ಪ್ರಥಮ ಡಿಜಿಟಲ್ ಗ್ರಾಮವಾಗಲು ಬೆಳಪು ಗ್ರಾಮ ತಯಾರಿ

Update: 2016-12-18 11:19 GMT

ಪಡುಬಿದ್ರಿ , ಡಿ.18 :   ಬೆಳಪು ಗ್ರಾಮವನ್ನು ರಾಜ್ಯ ಪ್ರಥಮ ಡಿಜಿಟಲ್ ಗ್ರಾಮವನ್ನಾಗಿಸಲು ಸರ್ವ ರೀತಿಯಲ್ಲೂ ಗ್ರಾಮಸ್ಥರು ಪ್ರಯತ್ನಿಸಲಿದ್ದಾರೆ ಎಂದು ಗ್ರಾಮ ಪಂಚಾಯ್ತಿ ಅಧ್ಯಕ್ಷ ದೇವಿಪ್ರಸಾದ್ ಶೆಟ್ಟಿ ಹೇಳಿದ್ದಾರೆ.

ವಿಜಯಾ ಬ್ಯಾಂಕ್ ಸಹಭಾಗಿತ್ವದಲ್ಲಿ ಬೆಳಪು ಗ್ರಾಮ ಪಂಚಾಯ್ತಿ ನಜೀರ್ ಸಾಬ್ ಸಭಾಂಗಣದಲ್ಲಿ ಗ್ರಾಮಸ್ಥರಿಗೆ ಡಿಜಿಟಲ್ ಬ್ಯಾಂಕಿಂಗ್ ತಿಳುವಳಿಕೆ ಹಾಗೂ ಬೆಳಪು ಗ್ರಾಮವನ್ನು ಡಿಜಿಟಲ್ ಬ್ಯಾಂಕಿಂಗ್ ಗ್ರಾಮವಾಗಿಸುವ ಬಗ್ಗೆ ಶನಿವಾರ ಜರುಗಿದ ಸಮಾಲೋಚನಾ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಬೆಳಪು ಗ್ರಾಮದ 1760 ಕುಟುಂಬಗಳ 4565 ಜನರಿಗೂ ಮೊಬೈಲ್ ಬ್ಯಾಂಕಿಂಗ್ ವ್ಯವಸ್ಥೆಗೆ ಪೂರಕವಾಗಿ ಉಚಿತ ವೈಫೈ ಕಲ್ಪಿಸುವುದರೊಂದಿಗೆ ನಗದು ವಿನಿಮಯ ನಡೆಸಲು ಮನೆಮನೆಗೆ ವಿದ್ಯಾರ್ಥಿಗಳ ಮೂಲಕ ಮಾಹಿತಿ ಒದಗಿಸಿ ತರಬೇತಿಗೊಳಿಸುವ ಮೂಲಕ ಮತ್ತು ಗ್ರಾಮದ ಸಹಕಾರಿ ಬ್ಯಾಂಕ್, ಸ್ವ-ಸಹಾಯ ಸಂಘದ ಸದಸ್ಯರಿಗೂ ಮೊಬೈಲ್‌ನಲ್ಲಿಯೇ ಹಣ ವಿನಿಮಯಕ್ಕೆ ತರಬೇತಿ ನೀಡಲಾಗುವುದು ಎಂದರು.

ಅಧ್ಯಕ್ಷತೆ ವಹಿಸಿದ್ದ ವಿಜಯಾ ಬ್ಯಾಂಕ್ ಉಡುಪಿ ಉಪ ಮಹಾಪ್ರಬಂಧಕ ಎಮ್.ಜೆ. ನಾಗರಾಜ ಮಾತನಾಡಿ, ಜಿಲ್ಲೆಯ ದತ್ತು ಪಡೆದ 8 ಗ್ರಾಮಗಳಲ್ಲಿ ಬೆಳಪು ರಾಜ್ಯದಲ್ಲಿಯೇ ಪ್ರಥಮವಾಗಿ ಡಿಜಿಟಲ್ ಗ್ರಾಮವನ್ನಾಗಿಸುವ ಆಶಯವಾಗಿದೆ ಎಂದರು.

ಕುತ್ಯಾರು, ಶಿರ್ವ, ಕಾಪು, ಕಳತ್ತೂರು, ಮುದರಂಗಡಿ, ಉಚ್ಚಿಲ ವಿಜಯಾ ಬ್ಯಾಂಕ್ ಶಾಖಾ ವ್ಯವಸ್ಥಾಪಕರು, ಬೆಳಪು ಗ್ರಾಮ ಪಂಚಾಯ್ತಿ ಉಪಾಧ್ಯಕ್ಷೆ ಶೋಭ ಭಟ್, ಬೆಳಪು ಸಿಎ ಬ್ಯಾಂಕ್ ಪ್ರಬಂಧಕ ರತ್ನಾಕರ ಸೋನ್ಸ್, ಗ್ರಾಮಸ್ಥರು, ಕಾಪು ವಿಜಯಾ ಬ್ಯಾಂಕ್ ಶಾಖಾ ವ್ಯವಸ್ಥಾಪಕ ಗಣೇಶ್ ನಾಯಕ್, ಕಳತ್ತೂರು ಶಾಖಾ ಮೆನೇಜರ್ ಸಹನಾ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News