×
Ad

ಅಝರುದ್ದೀನ್ ರಿಂದ ಮಂಗಳೂರು ಪ್ರೀಮಿಯರ್ ಲೀಗ್ ಉದ್ಘಾಟನೆ

Update: 2016-12-17 22:29 IST

 ಮಂಗಳೂರು, ಡಿ. 17: ದೇಶದಲ್ಲಿ ಕ್ರಿಕೆಟ್ ಜನಪ್ರಿಯ ಆಟವಾಗಿ ಬೆಳೆದಿದ್ದು, ರಾಜ್ಯದಲ್ಲೂ ಈ ಕ್ರೀಡೆಗೆ ಉಜ್ವಲ ಭವಿಷ್ಯವಿದೆ. ಈ ನಿಟ್ಟಿನಲ್ಲಿ ಮಂಗಳೂರಿನ ಕ್ರೀಡಾಪಟುಗಳು ರಾಜ್ಯ, ದೇಶವನ್ನು ಪ್ರತಿನಿಧಿಸಿ ಸಾಧನೆ ಮಾಡುವಂತಾಗಲಿ ಎಂದು ಭಾರತೀಯ ಕ್ರಿಕೆಟ್ ತಂಡ ಮಾಜಿ ಕಪ್ತಾನ ಮುಹಮ್ಮದ್ ಅಝರುದ್ದೀನ್ ಇಂದಿಲ್ಲಿ ಹೇಳಿದ್ದಾರೆ.

ಅವರು ಮಂಪಣಂಬೂರು ಎನ್‌ಎಂಪಿಟಿ ಮೈದಾನದಲ್ಲಿ ಇಂದಿನಿಂದ ನಡೆಯುವ ಅಲ್ ಮುಝೈನ್- ವೈಟ್ ಸ್ಟೋನ್ - ಮಂಗಳೂರು ಪ್ರೀಮಿಯರ್ ಲೀಗ್ (ಎಂಪಿಎಲ್) ಆವೃತ್ತಿಯ 20- 20 ಕ್ರಿಕೆಟ್ ಪಂದ್ಯಾಟವನ್ನು ಉದ್ಘಾಟಿಸಿ ಮಾತನಾಡಿದರು.

ನಾನು ಬ್ಯಾಚ್ ಹಿಡಿಯದೆ ಹಲವು ಸಮಯವಾಗಿವೆ. ಮಂಗಳೂರಿನಲ್ಲಿ ಭೇಟಿ ನೀಡಲು ಮತ್ತು ಮಂಗಳೂರಿನ ಎಂಪಿಎಲ್ ಕ್ರಿಕೆಟ್ ಸಮಾರಂಭದಲ್ಲಿ ಭಾಗವಹಿಸಲು ಸಂತೋಷಪಡುತ್ತೇನೆ. ಅಲ್ಲದೆ, ಕುಡ್ಲ ಪ್ರೀಮಿಯರ್ ಲೀಗ್ ಸಂಘಟಿಸಿದವರನ್ನು ಅಭಿನಂದಿಸುತ್ತೇನೆ ಎಂದರು.
 
ಮಂಗಳೂರಿನ ಹಲವು ಕ್ರೀಡಾಪ್ರತಿಭೆಗಳು ಕ್ರೀಡಾಕೂಟಗಳಲ್ಲಿ ಭಾಗವಹಿಸಿ ಹೆಸರು ಮಾಡಿದ್ದಾರೆ. ಮಂಗಳೂರಿನವರೇ ಆಗಿರುವ ರಾಹುಲ್ ಪ್ರಸಕ್ತ ಭಾರತೀಯ ಕ್ರಿಕೆಟ್ ತಂಡದಲ್ಲಿ ಆಡುತ್ತಿದ್ದಾರೆ. ಹಾಗೇಯೇ ಇಲ್ಲಿನ ಕ್ರಿಕೆಟ್ ಕ್ರೀಡಾಪಟುಗಳು ಮುಂದಿನ ದಿನಗಳಲ್ಲಿ ರಾಜ್ಯ, ದೇಶದ ತಂಡದಲ್ಲಿ ಆಡುವಂತಾಗಲಿ ಎಂದು ಹಾರೈಸಿದರು. ಮಂಗಳೂರಿನ ಕ್ರೀಡಾಂಗಣವು ಚೆನ್ನಾಗಿದೆ. ಹಿಂದೆ ಬೆಂಗಳೂರಿನಲ್ಲಿ ಕ್ರಿಕೆಟ್ ಆಟವಾಡಲು ಬಂದ ಸಂದರ್ಭದಲ್ಲಿ ಬಹಳ ಸೆಖೆ ಇತ್ತು. ಈ ಹಿಂದೆಯೂ ನಾನು ಮಂಗಳೂರಿಗೆ ಬಂದಿದ್ದೆ ಎಂದು ಅಝರುದ್ದೀನ್ ನೆನಪಿಸಿಕೊಂಡರು.

     ಕರ್ನಾಟಕ ರೀಜನಲ್ ಕ್ರಿಕೆಟ್ ಅಕಾಡೆಮಿಯ ಅಧ್ಯಕ್ಷ ಸಿರಾಜುದ್ಧೀನ್, ಅಲ್‌ಮುಝೈನ್ ಸಂಸ್ಥೆಯ ಉದ್ಯಮಿ ಝಕಾರಿಯಾ ಜೋಕಟ್ಟೆ, ವೈಟ್ ಸ್ಟೋನ್ ಸಂಸ್ಥೆಯ ಉದ್ಯಮಿ ಜನಾಬ್ ಶರೀಫ್ ಬಿ.ಎಂ., ರಿಯಲ್ ಟೆಕ್ ಕಂಪೆನಿಯ ಉದ್ಯಮಿ ಇಸ್ಮಾಯಿಲ್, ಸಂಚಾಲಕರಾದ ಇಮ್ತಿಯಾಝ್, ಸಂಯೋಜಕ ಗೌತಮ್ ಶೆಟ್ಟಿ , ಶಾಸಕ ಮೊದಿನ್ ಬಾವ, ಉದ್ಘಾಟನಾ ಕಾರ್ಯಕ್ರಮದ ಸಂಘಟನಾ ಸಮಿತಿಯ ಸದಸ್ಯರಾದ ಅರ್ಜುನ್ ಕಾಫಿಕಾಡ್ ಸಚಿನ್, ಅನಿವಾಸಿ ಭಾರತೀಯವರು ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News