ದಲಿತರಿಗೆ ನ್ಯಾಯ ಒದಗಿಸಲು ಸುಪ್ರೀಂ ಕೋರ್ಟ್‌ನಲ್ಲಿ ಮೀಸಲಾತಿ ಅಗತ್ಯ: ಪ್ರೊ.ಪ್ರಕಾಶ್ ಕಣಿವೆ
ಉಡುಪಿ, ಡಿ.18: ಕೆಳ ನ್ಯಾಯಾಲಯದಲ್ಲಿರುವಂತೆ ಸುಪ್ರೀಂ ಕೋರ್ಟ್ ನಲ್ಲಿ ಮೀಸಲಾತಿ ನೀತಿಯನ್ನು ಜಾರಿಗೆ ತಂದಿಲ್ಲ. ಇಲ್ಲಿ ಕೆಳವರ್ಗದವರ ಪ್ರಾತಿನಿಧ್ಯ ಇಲ್ಲದ ಕಾರಣ ಆ ವರ್ಗದ ಅಭಿಲಾಷೆ, ಆಶೋತ್ತರಗಳು ಕಡೆ ಗಣಿಸಲ್ಪಟ್ಟಿವೆ. ಆದುದರಿಂದ ಸುಪ್ರೀಂ ಕೋರ್ಟ್‌ನಲ್ಲಿಯೂ ಮೀಸಲಾತಿ ನೀತಿಯನ್ನು ಅನುಷ್ಠಾನಕ್ಕೆ ತರಬೇಕು. ಆಗ ಮಾತ್ರ ಈ ವರ್ಗಕ್ಕೆ ಹೆಚ್ಚು ನ್ಯಾಯ ಕೊಡಲು ಸಾಧ್ಯವಾಗುತ್ತದೆ ಎಂದು ಉಡುಪಿ ವೈಕುಂಠ ಬಾಳಿಗಾ ಕಾನೂನು ಮಹಾವಿದ್ಯಾಲಯದ ಪ್ರಾಂಶುಪಾಲ ಪ್ರೊ.ಪ್ರಕಾಶ್ ಕಣಿವೆ ಹೇಳಿದ್ದಾರೆ.
ಡಾ.ಬಿ.ಆರ್.ಅಂಬೇಡ್ಕರ್‌ರವರ 125ನೆ ಜನ್ಮ ದಿನಾ ಚರಣೆಯ ಪ್ರಯುಕ್ತ ಕರ್ನಾಟಕ ದಲಿತ ಸಂಘರ್ಷ ಸಮಿತಿ(ಅಂಬೇಡ್ಕರ್ ವಾದ) ವತಿಯಿಂದ ರವಿವಾರ ಆದಿಉಡುಪಿ ಅಂಬೇಡ್ಕರ್ ಭವನದಲ್ಲಿ ಆಯೋಜಿಸಲಾದ ‘ಸ್ವತಂತ್ರ ಭಾರತದಲ್ಲಿ ಮೀಸಲಾತಿ ಅನುಷ್ಠಾನ ಹಾಗೂ ನ್ಯಾಯಾಂಗ ಮತ್ತು ಖಾಸಗೀಕರಣದಲ್ಲಿ ಮೀಸಲಾತಿ’ ಕುರಿತು ಮೈಸೂರು ವಿಭಾಗ ಮಟ್ಟದ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.
ದೇಶದ ಸಾಮಾಜಿಕ, ಆರ್ಥಿಕ ಹಾಗೂ ರಾಜಕೀಯ ವ್ಯವಸ್ಥೆಯಲ್ಲಿ ಮೇಲ್ವರ್ಗದ ಅಸ್ತಿತ್ವವೇ ಮುಖ್ಯವಾಗಿದೆ. ಅವರ ಅನುಕೂಲ ಹಾಗೂ ಸ್ವಾರ್ಥಕ್ಕೇ ಬೇಕಾದ ರೀತಿಯಲ್ಲಿ ಈ ವ್ಯವಸ್ಥೆಯನ್ನು ರಚಿಸಲಾಗಿದೆ. ಇದರಿಂದ ಕೆಳ ವರ್ಗಗಳ ಜನರು ನ್ಯಾಯ ಹಾಗೂ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ. ಈ ರೀತಿಯ ತಾರತಮ್ಯ ಅನಾದಿ ಕಾಲದಿಂದಲೂ ಇದ್ದು, ಪ್ರಾಚೀನ ಭಾರತದ ಸಾಹಿತ್ಯವನ್ನು ಓದಿದಾಗ ಇದು ಸ್ಪಷ್ಟವಾಗುತ್ತದೆ ಮತ್ತು ಆ ಬಗ್ಗೆ ಸುಳಿವು ಸಿಗುತ್ತದೆ ಎಂದರು.
