ಶೈಕ್ಷಣಿಕ ಸಾಧಕರಿಗೆ ಪ್ರೆಸ್ ಕ್ಲಬ್ ಪ್ರಶಸ್ತಿ ಪ್ರದಾನ , ಪ್ರೆಸ್ ಕ್ಲಬ್ ದಿನಾಚರಣೆ
ಮಂಗಳೂರು,ಡಿ.18:ದ.ಕ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಮಂಗಳೂರು ಪ್ರೆಸ್ ಕ್ಲಬ್ ಹಾಗೂ ಪತ್ರಿಕಾ ಭವನ ಟ್ರಸ್ಟ್ ವತಿಯಿಂದ ನಗರದ ಸ್ಕೌಟ್ ಭವನದಲ್ಲಿ ಇಂದು ಹಮ್ಮಿಕೊಂಡ ಪ್ರೆಸ್ ಕ್ಲಬ್ ದಿನಾಚರಣೆ ಸಂದರ್ಭದಲ್ಲಿ ಗ್ರಾಮೀಣ ಪ್ರದೇಶದಲ್ಲಿ ಶೈಕ್ಷಣಿಕ ಸಾಧನೆ ಮಾಡುತ್ತಿರುವ ಕುಂದಾಪುರದ ಮದರ್ ಥೆರೆಸಾ ಪದವಿಪೂರ್ವ ಕಾಲೇಜಿನ ಕುಮಾರಿ ರೆನಿಟಾ ಲೊಬೊ,ಶಮಿತಾ ರಾವ್ ಹಾಗೂ ಕಡಬದ ಏಮ್ಸ್ ಕಾಲೇಜಿನ ಸಮೀರಾ ಹಾಗೂ ಫೌಝಿಯಾ ಬಿ.ಎಸ್ ರನ್ನು ಈ ವರ್ಷದ ಪ್ರೆಸ್ ಕ್ಲಬ್ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಜಿಲ್ಲಾ ಉಸ್ತುವಾರಿ ಹಾಗೂ ರಾಜ್ಯ ಅರಣ್ಯ ,ಪರಿಸರ ,ಜೀವಿಶಾಸ್ತ್ರ ಸಚಿವ ಬಿ.ರಮಾನಾಥ ರೈ ಇಂದು ಪ್ರಶಸ್ತಿ ಪ್ರದಾನ ಮಾಡಿ ಮಾತನಾಡುತ್ತಾ,ಸಮಾಜದಲ್ಲಿ ಪ್ರಾಮಾಣಿಕರಾಗಿರುವವರನ್ನು ಗುರುತಿಸಿ ಗೌರವಿಸುವ ಸಮಾಜ ಮುಖಿ ಕೆಲಸ ಹೆಚ್ಚು ನಡೆಯ ಬೇಕಾಗಿದೆ . ಇದರಿಂದ ಇನ್ನಷ್ಟು ಜನರು ಅವರ ಮಾದರಿಯನ್ನು ಅನುಸರಿಸುತ್ತಾರೆ. ಈ ನಿಟ್ಟಿನಲ್ಲಿ ಪತ್ರಕರ್ತರು ಸಮಾಜದ ಇಂತಹ ಸಾಧಕರನ್ನು ಗುರುತಿಸಿ ಗೌರವಿಸಿರುವ ಕೆಲಸ ಶ್ಲಾಘನೀಯ ಎಂದು ತಿಳಿಸಿದರು.
ಸಾಧಕರ ಮುಂದಿನ ಯೋಜನೆಗಳಿಗೆ ತನ್ನಿಂದ ಸಾಧ್ಯವಾಗುವ ಸಹಕಾರ ನೀಡುವುದಾಗಿ ರಮಾನಾಥ ರೈ ತಿಳಿಸಿದರು.
ಸನ್ಮಾನ ಸಮಾರಂಭದಲ್ಲಿ ಪ್ರೆಸ್ ಕ್ಲಬ್ ಅಧ್ಯಕ್ಷ ರೋನಾಲ್ಡ್ ಅನಿಲ್ ಫೆರ್ನಾಂಡೀಸ್ ಅಧ್ಯಕ್ಷತೆ ವಹಿಸಿದ್ದರು.
ಶಾಸಕ ಮೊಹಿಯುದ್ದೀನ್ ಬಾವ, ಪತ್ರಿಕಾ ಭವನ ಟ್ರಸ್ಟ್ ಅಧ್ಯಕ್ಷ ಆನಂದ ಶೆಟ್ಟಿ, ದ.ಕ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಜಗನ್ನಾಥ ಶೆಟ್ಟಿ ಬಾಳ,ಜಿಲ್ಲಾ ವಾರ್ತಾಧಿಕಾರಿ ಖಾದರ್ ಶಾ, ಹಿರಿಯ ಪತ್ರಕರ್ತ ಮನೋಹರ್ ಪ್ರಸಾದ್ ಮೊದಲಾದವರು ಉಪಸ್ಥಿತರಿದ್ದರು. ಪ್ರೆಸ್ ಕ್ಲಬ್ ಕಾರ್ಯದರ್ಶಿ ಇಬ್ರಾಹೀಂ ಅಡ್ಕಸ್ಥಳ, ಪತ್ರಿಕಾಭವನ ಟ್ರಸ್ಟ್‌ನ ಕಾರ್ಯದರ್ಶಿ ಪುಷ್ಪರಾಜ್ ಬಿ.ಎನ್ ಹಾಗೂ ಕಾರ್ಯನಿರತ ಪತ್ರಕರ್ತರ ಸಂಘದ ಕಾರ್ಯದರ್ಶಿ ಶ್ರೀನಿವಾಸ ಇಂದಾಜೆ ಹಾಗೂ ಅರೀಫ್ ಪಡುಬಿದ್ರೆ , ಆತ್ಮಭೂಷಣ್ ಭಟ್, ನರೇಶ್ ವಿವಿಧ ಕಾರ್ಯಕ್ರಮ ನಿರೂಪಿಸಿದರು.
ಪತ್ರಕರ್ತರ ಬಳಗದಿಂದ ಹಿರಿಯ ಯಕ್ಷಗಾನ ಕಲಾವಿದರ ಮಾರ್ಗದರ್ಶನದಲ್ಲಿ ಯಕ್ಷಗಾನ ಕಾರ್ಯಕ್ರಮ, ಸಾಧಕರಿಗೆ ಸನ್ಮಾನ ಹಾಗೂ ಇತರ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.