ಕ್ರಿಸ್‌ಮಸ್‌ಗೆ ಬಡವರಿಗೆ ಹಂಚಲು 10 ಟನ್ ಆಹಾರ ನೀಡಿದ ಲಂಡನ್ ಮುಸ್ಲಿಮರು
ಲಂಡನ್: ಕ್ರಿಸ್‌ಮಸ್ ಸಂದರ್ಭದಲ್ಲಿ ಬಡವರಿಗೆ ಹಂಚಲು 10 ಟನ್ ಆಹಾರ ನೀಡುವ ಮೂಲಕ ಲಂಡನ್ ಮುಸ್ಲಿಂ ಸಮುದಾಯ ಸರ್ವತ್ರ ಮೆಚ್ಚುಗೆಗೆ ಪಾತ್ರವಾಗಿದೆ.
ಕ್ರಿಸ್‌ಮಸ್ ಸಂದರ್ಭದಲ್ಲಿ ನಿರ್ವಸಿತರಾಗಿರುವ ಕ್ರಿಶ್ಚಿಯನ್ನರಿಗೆ ಇದನ್ನು ಹಂಚಲಾಗುತ್ತದೆ ಎಂದು ಲಂಡನ್ ಮುಸ್ಲಿಂ ಸಮುದಾಯದ ಧಾರ್ಮಿಕ ಹಾಗೂ ದತ್ತಿ ಮುಖಂಡರು ಪ್ರಕಟಿಸಿದ್ದಾರೆ. ಈ ಹಬ್ಬದ ಅವಧಿಯಲ್ಲಿ ಬಡ ಕ್ರಿಶ್ಚಿಯನ್ನರಿಗೆ ಆಹಾರ ನೀಡಲು ನೂರಾರು ಮಂದಿ ಮುಸ್ಲಿಮರು ಪೂರ್ವ ಲಂಡನ್ ಮಸೀದಿಯಲ್ಲಿ ಶುಕ್ರವಾರ ಸೇರಿದ್ದರು.
7500 ಮಂದಿಯ ಮುಸ್ಲಿಂ ಗುಂಪು ಬಿಳಿ ಚಪ್ಪಲಿಗಳೊಂದಿಗೆ ಶುಕ್ರವಾರ ಪ್ರಾರ್ಥನೆಗೆ ಮಸೀದಿಗೆ ಆಗಮಿಸಿ, ಆಹಾರವನ್ನು ದಾನವಾಗಿ ನೀಡುವ ಚಿತ್ರಗಳನ್ನು ಬಿಡುಗಡೆ ಮಾಡಲಾಗಿದೆ. ಕ್ರೇಟ್‌ಗಟ್ಟಲೆ ಶಾಪಿಂಗ್ ಬ್ಯಾಗ್‌ಗಳ ಮುಂದೆ ದಾನಿಗಳು ನಿಂತು ಚಿತ್ರ ತೆಗೆಸಿಕೊಂಡಿದ್ದಾರೆ. ಅಕ್ಕಿ, ಪಾಸ್ತಾ, ಬೇಳೆಕಾಳುಗಳು ಹಾಗೂ ಇತರ ತಿನಸುಗಳನ್ನು ಬೀದಿಬದಿಯಲ್ಲಿ ವಾಸಿಸುತ್ತಿರುವ ಕ್ರಿಶ್ಚಿಯನ್ನರಿಗೆ ವಿತರಿಸಲಾಗುತ್ತದೆ.
ಇತರ ಧರ್ಮಗಳ ಸ್ಥಳೀಯ ವ್ಯಾಪಾರಿಗಳು, ಶಾಲೆಗಳು, ವಿಶ್ವವಿದ್ಯಾನಿಲಯ ಹಾಗೂ ಇತರ ಮುಖಂಡರು ಸೇರಿ ಸುಮಾರು ಏಳು ಟನ್ ಆಹಾರ ಸಂಗ್ರಹಿಸಿದ್ದಾಗಿ ಸಂಘಟಕರು ಹೇಳಿದ್ದಾರೆ. ಈ ದಾನದಲ್ಲಿ ಶೇಕಡ 90ಕ್ಕಿಂತಲೂ ಹೆಚ್ಚು ಪ್ರಮಾಣದ ಆಹಾರ ಮುಸ್ಲಿಮೇತರರಿಗೆ ವಿತರಣೆಯಾಗಲಿದೆ. ಸಮಾನ ಮಾನವೀಯತೆಗಾಗಿ ಧರ್ಮದ ಎಲ್ಲೆ ಮೀರಿ ಎಲ್ಲರೂ ಶ್ರಮಿಸುತ್ತಿದ್ದಾರೆ ಎಂದು ಕ್ರಿಶ್ಚಿಯನ್ ರೆವರೆಂಡ್ ಗ್ರೇ ಬ್ರಾಡ್ಲಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.