ಕೆಳವರ್ಗದ ಜನತೆ ತಮಗೆ ಸಿಗಬೇಕಾದ ನ್ಯಾಯ ಹಾಗೂ ಸೌಲಭ್ಯಗಳಿಂದ ವಂಚಿತರಾಗುತ್ತಿರುವ ವ್ಯವಸ್ಥೆ ಇಂದು ಕೂಡ ಮುಂದುವರೆದಿದೆ. ಪ್ರತಿಭೆ ಎಂಬುದು ಒಂದು ಜಾತಿ ಅಥವಾ ವ್ಯಕ್ತಿಯ ಸೋತ್ತಲ್ಲ. ಪ್ರತಿಯೊಬ್ಬರಲ್ಲಿಯೂ ಬೇರೆ ಬೇರೆ ಕ್ಷೇತ್ರಕ್ಕೆ ಸಂಬಂಧಿಸಿದ ಪ್ರತಿಭೆಗಳಿರುತ್ತದೆ. ಸಾಮಾಜಿಕ ನ್ಯಾಯ ನೀಡುವ ನಿಟ್ಟಿನಲ್ಲಿ ಪ್ರತಿಭೆಗೆ ಅವಕಾಶ ನೀಡಿ ಪ್ರೋತ್ಸಾಹಿಸಿ ಬೆಳೆಸುವ ಕಾರ್ಯ ಸರಕಾರ ಮಾಡಬೇಕಾಗಿದೆ. ಇದರಿಂದ ದಲಿತರು ಸಮಾಜದ ಮುಖ್ಯವಾಹಿನಿಗೆ ಬರಲು ಸಾಧ್ಯ. ರಾಜಕೀಯ ಹಾಗೂ ಶಿಕ್ಷಣ ಕ್ಷೇತ್ರದಲ್ಲಿ ಮೀಸಲಾತಿಯನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ಕಾರ್ಯ ಆಗಬೇಕು ಎಂದು ಅವರು ಅಭಿಪ್ರಾಯ ಪಟ್ಟರು.
ಇಂದು ಮೀಸಲಾತಿಯನ್ನು ರದ್ದುಗೊಳಿಸುವ ಹಾಗೂ ಅದರ ಪ್ರಮಾಣ ಇಳಿಸುವ ಪ್ರಯತ್ನ ನಡೆಯುತ್ತಿದೆ. ದಲಿತರ ಮೇಲೆ ನಡೆಯುತ್ತಿರುವ ದೌರ್ಜನ್ಯ, ಶೋಷಣೆ, ಅಸ್ಪಶ್ಯತೆ ಇಂದಿಗೂ ಮುಂದುವರೆದಿದೆ. ಈ ಅನಿಷ್ಠ ಪದ್ಧತಿ ಕಾನೂನಿನಲ್ಲಿ ನಿಷೇಧವಿದ್ದರೂ ಈಗಲೂ ಜೀವಂತವಾಗಿದೆ. ಆದುದ ರಿಂದ ಈ ಅನಿಷ್ಠ ಪದ್ಧತಿಗಳು ತೊಲಗುವವರೆಗೆ ಮೀಸಲಾತಿಯನ್ನು ಮುಂದುವರೆಸಬೇಕಾಗಿದೆ ಎಂದು ಅವರು ತಿಳಿಸಿದರು.
ಮೀಸಲಾತಿ ಎಂಬುದು ಸಂವಿಧಾನಬದ್ಧ ಕರ್ತವ್ಯ ಅಲ್ಲ. ಅದು ಸರಕಾರದ ವಿವೇಚನೆಗೆ ಬಿಟ್ಟದ್ದು ಎಂಬ ಸುಪ್ರೀಂ ಕೋರ್ಟ್ ತೀರ್ಪು ಮೀಸಲಾತಿ ವಿರೋಧಿ ಹಾಗೂ ವ್ಯತಿರಿಕ್ತವಾದ ಮತ್ತು ಕೆಳವರ್ಗದವರ ಹಕ್ಕುಗಳಿಗೆ ವಿರುದ್ಧವಾದ ತೀರ್ಪು ಆಗಿದೆ. ಇದು ನ್ಯಾಯ ಸಮ್ಮತವಲ್ಲ ಎಂದು ಅವರು ಹೇಳಿದರು.
ದಸಂಸ ಮೈಸೂರು ವಿಭಾಗದ ಪ್ರಧಾನ ಸಂಚಾಲಕ ಮಲ್ಲೇಶ್ ಅಂಬುಗ, ತುಮಕೂರು ಡಾ.ಬಿ.ಆರ್.ಅಂಬೇಡ್ಕರ್ ಸಂಶೋಧನಾ ಕೇಂದ್ರದ ನಿರ್ದೇಶಕ ಡಾ.ರಮೇಶ್, ಅಖಿಲ ಭಾರತ ಸಿಂಡಿಕೇಟ್ ಬ್ಯಾಂಕ್ ಎಸ್‌ಸಿಎಸ್‌ಟಿ ವೆಲ್‌ಫೇರ್ ಅಸೋಸಿಯೇಶನ್‌ನ ರಾಷ್ಟ್ರೀಯ ಅಧ್ಯಕ್ಷ ರಂಜನ್ ಕೇಳ್ಕರ್, ದಸಂಸ ರಾಜ್ಯ ಸಮಿತಿಯ ಖಜಾಂಚಿ ಪ್ರಕಾಶ್ ಬ್ಯಾಡರಹಳ್ಳಿ ಮುಖ್ಯ ಅತಿಥಿ ಗಳಾಗಿದ್ದರು.
