×
Ad

ಜೂನಿಯರ್ ರಾಷ್ತ್ರೀಯ ಬ್ಯಾಡ್ಮಿಂಟನ್ ಟೂರ್ನಿಗೆ ತೆರೆ

Update: 2016-12-17 22:15 IST

 ಉಡುಪಿ, ಡಿ.17: ಇಂದು ಉಡುಪಿ, ಮಣಿಪಾಲದಂಥ ಪಟ್ಟಣಗಳಲ್ಲಿ ಅತ್ಯಾಧುನಿಕ ಸಿಂಥೆಟಿಕ್ ಕೋರ್ಟ್‌ಗಳ ಸೌಲಭ್ಯಗಳಿವೆ. ಇವುಗಳ ಪ್ರಯೋಜನ ವನ್ನು ನಮ್ಮ ಯುವ ಕ್ರೀಡಾಪಟುಗಳು ಬಳಸಿಕೊಂಡು ಕಠಿಣ ಪರಿಶ್ರಮ ದೊಂದಿಗೆ ಸೈನಾ ನೆಹ್ವಾನ್, ಸಿಂಧು,ಶ್ರೀಕಾಂತ್‌ರಂತೆ ಬೆಳಗಲು ಸಾಧ್ಯವಿದೆ ಎಂದು ದೇಶದ ಖ್ಯಾತನಾಮ ಬ್ಯಾಡ್ಮಿಂಟನ್ ಆಟಗಾರರಾಗಿದ್ದ, ಈಗ ಪ್ರಸಿದ್ಧ ಕೋಚ್ ಆಗಿರುವ ಬೆಂಗಳೂರಿನ ವಿಮಲ್‌ಕುಮಾರ್ ಹೇಳಿದ್ದಾರೆ.

ಅಜ್ಜರಕಾಡಿನ ಜಿಲ್ಲಾ ಒಳಾಂಗಣ ಕ್ರೀಡಾಂಗಣದಲ್ಲಿ ಉಡುಪಿ ಜಿಲ್ಲಾ ಬ್ಯಾಡ್ಮಿಂಟನ್ ಅಸೋಸಿಯೇಷನ್‌ನ ಆಶ್ರಯದಲ್ಲಿ ಇಂದು ಮುಕ್ತಾಯಗೊಂಡ 41ನೇ ಜೂನಿಯರ್ ರಾಷ್ಟ್ರೀಯ ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್‌ನ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡುತಿದ್ದರು.

ತಮ್ಮ ಕಾಲದಂತಲ್ಲದೇ ಇಂದಿನ ಶಟ್ಲ್ ಆಟಗಾರರಿಗೆ ಅತ್ಯಾಧುನಿಕ ಸೌಲಭ್ಯಗಳು ದೊರೆಯುತ್ತಿವೆ. ಆಟಕ್ಕೆ ಬೇಕಾದ ಮೂಲಭೂತ ಸೌಕರ್ಯಗಳು ಹೆಚ್ಚಿನ ಕಡೆಗಳಲ್ಲಿವೆ. ಇವುಗಳನ್ನು ಬಳಸಿಕೊಂಡು ಭವಿಷ್ಯದ ಆಟಗಾರರಾಗಲು ಪ್ರಯತ್ನಿಸಬೇಕು. ಮಕ್ಕಳ ಹೆತ್ತವರು ಒತ್ತಡ ಹೇರದೇ ಅವರಿಗೆ ಸರಿಯಾದ ಮಾರ್ಗದರ್ಶನ ನೀಡಬೇಕು ಎಂದರು.

ಉಡುಪಿ ಜಿಪಂ ಅಧ್ಯಕ್ಷ ದಿನಕರ ಬಾಬು, ಸಹಕಾರ ಯೂನಿಯನ್ ಅದ್ಯಕ್ಷ ಕಿಶನ್ ಹೆಗ್ಡೆ ಕೊಳ್ಕೆಬೈಲ್, ಸ್ಟೇಟ್ ಬ್ಯಾಂಕಿನ ಅಧಿಕಾರಿಗಳಾದ ಬಿ.ಜಿ.ಶ್ರೀದರ್, ದಿನೇಶ್, ಭಾರತ ಬ್ಯಾಡ್ಮಿಂಟನ್ ಸಂಸ್ಥೆಯ ಪದಾಧಿಕಾರಿಗಳಾದ ಜೈಸ್ವಾಲ್, ಎನ್.ಸಿ.ಸುಧೀರ್, ಎಚ್.ಎ.ಶೆಟ್ಟಿ, ಅರುಣ್ ಕಕ್ಕರ್, ಉಮರ್ ರಶೀದ್, ರಾಜೇಂದ್ರ ಶರ್ಮ, ದೇಶಪಾಂಡಿಕಾರ್ ಮುಂತಾದವರು ಉಪಸ್ಥಿತರಿದ್ದರು.

 ವಿಮಲ್ ಕುಮಾರ್ ಸೇರಿದಂತೆ ದೇಶದ ಮಾಜಿ ಚಾಂಪಿಯನ್ ಆಟಗಾರರನ್ನು ಸಂಸ್ಥೆಯ ವತಿಯಿಂದ ಸನ್ಮಾನಿಸಲಾಯಿತು.

ಸಂಸ್ಥೆಯ ಅಧ್ಯಕ್ಷ ಕೆ.ರಘುಪತಿ ಭಟ್ ಸ್ವಾಗತಿಸಿದರು.

 ವೈ.ಸುಧೀರ್ ಕುಮಾರ್ ಕಾರ್ಯಕ್ರಮ ನಿರ್ವಹಿಸಿದರು.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News