ಲಿಂಗಪತ್ತೆ ನಿಷೇಧ ಪರಿಣಾಮಕಾರಿ ಅನುಷ್ಠಾನ ಮುಖ್ಯ: ಉಡುಪಿ ಜಿಲ್ಲಾಧಿಕಾರಿ
ಮಣಿಪಾಲ, ಡಿ.17: ಗರ್ಭಧಾರಣ ಮತ್ತು ಪ್ರಸವಪೂರ್ವ ಲಿಂಗಪತ್ತೆಗೆ ಜಿಲ್ಲೆಯಲ್ಲಿ ತಪಾಸಣಾ ತಂಡವನ್ನು ರಚಿಸಲಾಗಿದ್ದು, ತಂಡ ಪರಿಣಾಮಕಾರಿಯಾಗಿ ಕರ್ತವ್ಯ ನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಹೇಳಿದ್ದಾರೆ.
ಮಣಿಪಾಲದ ಶಿರಡಿ ಸಾಯಿಬಾಬ ಆಸ್ಪತ್ರೆಯ ಮೂರನೇ ಮಹಡಿಯ ಸಭಾಂಗಣದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಮಣಿಪಾಲ ಕೆಎಂಸಿ ಆಸ್ಪತ್ರೆಯ ಪ್ರಸೂತಿ ಮತ್ತು ಸ್ತ್ರೀರೋಗ ವಿಭಾಗ ಆಶ್ರಯದಲ್ಲಿ ನಡೆದ ಗರ್ಭಧಾರಣ ಮತ್ತು ಪ್ರಸವಪೂರ್ವ ಲಿಂಗಪತ್ತೆ ತಂತ್ರ ವಿಧಾನಗಳ ಕುರಿತ ಮಾಹಿತಿ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಜಿಲ್ಲೆಯಲ್ಲಿ ಲಿಂಗ ಆಯ್ಕೆ ನಿಷೇಧ ಅಧಿನಿಯಮದಡಿ ತಮ್ಮ ಅವಧಿಯಲ್ಲಿ ಈವರೆಗೆ ಯಾವುದೇ ದೂರು ದಾಖಲಾಗದೇ ಇದ್ದರೂ, ಈ ಸಂಬಂಧದ ಕಾನೂನನ್ನು ಅನುಷ್ಟಾನಕ್ಕೆ ತರುವಲ್ಲಿ ನಿರ್ಲಕ್ಷ ಸಲ್ಲದು ಎಂದು ಜಿಲ್ಲಾಧಿಕಾರಿಗಳು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು. ನೊಂದಾಯಿತ ಸಂಸ್ಥೆಗಳು ತಮ್ಮ ಕಾರ್ಯ ವ್ಯಾಪ್ತಿಯಡಿ ಕರ್ತವ್ಯ ನಿರ್ವಹಿಸಿದರೆ ದೂರುಗಳಿಗೆ ಅವಕಾಶವಿರುವುದಿಲ್ಲ ಎಂದು ಅವರು ಹೇಳಿದರು.
ಬೆಂಗಳೂರು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ನಿರ್ದೇಶನಾಲಯದ ಉಪನಿರ್ದೇಶಕಿ ಡಾ.ರಜನಿ, ಗರ್ಭಧಾರಣ ಮತ್ತು ಪ್ರಸವಪೂರ್ವ ಲಿಂಗ ಪತ್ತೆ ತಂತ್ರ ವಿಧಾನಗಳ ಸಮಗ್ರ ಮಾಹಿತಿಯನ್ನು ಉಪಸ್ಥಿತ ರಿದ್ದ ಸಂಸ್ಥೆಯ ಪ್ರತಿನಿಧಿಗಳಿಗೆ ಹಾಗೂ ವೈದ್ಯಾಧಿಕಾರಿಗಳಿಗೆ ನೀಡಿದರು. ಅಲ್ಲದೇ ಸಂವಾದದಲ್ಲಿ ಈ ಸಂಬಂಧ ಸಂಸ್ಥೆಯವರಿಗೆ ಇರುವ ಹಲವು ಸಂಶಯಗಳಿಗೆ ಉತ್ತರ ನೀಡಿದರು.
ಸುಮಾರು 113 ಸಂಸ್ಥೆಯ ವೈದ್ಯರು ಕಾರ್ಯಾಗಾರದಲ್ಲಿ ಪಾಲ್ಗೊಂಡಿದ್ದರು. ಡಾ.ಮುರಳೀಧರ್ ಪೈ ಸ್ವಾಗತಿಸಿದರು, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ರೋಹಿಣಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಡಾ.ಅಖಿಲಾ ಮಾಹಿತಿ ನೀಡಿದರು.