‘ಚಾಯ್‌ವಾಲಾ ’ಫೈನಾನ್ಸಿಯರ್ ಬಳಿ 10.5 ಕೋ.ರೂ.ಗಳ ಆಸ್ತಿ ಪತ್ತೆ
ಸೂರತ್,ಡಿ.18: ನೋಟು ರದ್ದತಿಯ ಬಳಿಕ ಕಪ್ಪುಹಣವನ್ನು ಬೇಟೆಯಾಡುತ್ತಿರುವ ಆದಾಯ ತೆರಿಗೆ ಇಲಾಖೆಯು ಮೊದಲು ಚಾಯ್‌ವಾಲಾ ಆಗಿದ್ದು ಬಳಿಕ ಲೇವಾದೇವಿಗಾರನಾಗಿರುವ ವ್ಯಕ್ತಿಗೆ ಸೇರಿದ ಸ್ಥಳಗಳ ಮೇಲೆ ದಾಳಿ ನಡೆಸಿ 10.50 ಕೋ.ರೂ.ಗಳ ಅಕ್ರಮ ಸಂಪತ್ತನ್ನು ಪತ್ತೆ ಹಚ್ಚಿ ವಶಪಡಿಸಿಕೊಂಡಿದೆ. ಕಾರ್ಯಾಚರಣೆ ಪ್ರಗತಿಯಲ್ಲಿದು, ಅಕ್ರಮ ಸಂಪತ್ತಿನ ಮೌಲ್ಯ ಇನ್ನಷ್ಟು ಹೆಚ್ಚಾಗುವ ಸಾಧ್ಯತೆಯಿದೆ.
ನಿನ್ನೆ ಈ ದಾಳಿಗಳನ್ನು ನಡೆಸಿದ ಐಟಿ ಅಧಿಕಾರಿಗಳು 1.05 ಕೋ.ರೂ.ಗಳ ಹೊಸ ನೋಟುಗಳು ಸೇರಿದಂತೆ 1.45 ಕೋ.ರೂ .ನಗದು ಹಣ, 1.49 ಕೋ.ರೂ.ಮೌಲ್ಯದ ಚಿನ್ನದ ಗಟ್ಟಿಗಳು ಮತ್ತು 4.92 ಕೋ.ರೂ.ಮೌಲ್ಯದ ಚಿನ್ನಾಭರಣಗಳು, 1.39 ಕೋ.ರೂ ಮೌಲ್ಯದ ಇತರ ಆಭರಣಗಳು ಹಾಗೂ 1.28 ಕೋ.ರೂ.ಗಳ ಬೆಳ್ಳಿಯನ್ನು ವಶ ಪಡಿಸಿಕೊಂಡಿದ್ದಾರೆ. ಇವುಗಳ ಒಟ್ಟೂ ಮೌಲ್ಯ 10.5 ಕೋ.ರೂ.ಗಳಾಗಿವೆ.
ತನಿಖೆಯು ಪ್ರಗತಿಯಲ್ಲಿರುವ ಹಿನ್ನೆಲೆಯಲ್ಲಿ ಈ ಫೈನಾನ್ಸಿಯರ್‌ನ ಹೆಸರನ್ನು ಬಹಿರಂಗಗೊಳಿಸಲು ಆದಾಯ ತೆರಿಗೆ ಅಧಿಕಾರಿಗಳು ನಿರಾಕರಿಸಿದರು.
ಅಧಿಕಾರಿಗಳು ಈವರೆಗೆ ಈತನಿಗೆ ಸೇರಿದ 13 ಬ್ಯಾಂಕ್ ಲಾಕರ್‌ಗಳನ್ನು ತೆರೆದಿದ್ದು, ಇನ್ನೂ ನಾಲ್ಕು ಲಾಕರ್‌ಗಳ ತಪಾಸಣೆ ನಡೆಸುವುದು ಬಾಕಿಯಿದೆ. ಹೀಗಾಗಿ ಅಕ್ರಮ ಸಂಪತ್ತಿನ ಮೌಲ್ಯ ಇನ್ನಷ್ಟು ಹೆಚ್ಚುವ ನಿರೀಕ್ಷೆಯಿದೆ.