ಅಧ್ಯಕ್ಷತೆಯನ್ನು ದಸಂಸ ರಾಜ್ಯ ಸಂಘಟನಾ ಸಂಚಾಲಕ ಸುಂದರ್ ಮಾಸ್ತರ್ ವಹಿಸಿದ್ದರು.
ದಸಂಸ ಹಾಸನ ಜಿಲ್ಲಾ ಪ್ರಧಾನ ಸಂಚಾಲಕ ಲಕ್ಷ್ಮಣ ಬೇಲೂರು, ಚಾಮರಾಜನಗರ ಜಿಲ್ಲಾ ಪ್ರಧಾನ ಸಂಚಾಲಕ ಸಿದ್ದರಾಜು, ಚಿಂತಕರಾದ ಪ್ರೊ.ಫಣಿರಾಜ್, ಜಿ.ರಾಜಶೇಖರ್, ದಲಿತ ಧಮನಿತರ ಸ್ವಾಭಿ ಮಾನ ಹೋರಾಟ ಸಮಿತಿಯ ಸಂಚಾಲಕ ಶ್ಯಾಮರಾಜ್ ಬಿರ್ತಿ, ನಿವೃತ್ತ ಬ್ಯಾಂಕ್ ಅಧಿಕಾರಿ ಎಸ್.ವಿಜಯ, ವಕೀಲ ಮಂಜುನಾಥ್ ವಿ., ಚಂದು ಎಲ್. ಬೆಳ್ತಂಗಡಿ ಉಪಸ್ಥಿತರಿದ್ದರು.
ದಸಂಸ ಉಡುಪಿ ಜಿಲ್ಲಾ ಪ್ರಧಾನ ಸಂಚಾಲಕ ಎಸ್.ಎಸ್.ಪ್ರಸಾದ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ದಸಂಸ ಮೈಸೂರು ವಿಭಾಗದ ಸಂಘಟನಾ ಸಂಚಾಲಕ ಹೂವಪ್ಪ ಮಾಸ್ತರ್ ವಂದಿಸಿದರು.
ಬದ್ಧತೆ ಇದ್ದರೆ ಕರಡು ತಿದ್ದುಪಡಿ ಮಂಡಿಸಿ
ಅಂಬೇಡ್ಕರ್ ಮತ್ತೊಮ್ಮೆ ಹುಟ್ಟಿ ಬಂದು ಮೀಸಲಾತಿ ನಿಲ್ಲಿಸಿ ಎಂದು ಹೇಳಿದರೂ ನಾವು ಮೀಸಲಾತಿಯನ್ನು ಮುಂದುರೆಸುತ್ತೇವೆ ಎಂಬ ಹೇಳಿಕೆ ಯನ್ನು ಪ್ರಧಾನಿ ನರೇಂದ್ರ ಮೋದಿ ಇತ್ತೀಚೆಗೆ ನೀಡಿದ್ದಾರೆ.
ಇವರಿಗೆ ಈ ವಿಚಾರದಲ್ಲಿ ಬದ್ಧತೆ ಹಾಗೂ ಇಚ್ಛಾಶಕ್ತಿ ಇದ್ದರೆ ಹಿಂದಿನ ಯುಪಿಎ ಸರಕಾರ ರಾಜ್ಯಸಭೆಯಲ್ಲಿ ಮಂಡಿಸಿ ಅನುಮೋದನೆ ಪಡೆದಿರುವ ಸಂವಿಧಾನದ 117 ಕರಡು ತಿದ್ದುಪಡಿ(ಮುಂಬಡ್ತಿಯಲ್ಲಿ ಮೀಸಲಾತಿ ನೀಡುವ)ಯನ್ನು ಲೋಕ ಸಭೆಯಲ್ಲಿ ಮಂಡಿಸಿ ಅನುಮೋದನೆ ಪಡೆದು ಅನುಷ್ಠಾನಕ್ಕೆ ತರಬೇಕು. ಈಗಿನ ಸರಕಾರಕ್ಕೆ ಇದಕ್ಕೆ ಯಾವುದೇ ಕಾನೂನು ತೊಡಕು ಇಲ್ಲದಿದ್ದರೂ ಕಾರಣ ಇಲ್ಲದೆ ವಿಳಂಬ ಮಾಡುತ್ತಿದೆ ಎಂದು ಪ್ರೊ.ಪ್ರಕಾಶ್ ಕಣಿವೆ ಟೀಕಿಸಿದರು