರಾಜ್ಯ ಧಾರ್ಮಿಕ ಪರಿಷತ್ ಸದಸ್ಯ ಪದ್ಮನಾಭ ಕೊಟ್ಟಾರಿ, ಭಾಸ್ಕರ್ ಕೋಟ್ಯಾನ್, ಕೆ.ಎಸ್.ಚಂದ್ರಶೇಖರ್ ನರಿಮೊಗ್ರು, ನಾರಾವಿ ಗೋಪಾಲ ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು.